ಸೂಡಾ ಭ್ರಷ್ಟಾಚಾರ ತನಿಖೆ ನಡೆಸುವಂತೆ ಜೆಡಿಎಸ್ ಒತ್ತಾಯ । JDS protest
ಸೂಡಾದಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಗೆ ಒತ್ತಾಯಿಸಿ ಜೆಡಿಎಸ್ ನಗರ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಸಹಾಯಕ ಅಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು. ಕೆ.ಬಿ.ಪ್ರಸನ್ನಕುಮಾರ್, ದೀಪಕ್‌ಸಿಂಗ್, ಕೆ.ಎನ್.ರಾಮಕೃಷ್ಣ ಇತರರಿದ್ದರು.
ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ(ಸೂಡಾ(Suda))ದಲ್ಲಿ ನಡೆದಿರುವ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಸಾರ್ವಜನಿಕ ಸಂಪನ್ಮೂಲ ಲೂಟಿ ಕುರಿತು ಸೂಕ್ತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಒತ್ತಾಯಿಸಿ ಬುಧವಾರ ಜೆಡಿಎಸ್(Jds) ನಗರ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ(protest) ನಡೆಸಿದರು.
ಕಾಂಗ್ರೆಸ್(Congress) ಸರ್ಕಾರ ಅಧಿಕಾರ ವಹಿಸಿಕೊಂಡ ದಿನದಿಂದ ಈವರೆಗಿನ ಪ್ರಾಧಿಕಾರದ ಕಾಮಗಾರಿ ಕುರಿತು ತನಿಖೆ ನಡೆಸಬೇಕು. ಅವಳಿ ನಗರಗಳ ಅಭಿವೃದ್ಧಿಗೆ ಕೆಲಸ ಮಾಡಬೇಕಾದ ಪ್ರಾಧಿಕಾರವು ಕಳಪೆ ಕಾಮಗಾರಿ, ಸುಳ್ಳು ಬಿಲ್ಲು, ಅವೈಜ್ಞಾನಿಕ ಕೆಲಸಗಳ ಮೂಲಕ ಸಾರ್ವಜನಿಕರ ತೆರಿಗೆ(Tax) ಹಣ ದುರುಪಯೋಗಪಡಿಸಿದೆ. ಪ್ರಾಧಿಕಾರದ ಆಯುಕ್ತರು, ಜಿಲ್ಲಾಧಿಕಾರಿ ಮತ್ತು ಲೋಕಾಯುಕ್ತರಿಗೆ ಈ ಬಗ್ಗೆ ಇಬ್ಬರು ಗುತ್ತಿಗೆದಾರರು ದೂರು ಸಲ್ಲಿಸಿದ್ದರೂ ತನಿಖೆ ನಡೆದಿಲ್ಲ ಎಂದು ಕಿಡಿಕಾರಿದರು.
ಊರುಗಡೂರು ಬಡಾವಣೆ(Urugadur Layout)ಸೇರಿ ಪ್ರಾಧಿಕಾರ ನಿರ್ಮಿಸುತ್ತಿರುವ ಬಡಾವಣೆಗಳ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ. ನೂತನ ಬಡಾವಣೆಗಳಲ್ಲಿ ಮೂಲಸೌಕರ್ಯ ಟೆಂಡರ್ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಎಲ್ಲ ಅವ್ಯವಹಾರಗಳ ವಿರುದ್ಧ ಗುತ್ತಿಗೆದಾರರಾದ ಗುರುಸಾಯಿ ಹಾಗೂ ಬಸವರಾಜ್ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ ಎಂದರು.
ಜಿಲ್ಲಾಡಳಿತ ಕಾಂಗ್ರೆಸ್ ಅವಧಿಯಲ್ಲಿ ನಡೆದ 91ಕ್ಕೂ ಹೆಚ್ಚು ಕಾಮಗಾರಿಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ, ದುರುಪಯೋಗವಾದ ಹಣವನ್ನು ತಪ್ಪಿತಸ್ಥರಿಂದ ಪ್ರಾಧಿಕಾರಕ್ಕೆ ಮರುಪಾವತಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ, ನಗರ ಅಧ್ಯಕ್ಷ ದೀಪಕ್‌ಸಿಂಗ್, ಪ್ರಮುಖರಾದ ನರಸಿಂಹ ಗಂಧದಮನೆ, ಗೀತಾ ಸತೀಶ್, ಸಂಜಯ್ ಕಶ್ಯಪ್, ರಘು ಬಾಲರಾಜ್, ಭವಾನಿ ನರಸಿಂಹ, ಶಾರದಮ್ಮ, ರವಿ ಕೋಳಿಗದ್ದೆ ಇತರರಿದ್ದರು.
12 ಕಾಮಗಾರಿಗಳಲ್ಲಿ ಅವ್ಯವಹಾರ
ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಈ ಕಾಮಗಾರಿಗಳು ನನ್ನ ಕಾಲದಲ್ಲಿ ಆಗಿದ್ದಲ್ಲ. ತನಿಖೆ ನಡೆಯುವುದಕ್ಕೆ ನನ್ನ ಅಭ್ಯಂತರವಿಲ್ಲ. ಎಲ್ಲ ಅಧ್ಯಕ್ಷರ ಕಾಲದ ಕಾಮಗಾರಿಗಳ ತನಿಖೆ ನಡೆಯಲಿ ಎಂದು ಹೇಳಿದ್ದರು. ಈಗ ಬೆಳಕಿಗೆ ಬಂದ 13 ಕಾಮಗಾರಿಯಲ್ಲಿ 12 ಕಾಮಗಾರಿ ಸುಂದರೇಶ್ ಅವರು ಅಧ್ಯಕ್ಷರಾಗಿದ್ದಾಗಲೇ ನಡೆದಿತ್ತು ಎನ್ನುವುದಕ್ಕೆ ದಾಖಲೆ ಇವೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು. ಸೂಡಾ ಅಧ್ಯಕ್ಷ ಸೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಈ ಹಗರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಈಗಾಗಲೇ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಮತ್ತು ಸರ್ಕಾರ ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.