ಶಿವಮೊಗ್ಗ ಮುಂದುವರಿದ ಜಿಲ್ಲೆಯಾದರೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೌಢ್ಯ, ಬಾಲ್ಯವಿವಾಹ ಪದ್ಧತಿಗಳಿವೆ. ಹಾಗಾಗಿ ವೈಜ್ಞಾನಿಕವಾಗಿ ಆಲೋಚನೆ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ‘ನಾನು ವಿಜ್ಞಾನಿ’ ಎಂಬ ವಿನೂತನ ಪ್ರಯೋಗ(Innovative experiment) ಆಯೋಜಿಸಲಾಗಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು. ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯನ್ನು ದೆವ್ವದ ನೆಪದಲ್ಲಿ ದೇವಸ್ಥಾನದಲ್ಲಿ ಇರಿಸಿದ್ದರು. ಅದನ್ನು ನೋಡಿ ಅಚ್ಚರಿ ಮತ್ತು ಆತಂಕವೂ ಆಯಿತು. ಹಾಗಾಗಿ ಮೌಢ್ಯ, ಕಂದಾಚಾರ, ಅವೈಜ್ಞಾನಿಕ ವಿಷಯಗಳನ್ನು ಜನಮಾನಸದಿಂದ ಹೊರಹಾಕುವುದು, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳನ್ನು ನಿವಾರಿಸಿ, ಖಚಿತವಾದ ವಿಷಯಗಳನ್ನು ಜನರಿಗೆ ತಲುಪಿಸಲು ಈ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಜಿಪಂ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಸನ್ನಿಧಿ ಚರ್ಚ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಫಾದರ್ ಪಿಂಟೋ ಉಪಸ್ಥಿತರಿದ್ದರು.