ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹ I demand for nagendra resignation

ಬಿ.ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬಿಜೆಪಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಬಿ.ವೈ.ರಾಘವೇಂದ್ರ ಮಾತನಾಡಿದರು. ಎನ್.ಕೆ.ಜಗದೀಶ್, ಮಾಲತೇಶ್, ಗುರುಮೂರ್ತಿ, ಶಿಲ್ಪಾ, ಸುರೇಖಾ ಮುರಳೀಧರ್, ಸಿದ್ದಲಿಂಗಪ್ಪ ಇದ್ದರು.
ಬಿ.ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬಿಜೆಪಿ ನಡೆಸುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಬಿ.ವೈ.ರಾಘವೇಂದ್ರ ಮಾತನಾಡಿದರು. ಎನ್.ಕೆ.ಜಗದೀಶ್, ಮಾಲತೇಶ್, ಗುರುಮೂರ್ತಿ, ಶಿಲ್ಪಾ, ಸುರೇಖಾ ಮುರಳೀಧರ್, ಸಿದ್ದಲಿಂಗಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮತ್ತೆ ಸಚಿವ ಸ್ಥಾನ ನೀಡಿರುವುದಕ್ಕೆ ಖಂಡನೆ
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಕ್ರೋಶ
  • ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ಧರಣಿ
ಶಿವಮೊಗ್ಗ:

ಭ್ರಷ್ಟಚಾರ ಆರೋಪ ಹೊತ್ತು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ಸೂತ್ರಧಾರ ಬಿ.ನಾಗೇಂದ್ರ (nagendra) ಅವರನ್ನು ಮತ್ತೆ ಸಚಿವರನ್ನಾಗಿ ನೇಮಕ ಮಾಡಿರುವ ಕಾಂಗ್ರೆಸ್‌ನ (congress) ನಿಜಬಣ್ಣ ಬಯಲಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಆಕ್ರೋಶ ವ್ಯಕ್ತಪಡಿಸಿದರು.

ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಧರಣಿಯಲ್ಲಿ ಎರಡನೇ ದಿನವಾದ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ಜಾಮೀನಿನ ಮೇಲೆ ಹೊರಗಡೆ ಇರುವ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಅತ್ಯಂತ ಖಂಡನೀಯ ಎಂದರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಎಸಗಿದ್ದ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, ಈಗ ಮತ್ತೆ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಭ್ರಷ್ಟ ಕಾಂಗ್ರೆಸ್‌ನ ಮುಖವಾಡ ಕಳಚಿ ಬಿದ್ದಿದೆ. ಈ ಸರ್ಕಾರ ಎಸ್ಸಿ, ಎಸ್ಟಿ ನಿಗಮದಲ್ಲಿ ರೈತರಿಗೆ ಸೇರಬೇಕಿದ್ದ ಗಂಗಾ ಕಲ್ಯಾಣದ ಹಣವನ್ನು ನುಂಗಿಹಾಕಿದೆ ಎಂದು ದೂರಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187ಕೋಟಿ ರೂ.ಗಳನ್ನು ಪೆಟ್ರೋಲ್ ಬಂಕ್ ಸೇರಿದಂತೆ ಇನ್ನಿತರ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿ ಅಲ್ಲಿಂದ ಬಂಗಾರದ ಬಿಸ್ಕೆಟ್, ನಗದು ಮತ್ತು ಹವಾಲಾ ರೂಪದಲ್ಲಿ 2024ರ ಸಂಸತ್ ಚುನಾವಣೆಗೆ ಹಾಗೂ ಹೈಕಮಾಂಡ್‌ಗೆ ನೀಡಲು ಕಾಂಗ್ರೆಸ್ ಬಳಸಿಕೊಂಡಿದೆ ಎಂಬ ಅಂಶ ಜಾರಿ ನಿರ್ದೇಶನಾಲಯದ ದೋಷಾರೋಪ ಪಟ್ಟಿಯಲ್ಲೇ ಇದೆ ಎಂದು ಹೇಳಿದರು.
ಹೀಗಿದ್ದರೂ ಯಾವ ಅರ್ಹತೆ ಮೇಲೆ ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ ಎಂದು ಪ್ರಶ್ನಿಸಿದರು. ವಾಲ್ಮೀಕಿ ಸಮುದಾಯದ ಬೇರೆ ಯಾರಿಗಾದರೂ ಮಂತ್ರಿ ಸ್ಥಾನ ಕೊಡಲಿ. ಆದರೆ ನಾಗೇಂದ್ರ ಅವರನ್ನು ಮುಂದುವರಿಸಿದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲತೇಶ್, ನಗರ ಮಹಿಳಾ ಮೋರ್ಚಾ ಕಾರ್ಯದರ್ಶಿ ಕೆ.ಎನ್.ಶಿಲ್ಪಾ ಸತೀಶ್, ಪ್ರಮುಖರಾದ ಶಾಂತಾ ಸುರೇಂದ್ರ, ಸುರೇಖಾ ಮುರಳೀಧರ್ ಮುಂತಾದವರಿದ್ದರು.

ಅನುದಾನ ಲೂಟಿಯೇ ಸಾಧನೆ

ಬಿಜೆಪಿ ಸರ್ಕಾರ ಇದ್ದಾಗ ಮಾಡಿದ ಯೋಜನೆಗಳನ್ನು ಅಲ್ಪ ಸ್ವಲ್ಪ ಮುಗಿಸಿದ್ದು ಬಿಟ್ಟರೆ ಒಂದೇ ಒಂದು ಹೊಸ ಯೋಜನೆಗೆ ಗುದ್ದಲಿ ಪೂಜೆ ಮಾಡಿಲ್ಲ. ಗ್ಯಾರಂಟಿ ಹೆಸರಲ್ಲಿ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದ ಅನುದಾನವನ್ನು ಲೂಟಿ ಹೊಡೆದಿದ್ದೇ ಈ ಸರ್ಕಾರದ ಸಾಧನೆ ಎಂದು ಬಿ.ವೈ.ರಾಘವೇಂದ್ರ ಟೀಕಿಸಿದರು.
ಶಕ್ತಿ ಯೋಜನೆಯಲ್ಲೂ ಮೋಸ ಮಾಡಿದರು. ಬಸ್ ಟಿಕೆಟ್ ದರ ಏರಿಸಲಾಯಿತು. ವಿದ್ಯಾರ್ಥಿಗಳಿಗೂ ಬಸ್ ಸೌಕರ್ಯ ಇಲ್ಲವಾಗಿದೆ. ಗೃಹಲಕ್ಷ್ಮೀ ಯೋಜನೆಯ ಐದು ಕೋಟಿ ರೂ. ಹಣವನ್ನು ನಾಪತ್ತೆ ಮಾಡಿದ್ದಾರೆ. ಉಚಿತ ವಿದ್ಯುತ್ ಎಂದು ಘೋಷಿಸಿ ದರವನ್ನು ಏರಿಸಿದ್ದಾರೆ. ಲೆಕ್ಕಕ್ಕೆ ಮಾತ್ರ ಚೆಕ್ಕುಲಿ ಕಾಣುತ್ತಿದೆ. ಒಳಗಿನ ಸುರುಳಿಯನ್ನು ತಿಂದು ಮುಗಿಸಿದ್ದಾರೆ. ಇದು ಕಾಂಗ್ರೆಸ್ ಆಡಳಿತ ವೈಖರಿ ಎಂದು ವಾಗ್ದಾಳಿ ನಡೆಸಿದರು.
"

ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ, ಸುಲಿಗೆ ದರೋಡೆಗಳು ಮಿತಿ ಮೀರಿದೆ. ಗೋಹತ್ಯೆ ನಿರಂತರವಾಗಿ ಸಾಗುತ್ತಿದ್ದು, ತಡೆಯಲು ಹೋದ ಯುವಕರ ಮೇಲೆ ಶಿಕಾರಿಪುರ ತಾಲೂಕಿನಲ್ಲಿ ಇತ್ತೀಚೆೆಗೆ ಹಲ್ಲೆ ನಡೆದಿದೆ. ಇದನ್ನು ಖಂಡಿಸಿ ಆ.19ರಂದು ಶಿಕಾರಿಪುರ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ಸಂಪೂರ್ಣ ಸಹಕಾರವಿದೆ.

— ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net