ಮೃತ ‘ಗೃಹಲಕ್ಷ್ಮಿ’ಯರಿಗೂ ಗ್ಯಾರಂಟಿ! I gurhalakshmi gurrantee

ಗೃಹಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ, ಪ್ರಿಯಾಂಕಾ ಗಾಂಧಿ, ಡಿ.ಕೆ.ಶಿವಕುಮಾರ್ ಮತ್ತಿತರರು ಘೋಷಣೆ ಮಾಡಿದ ಸಂದರ್ಭ.
ಗೃಹಲಕ್ಷ್ಮಿ ಯೋಜನೆಯನ್ನು ಸಿದ್ದರಾಮಯ್ಯ, ಪ್ರಿಯಾಂಕಾ ಗಾಂಧಿ, ಡಿ.ಕೆ.ಶಿವಕುಮಾರ್ ಮತ್ತಿತರರು ಘೋಷಣೆ ಮಾಡಿದ ಸಂದರ್ಭ.
Published on

ಪ್ರಮುಖ ಮುಖ್ಯಾಂಶಗಳು

  • ಮರಣ ಹೊಂದಿದ 9 ಸಾವಿರ ಮಂದಿ ಖಾತೆಗೆ ಹಣ
  • ಶಿವಮೊಗ್ಗ ಜಿಲ್ಲೆಯಲ್ಲಿ 3 ಕೋಟಿ ರೂ.ಗೂ ಹೆಚ್ಚು ನಷ್ಟ
  • ಹಣ ಮರಳಿ ಪಡೆಯುವುದೇ ಸವಾಲು
  • ಸಹಕಾರ ನೀಡದ ಕುಟುಂಬಸ್ಥರು
ಅರವಿಂದ ಅಕ್ಲಾಪುರ ಶಿವಮೊಗ್ಗ
ಎಲ್ಲರಿಗೂ ಉಚಿತ ಎಂಬ ಪರಿಕಲ್ಪನೆಯಲ್ಲಿ ಜಾರಿಗೆ ಬಂದ ರಾಜ್ಯ ಸರ್ಕಾರದ ಗ್ಯಾರಂಟಿ (gurrantee) ಯೋಜನೆಗಳು (schemes) ದುರ್ಬಳಕೆಯಾಗಿದ್ದೇ ಹೆಚ್ಚು. ಅದರಲ್ಲೂ ಜಿಲ್ಲೆಯ 9,247 ಮಹಿಳೆಯರು ಮೃತಪಟ್ಟಿದ್ದರೂ ಅವರ ಖಾತೆಗೆ ಗೃಹಲಕ್ಷ್ಮಿ (gruhalakshmi) ಹಣ ಜಮೆಯಾಗಿದೆ.
ಮೃತಪಟ್ಟ 9,247 ಮಹಿಳೆಯರ ಪೈಕಿ 3,599 ಮಂದಿಯ ಖಾತೆಗೆ ಜಮೆಯಾಗಿದ್ದ ಹಣವನ್ನು ಸಂಬಂಧಿಕರು ಡ್ರಾ ಮಾಡಿಕೊಂಡಿದ್ದಾರೆ. ಹೀಗೆ ದುರ್ಬಳಕೆಯಾದ ಹಣ 3,79,78,000 ರೂ. ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ 63.63 ಲಕ್ಷ ರೂ. ಮಾತ್ರ ವಸೂಲಿ ಮಾಡಿಕೊಂಡಿದ್ದಾರೆ.
ಮರಣ ಹೊಂದಿದವರ ದಾಖಲೆಗಳು ತಡವಾಗಿ ಇಲಾಖೆ ಕೈಗೆ ಸಿಗುತ್ತಿರುವುದರಿಂದ ಮಾಸಿಕ ಹಣ 2 ಸಾವಿರ ರೂ. ಜಮಾ ಆಗುತ್ತಲ್ಲೇ ಇತ್ತು. ಮರಣ ಹೊಂದಿದವರ ಖಾತೆಗೆ ಜಮೆಯಾಗಿರುವ ಗೃಹಲಕ್ಷ್ಮಿ ಹಣವನ್ನು ಮರಳಿ ಪಡೆಯುವುದು ಕಾನೂನಾತ್ಮಕವಾಗಿಯೂ ಸವಾಲಾಗಿದೆ.
ಬ್ಯಾಂಕ್‌ಗಳ ಮೂಲಕ ಖಾತೆಗಳನ್ನು ಫ್ರಿಜ್ ಮಾಡುವುದು ಮತ್ತು ದುರ್ಬಳಕೆಯಾದ ಹಣವನ್ನು ಮರುಪಡೆಯಲು ಫಲಾನುಭವಿಗಳ ಮನೆಗಳಿಗೆ ತೆರಳಿ ವಸೂಲಿ ಮಾಡುವ ಪ್ರಕ್ರಿಯೆಗೆ ಸಾಕಷ್ಟು ಅಡೆತಡೆಗಳಿವೆ. ಮೃತಪಟ್ಟವರ ಖಾತೆಗೆ ಜಮಾ ಆಗಿರುವ ಹಣವನ್ನು ವಾಪಸ್ ಪಡೆಯಲು ಸರ್ಕಾರ ಮುಂದಾಗಿದ್ದರೂ ಇದಕ್ಕೆ ಸ್ಪಷ್ಟ ನಿಯಮಗಳು ಕೂಡ ಇಲ್ಲ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನಡೆಸಿದ ತಾಂತ್ರಿಕ ಪರಿಶೀಲನೆಯ ವೇಳೆ ತಾಂತ್ರಿಕ ದೋಷಗಳು ಮತ್ತು ಮೃತರ ಮಾಹಿತಿ ಸಕಾಲದಲ್ಲಿ ಪರಿಷ್ಕರಣೆ ಆಗದಿರುವ ಕಾರಣ ಮೃತರ ಖಾತೆಗಳಿಗೆ ಹಣ ಪಾವತಿಯಾಗಿರುವ ಅಂಶ ಬೆಳಕಿಗೆ ಬಂದಿದೆ.

ಎಟಿಎಂ ಮೂಲಕ ಡ್ರಾ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಯ ಬ್ಯಾಂಕ್ ಇಲ್ಲವೆ ಅಂಚೆ ಕಚೇರಿ ಖಾತೆಗೆ ಮಾಸಿಕ ಎರಡು ಸಾವಿರ ರೂ. ಜಮೆಯಾಗುತ್ತಿತ್ತು. ಯೋಜನೆ ಆರಂಭವಾದ ಬಳಿಕ ಮೃತರಾದವರ ಬಗ್ಗೆ ಅವರ ಕುಟುಂಬದವರು ಅಂಚೆ ಕಚೇರಿ ಇಲ್ಲವೇ ಬ್ಯಾಂಕ್‌ಗೆ ಮಾಹಿತಿ ನೀಡಿ ಖಾತೆಯನ್ನು ಬಂದ್ ಮಾಡಿಸಿಲ್ಲ. ಹೀಗಾಗಿ ಸರ್ಕಾರ ಬಿಡುಗಡೆ ಮಾಡಿದಾಗಲೆಲ್ಲ ಮೃತರ ಖಾತೆಗೆ ಹಣ ಹೋಗಿದೆ. ಬಹುಪಾಲು ಹಣವನ್ನು ಈಗಾಗಲೇ ಮೃತರ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡಿಕೊಳ್ಳಲಾಗಿದೆ. ಹೀಗೆ ಡ್ರಾ ಮಾಡಿಕೊಂಡ ಹಣ ಕೋಟಿ ಲೆಕ್ಕದಲ್ಲಿದೆ. ಇದನ್ನು ಮರಳಿ ಪಡೆಯುವುದು ಸರ್ಕಾರಕ್ಕೆ ಸವಾಲಿನ ಕೆಲಸ.

ಮರಳಿ ಬಂದಿದ್ದು 63.63 ಲಕ್ಷ ರೂ.

ಗೃಹಲಕ್ಷ್ಮಿ ಫಲಾನುಭವಿಗಳ ಮಾಹಿತಿ ಪರಿಷ್ಕರಣೆಗೆ ಸರ್ಕಾರ ಮುಂದಾದ ಬಳಿಕ ಪ್ರತಿ ಜಿಲ್ಲೆಯಲ್ಲೂ ಮೃತಪಟ್ಟವರ ಖಾತೆಗೆ ಹಣ ಜಮಾ ಆಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಫಲಾನುಭವಿ ಖಾತೆಯಲ್ಲಿದ್ದ ಗೃಹಲಕ್ಷ್ಮಿ ಹಣವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಆದೇಶಿಸಿತ್ತು. ಅದರ ಪ್ರಕಾರ ಇದುವರೆಗೆ ಜಿಲ್ಲೆಯಲ್ಲಿ ಮೃತರ ಖಾತೆಯಲ್ಲಿದ್ದ ಒಟ್ಟು 63,63,864 ರೂ.ಗಳನ್ನು ಮರಳಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಲಾಗಿದೆ. ಇನ್ನುಳಿದ 3,16,14,136 ರೂ. ಮರಳಿ ಪಡೆಯುವ ಯತ್ನ ಜಾರಿಯಲ್ಲಿದೆ.

ಸ್ಥಳೀಯವಾಗಿ ಸಮಸ್ಯೆ

ಮೃತಪಟ್ಟ ಫಲಾನುಭವಿಯನ್ನು ಗುರುತಿಸಿ ಮಾಹಿತಿ ಕಲೆ ಹಾಕುವ ಕೆಲಸವನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ವಹಿಸಲಾಗಿದೆ. ಸ್ಥಳೀಯರೇ ಆಗಿರುವ ಕಾರ್ಯಕರ್ತೆಯರು ಮೇಲಧಿಕಾರಿಗಳಿಗೆ ಪ್ರಾಮಾಣಿಕವಾಗಿ ಮಾಹಿತಿ ನೀಡಿದರೆ ಮೃತರ ಕುಟುಂಬದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಹೀಗಾಗಿ ಅನೇಕರು ಸುಮ್ಮನೆ ದಿನದೂಡುತ್ತಿದ್ದಾರೆ. ಹೀಗಾಗಿ ಸರ್ಕಾರದ ಉದ್ದೇಶ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.

ಪ್ರಾಧಿಕಾರದ ಲೋಪ

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಎಲ್ಲ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲೂ ಪ್ರಾಧಿಕಾರವನ್ನು ರಚಿಸಿ ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿತ್ತು. ಈ ಪ್ರಾಧಿಕಾರ ಸಭೆ ನಡೆಸಿ ಗ್ಯಾರಂಟಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ ಎಂದು ನಿರಂತರವಾಗಿ ಒತ್ತಡ ಹೇರಿತೇ ಹೊರತು, ಮೃತಪಟ್ಟವರನ್ನು ಯೋಜನೆಯಿಂದ ಕೈ ಬಿಡುವುದು ಹೇಗೆ ಎಂಬ ಬಗ್ಗೆ ಚಿಂತಿಸಲಿಲ್ಲ. ಯಾವಾಗ ಬೊಕ್ಕಸದ ಮೇಲೆ ಒತ್ತಡ ಹೆಚ್ಚಿತೋ ಆಗ ಮೃತಪಟ್ಟವರ ಮಾಹಿತಿ ಸಂಗ್ರಹಕ್ಕೆ ನಿರ್ಧರಿಸಲಾಯಿತು. ಆದರೆ ಈಗ ಮೃತರ ಖಾತೆಯಿಂದ ಡ್ರಾ ಆಗಿರುವ ಹಣವನ್ನು ಮರಳಿ ಪಡೆಯುವುದು ಸುಲಭವಲ್ಲ ಎಂಬುದು ಅಧಿಕಾರಿಗಳ ಗಮನಕ್ಕೂ ಬಂದಿದೆ.

ಗಿವ್ ಇಟ್ ಅಪ್ ಶೂನ್ಯ

ಆರ್ಥಿಕವಾಗಿ ಸದೃಢವಾಗಿರುವ ಕುಟುಂಬದ ಮಹಿಳೆಯರು ಹಾಗೂ ಆರ್ಥಿಕ ಸ್ವಾವಲಂಬನೆ ಸಾಧಿಸಿರುವ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ಎರಡು ಸಾವಿರ ರೂ. ಪಡೆಯುವುದನ್ನು ನಿರಾಕರಿಸಬಹುದು ಎಂದು ಕೆಲ ತಿಂಗಳ ಹಿಂದೆ ರಾಜ್ಯ ಸರ್ಕಾರ ನೀಡಿದ್ದ ಕರೆಗೂ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಕೇವಲ 6 ಮಂದಿ ಮಾತ್ರ ಯೋಜನೆಯಿಂದ ಕೈ ಬಿಡುವಂತೆ ಪತ್ರ ಬರೆದಿದ್ದರು. ಆದರೆ ಇವರೆಲ್ಲರೂ ಫಲಾನುಭವಿಗಳಾದ ಬಳಿಕ ಸರ್ಕಾರಿ ಉದ್ಯೋಗ ಸಿಕ್ಕಿತ್ತು. ಹೀಗಾಗಿ ಮುಂದೆ ಸಮಸ್ಯೆಯಾಗದಂತೆ ಮುಂಜಾಗ್ರತೆಯಿಂದ ಪತ್ರ ಬರೆದಿದ್ದರು. ವಾಸ್ತವವಾಗಿ ಗಿವ್ ಇಟ್ ಅಪ್‌ಗೆ ಜಿಲ್ಲೆಯಲ್ಲಿ ಸಿಕ್ಕಿದ್ದು ಶೂನ್ಯ ಫಲಿತಾಂಶ.
"

ಅಂಗನವಾಡಿ ಕಾರ್ಯಕರ್ತೆಯರಿಂದ ಮೃತರ ಮಾಹಿತಿ ಪಡೆದು ಸೇವಾ ಸಿಂಧು ಪೋರ್ಟಲ್‌ನಲ್ಲಿ ನಮೂದಿಸಲು ಸೂಚಿಸಲಾಗಿದೆ. ಜೊತೆಗೆ ಈಗಾಗಲೇ ಜಮೆಯಾದ ಹಣವನ್ನು ಸರ್ಕಾರಕ್ಕೆ ಪಾವತಿಸಲು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಲಾಗುತ್ತದೆ.

— ಭಾರತಿ ಬಣಕಾರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net