ಆರ್‌ಟಿಒ ಕಚೇರಿ ಸಮಸ್ಯೆಗೆ ಪರಿಹಾರ ಕಲ್ಪಿಸಿ I rto office
ಶಿವಮೊಗ್ಗ ಆರ್‌ಟಿಒ ಕಚೇರಿಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕಟದ ಕೆ.ವಿ.ವಸಂತ್ ಕುಮಾರ್, ಜನಮೇಜಿ ರಾವ್. ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ವಿನೋದ್ ಪೈ, ರವೀಂದ್ರ ಪೈ, ಕೇಶವ ಮೂರ್ತಿ ಮುಂತಾದವರು ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಆರ್‌ಟಿಒ (rto) ಕಚೇರಿಯಲ್ಲಿ (office) ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪ್ರಮುಖರು ಗುರುವಾರ ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ (protest) ನಡೆಸಿದರು.
ಆರ್‌ಟಿಒ ಆವರಣದಲ್ಲಿರುವ ಸಾರ್ವಜನಿಕ ಶೌಚಗೃಹಕ್ಕೆ ಬೀಗ ಹಾಕಲಾಗಿದೆ. ಇದರಿಂದ ಕಚೇರಿಗೆ ಬರುವ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರಿ ಸೇವಾ ಶುಲ್ಕದ ಫಲಕವನ್ನು ಒಂದು ಮೂಲೆಯಲ್ಲಿ ಅಳವಡಿಸಲಾಗಿದೆ. ಫಲಕ ಸಮರ್ಪಕವಾಗಿ ಕಾಣುವಂತೆ ಅಳವಡಿಸಬೇಕು ಎಂದು ಆಗ್ರಹಿಸಿದರು.
ಆರ್‌ಟಿಒ ಕಚೇರಿಯಲ್ಲಿ ಕೆಲವು ಅನಧಿಕೃತ ವ್ಯಕ್ತಿಗಳು ಕಚೇರಿ ಕೆಲಸಗಳಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ಟ್ಯಾಕ್ಸಿ ಹಾಗೂ ಆಟೋ ಮಾಲೀಕರು ಸೇರಿ ಸಾರ್ವಜನಿಕರಿಂದ ಹಲವು ದೂರುಗಳು ಕೇಳಿಬರುತ್ತಿವೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಸ್ ಹಾಗೂ ಲಾರಿಗಳು ಕರ್ಕಶ ಹಾರ್ನ್ ಬಳಕೆ ಮಾಡುತ್ತಿರುವುದರಿಂದ ನಗರದಲ್ಲಿ ಶಬ್ದಮಾಲಿನ್ಯ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರಿಗೆ ಇಲಾಖೆ ಹಾಗೂ ಸಂಬಂಧಿತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಟ್ಯಾಕ್ಸಿಗಳಲ್ಲಿ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯವಾಗಿದ್ದರೂ ಶಿವಮೊಗ್ಗದಲ್ಲಿ ಅಧಿಕೃತ ವಿತರಕರು ಲಭ್ಯವಿಲ್ಲ. ಅಲ್ಲದೆ ಪ್ಯಾನಿಕ್ ಬಟನ್‌ನಿಂದ ಬರುವ ತುರ್ತು ಸಂಕೇತಗಳನ್ನು ಸ್ವೀಕರಿಸಿ ಕ್ರಮ ಕೈಗೊಳ್ಳಲು ನಿಯಂತ್ರಣ ಕೊಠಡಿಯೂ ಇಲ್ಲ. ಹಾಗಾಗಿ ವಿಶೇಷವಾಗಿ ಒಂದು ಅಥವಾ ಎರಡು ವಾಹನಗಳನ್ನು ಹೊಂದಿರುವ ಸಣ್ಣ ಟ್ಯಾಕ್ಸಿ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವೇದಿಕೆ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ಪ್ರಮುಖರಾದ ಜನಮೇಜಿ ರಾವ್, ವಿನೋದ್ ಪೈ, ಸೀತಾರಾಮ್, ರವೀಂದ್ರ ಪೈ, ರಾಜು, ಕೇಶವ ಮೂರ್ತಿ, ವೆಂಕಟೇಶ್ , ತಿಮ್ಮಪ್ಪ, ಚಂದ್ರಶೇಖರ್ ಗೌಡ, ರವಿ ಇತರರಿದ್ದರು.