ಯುರಿಯಾ ದುರ್ಬಳಕೆ ತಡೆಗೆ ಎಫ್‌ಐಡಿ ಅಸ್ತ್ರ I uria fid

ಭತ್ತದ ಗದ್ದೆಗೆ ಯೂರಿಯಾ ಹಾಕುತ್ತಿರುವ ರೈತ
ಭತ್ತದ ಗದ್ದೆಗೆ ಯೂರಿಯಾ ಹಾಕುತ್ತಿರುವ ರೈತ
Published on

ಪ್ರಮುಖ ಮುಖ್ಯಾಂಶಗಳು

  • ಭವಿಷ್ಯದಲ್ಲಿ ತೊಂದರೆಯಾಗದಂತೆ ಕೃಷಿ ಇಲಾಖೆ ಕ್ರಮ
  • ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಣೆ
  • ಫಾರ್ಮರ್ ಐಡಿ ಪರಿಶೀಲಿಸಿ ಗೊಬ್ಬರ ಪೂರೈಕೆ
ಶಿವಮೊಗ್ಗ: ಯೂರಿಯಾ (uria) ರಸಗೊಬ್ಬರ ಕಡಿಮೆ ಬೆಲೆಗೆ ರೈತರಿಗೆ ದೊರೆಯುವಂತೆ ಆಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಸಬ್ಸಿಡಿ (subsidy) ದರದಲ್ಲಿ ಅದನ್ನು ರೈತರಿಗೆ ಪೂರೈಕೆ ಮಾಡುತ್ತಿದೆ. ಆದರೆ ಅದನ್ನು ಕೆಲವರು ದುರ್ಬಳಕೆ (misuse) ಮಾಡಿಕೊಂಡು ಕೃಷಿ ಬದಲು ಕೈಗಾರಿಕಾ ಉದ್ದೇಶಗಳಿಗೆ ಬಳಸಿ ಹೆಚ್ಚಿನ ಹಣ ಗಳಿಸುವ ಹುನ್ನಾರ ನಡೆಸುತ್ತಿದ್ದಾರೆ. ಈಗ ಅದಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆ ಎಫ್‌ಐಡಿ ಮೊರೆ ಹೋಗಿದೆ.
ಇನ್ಮುಂದೆ ಮುಂದೆ ಫಾರ್ಮರ್ ಐಡಿ (ಎಫ್‌ಐಡಿ) ಹೊಂದಿದವರಿಗೆ ಮಾತ್ರ ಯೂರಿಯಾ ದೊರೆಯಲಿದೆ. ಅದೂ ಆ ರೈತ ಹೊಂದಿರುವ ಜಮೀನಿಗೆ ಅನುಗುಣವಾದ ಪ್ರಮಾಣದಲ್ಲಿ. ಕೃಷಿ ನೆಪದಲ್ಲಿ ಯೂರಿಯಾ ದಾಸ್ತಾನು ಮಾಡಿ ಅದನ್ನು ಅನ್ಯ ಉದ್ದೇಶಕ್ಕೆ ಬಳಸುವುದಕ್ಕೆ ಇದರಿಂದ ತಡೆ ಬೀಳಲಿದೆ.
ಪ್ರತಿಯೊಬ್ಬ ರೈತರು ಫಾರ್ಮರ್ ಐಡಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಕೆಲ ತಿಂಗಳಿನಿಂದ ಕೃಷಿ ಹಾಗೂ ತೋಟಗಾರಿಕೆ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಈ ಎಫ್‌ಐಡಿಯಲ್ಲಿ ರೈತ ಹೊಂದಿರುವ ಜಮೀನಿನ ವಿಸ್ತೀರ್ಣ, ಗ್ರಾಮ, ಸರ್ವೇ ನಂಬರ್, ಬೆಳೆಯ ವಿಧ ಎಲ್ಲವೂ ನಮೂದಾಗಿರುತ್ತದೆ.
ಎಫ್‌ಐಡಿಗೆ ರೈತನ ಬ್ಯಾಂಕ್ ಖಾತೆ ವಿವರ ಹಾಗೂ ಆಧಾರ್ ಸಂಖ್ಯೆಯೂ ಜೋಡಣೆಯಾಗಿರುತ್ತದೆ. ಹೀಗಾಗಿ ಯೂರಿಯಾ ಖರೀದಿಸುವ ರೈತನ ಖಾತೆಗೆ ನೇರವಾಗಿ ಸಬ್ಸಿಡಿ ಮೊತ್ತ ಜಮೆಯಾಗುವ ವ್ಯವಸ್ಥೆಯಿದೆ. ಇದರಿಂದ ಪಾರದರ್ಶಕತೆ ಸಾಧ್ಯವಾಗುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕೃಷಿ ಇಲಾಖೆ ಯೂರಿಯಾ ದುರ್ಬಳಕೆಗೆ ಪರಿಣಾಮಕಾರಿ ಹೆಜ್ಜೆ ಇರಿಸಿದೆ.


ಸರ್ವೇ ಸಂಖ್ಯೆ ಜೋಡಣೆಗೆ ಅವಕಾಶ

ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರವನ್ನು ಖರೀದಿಸಲು ಎಫ್‌ಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯ. 2026-27ನೇ ಸಾಲಿನ ಮುಂಗಾರು ಹಂಗಾಮಿನಿಂದ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣ್‌ಕುಮಾರ್ ತಿಳಿಸಿದ್ದಾರೆ. ರೈತರ ಜಮೀನಿನ ವಿಸ್ತೀರ್ಣ ಮತ್ತು ಬೆಳೆದ ಬೆಳೆಗೆ ಅನುಗುಣವಾಗಿ ಎಷ್ಟು ಪ್ರಮಾಣದ ಗೊಬ್ಬರ ಅಗತ್ಯ ಇದೆಯೋ ಅಷ್ಟನ್ನು ಮಾತ್ರ ಕೆ-ಕಿಸಾನ್ ತಂತ್ರಾಂಶದ ಮೂಲಕ ವಿತರಿಸಲಾಗುತ್ತದೆ. ಈವರೆಗೆ ಎಫ್‌ಐಡಿ ಹೊಂದಿರದ ರೈತರು ತಕ್ಷಣವೇ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಆಧಾರ್ ಕಾರ್ಡ್‌ನೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ ಎಫ್‌ಐಡಿ ಹೊಂದಿರುವ ರೈತರು ತಮ್ಮ ಎಲ್ಲ ಸರ್ವೇ ನಂಬರ್‌ಗಳನ್ನು ಅದಕ್ಕೆ ಜೋಡಣೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಮಾರಾಟಕ್ಕೆ ಕೆಲ ನಿಬಂಧನೆ

ಅಧಿಕೃತ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಕೆ-ಕಿಸಾನ್ ತಂತ್ರಾಂಶದಲ್ಲಿ ರೈತರ ಎಫ್‌ಐಡಿ ನಮೂದಿಸಿಯೇ ಗೊಬ್ಬರ ಮಾರಾಟ ಮಾಡಬೇಕು. ಈ ಸಂಬಂಧ ಇಲಾಖಾಧಿಕಾರಿಗಳಿಗೆ ತರಬೇತಿ ಹಾಗೂ ಮಾಹಿತಿ ನೀಡಲಾಗಿದೆ. ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಎಲ್ಲ ಒ ಫಾರಂ ನವೀಕರಣಗೊಳಿಸಿಕೊಳ್ಳಬೇಕು. ಒಂದು ವೇಳೆ ಮಾರಾಟಗಾರರು ಒ ಫಾರಂಗಳ ನೋಂದಣಿ ಇಲ್ಲದೆ ಮಾರಾಟ ಮಾಡಿದಲ್ಲಿ, ನಿಯಮ ಮೀರಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಥವಾ ಕೃಷಿಯೇತರ ಉದ್ದೇಶಕ್ಕೆ ಗೊಬ್ಬರ ನೀಡಿದರೆ ಅಂತಹ ಮಾರಾಟಗಾರರ ಪರವಾನಗಿ ರದ್ದುಗೊಳಿಸುವುದಾಗಿ ಡಾ. ಕಿರಣ್‌ಕುಮಾರ್ ಎಚ್ಚರಿಸಿದ್ದಾರೆ.

ಅನ್ಯ ಬಳಕೆಗೂ ಬೇಡಿಕೆ

ಯೂರಿಯಾ ರಸಗೊಬ್ಬರ ಕೃಷಿ ಕ್ಷೇತ್ರಕ್ಕೆ ಎಷ್ಟು ಅವಶ್ಯವೋ ಅದೇ ರೀತಿ ಯೂರಿಯಾ ಸಂಯೋಜಿತ ಅನೇಕ ರಾಸಾಯನಿಕಗಳಿಗೆ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಬೇಡಿಕೆಯಿದೆ. ಅನೇಕ ಕೈಗಾರಿಕೆಗಳಲ್ಲಿ ಇದನ್ನು ಬಳಸಲಾಗುತ್ತದೆ. ಪ್ಲಾಸ್ಟಿಕ್ ತಯಾರಿಗೂ ಇದು ಅವಶ್ಯವಾಗಿದೆ. ಔಷಧ ವಿಜ್ಞಾನ ಕ್ಷೇತ್ರದಲ್ಲೂ ಯೂರಿಯಾ ಸಂಯೋಜಿತ ವಸ್ತುಗಳ ಬಳಕೆಯಾಗುತ್ತದೆ. ಆದರೆ ಕೃಷಿ ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರದಲ್ಲಿ ಬಳಸಲಾಗುವ ಯೂರಿಯಾಕ್ಕೆ ಸರ್ಕಾರದಿಂದ ಸಹಾಯಧನ ಸಿಗುವುದಿಲ್ಲ. ಇದರಿಂದ ಉತ್ಪಾದನಾ ವೆಚ್ಚ ಜಾಸ್ತಿಯಾಗುತ್ತದೆ. ಹೀಗಾಗಿ ಕೃಷಿ ಕ್ಷೇತ್ರದ ಲೆಕ್ಕ ತೋರಿಸಿ ಅನ್ಯ ಬಳಕೆಗೆ ಯೂರಿಯಾವನ್ನು ಒದಗಿಸುವ ಕಾಳಸಂತೆಕೋರರೂ ಇದ್ದಾರೆ. ಇನ್ಮುಂದೆ ಎಫ್‌ಐಡಿ ಅನುಸಾರ ಯೂರಿಯಾ ವಿತರಣೆ ಆಗುವುದರಿಂದ ಸಹಾಯಧನದ ಸದುದ್ದೇಶ ಈಡೇರಬಹುದು.
"

ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನವರೆಗೂ ಅಗತ್ಯ ಇರುವಷ್ಟು ಯೂರಿಯೂ ದಾಸ್ತಾನು ಇದೆ. ಪೂರೈಕೆ ಸರಪಳಿಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಸಬ್ಸಿಡಿ ದರದಲ್ಲಿ ದೊರೆಯುವ ಯೂರಿಯಾ ದುರ್ಬಳಕೆ ಆಗಬಾರದು ಎಂಬ ಕಾರಣಕ್ಕೆ ಸರ್ಕಾರ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಇದನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net