ಸೂಚನೆ ನೀಡದೆ ಮರ ಕಡಿತಲೆ ಅಕ್ಷಮ್ಯ

ತಾಲೂಕು ಬಿಜೆಪಿ ಮತ್ತು ಜೆಡಿಎಸ್ ಮೆರವಣಿಗೆ
bjp and jds protest
ಆನವಟ್ಟಿ ಹೋಬಳಿಯ ತೆವರತೆಪ್ಪ ಗ್ರಾಮದಲ್ಲಿ ಅಡಿಕೆ ಮರಗಳನ್ನು ತೆರವುಗೊಳಿಸಿದ್ದನ್ನು ಖಂಡಿಸಿ ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಡಾ. ಜ್ಞಾನೇಶ್, ಪ್ರಕಾಶ್, ರಾಜು, ಕೆ.ಅಜ್ಜಪ್ಪ ಇತರರಿದ್ದರು.
Published on: 

ಸೊರಬ: ತಾಲೂಕಿನ ತೆವರತೆಪ್ಪ ಗ್ರಾಮದ ರೈತ ದೇವರಾಜ್ ಎಂಬುವರ ಅಡಿಕೆ ತೋಟದಲ್ಲಿ ಮರಗಳನ್ನು ಅಧಿಕಾರಿಗಳು ಕಡಿದುಹಾಕಿದ ಕ್ರಮ ಖಂಡಿಸಿ ತಾಲೂಕು ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು ಮೆರವಣಿಗೆ ನಡೆಸಿದರು.

ರೈತನಿಗೆ ತಾಲೂಕು ಆಡಳಿತದಿಂದ ಯಾವುದೇ ನೋಟಿಸ್ ನೀಡದೆ ಏಕಾಏಕಿ ಅಡಿಕೆ ಮರಗಳನ್ನು ಕಡಿತಲೆ ಮಾಡಿದ್ದು ಸರಿಯಲ್ಲ. ತಲೆತಲಾಂತರದಿಂದ ಪೂರ್ವಜರು ಬೇಸಾಯ ಮಾಡಿದ ಭೂಮಿಯಲ್ಲಿ ಕೃಷಿ ಮುಂದುವರಿಸಿದ್ದಾರೆ. ಅಧಿಕಾರಿಗಳು ಮುಂಚಿತವಾಗಿ ನೋಟಿಸ್ ನೀಡಿದರೆ ಕಾನೂನು ಮೊರೆಹೋಗಲು ಅವಕಾಶವಿದೆ. ಆದರೆ ಅಡಿಕೆ ತೋಟ ತೆರವುಗೊಳಿಸಲು ಮುಂದಾಗಿದ್ದು ಸರಿಯಲ್ಲ ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಡಾ. ಜ್ಞಾನೇಶ್ ದೂರಿದರು.

ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನಿಲುವು ಅನುಸರಿಸುತ್ತಿದೆ. ನೋಟಿಸ್ ನೀಡದೆ ಅಡಿಕೆ ಮರಗಳ ಕಟಾವು ಮಾಡಿ ರೈತನ ಕುಟುಂಬವನ್ನು ಬೀದಿಗೆ ತಂದಿದ್ದಾರೆ. ರೈತರಿಗೆ ಪಕ್ಷ, ಜಾತಿ ಭೇದವಿಲ್ಲ. ಭ್ರಷ್ಟ ಸರ್ಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸೋಣ. ಮಾಹಿತಿ ನೀಡದೆ ಮರಗಳನ್ನು ಕಡಿತಲೆ ಮಾಡಲು ಕಾರಣವೇನು? ಪೋಲಿಸರಿಗೂ ಮಾಹಿತಿ ಏಕೆ ನೀಡಿಲ್ಲ. ರೈತನಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪ್ರಕಾಶ್ ಅಗಸನಗಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ರಾಜು, ಜೆಡಿಎಸ್ ಪಕ್ಷದ ಕೆ.ಅಜ್ಜಪ್ಪ, ಮುಖಂಡರಾದ ಮಲ್ಲಿಕಾರ್ಜುನ, ಗಜಾನನ ರಾವ್, ಟಿ.ಡಿ.ಮೇಘರಾಜ್, ದೇವೇಂದ್ರಪ್ಪ, ರುದ್ರಪ್ಪ ಕಡ್ಲೇರ್, ರಾಜಶೇಖರ್, ಶಿವಕುಮಾರ್, ಸುರೇಶ್, ಸಂಜಯ್, ಜಾನಕಪ್ಪ, ಸುವರ್ಣ ಟೇಕಪ್ಪ, ಉಮೇಶ್, ಪರಮೇಶ್ವರ ಇತರರಿದ್ದರು.