ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ | Farmers protest
ಹೊಳೆಹೊನ್ನೂರು ಸುತ್ತಮುತ್ತ ಮಳೆ-ಗಾಳಿಗೆ ಹಾನಿಗೀಡಾದ ಪ್ರದೇಶದ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸಿ ರೈತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಎಚ್.ಆರ್.ಬಸವರಾಜಪ್ಪ, ಭಾಗ್ಯಾ ರಾಘವೇಂದ್ರ, ಟಿ.ಎಂ.ಚಂದ್ರಪ್ಪ, ಕೆ.ರಾಘವೇಂದ್ರ, ಕೆ.ಬಿ.ಜಗದೀಶ್, ಸಿ.ಬಿ.ಹನುಮಂತಪ್ಪ, ಡಿ.ಎನ್.ಪಂಚಾಕ್ಷರಿ, ಪಾಲಾಕ್ಷಪ್ಪ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹೊಳೆಹೊನ್ನೂರು, ಕೂಡ್ಲಿಗೆರೆ ಹೋಬಳಿ ವ್ಯಾಪ್ತಿಯಲ್ಲಿ ಬೆಳೆಹಾನಿ ಪ್ರಕರಣ
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಮನವಿ
ಆಲಿಕಲ್ಲು ಮಳೆ, ಬಿರುಗಾಳಿಯಿಂದ ಅಡಿಕೆ ಬೆಳೆಗಾರರಿಗೆ ಗಾಯದ ಮೇಲೆ ಬರೆ
ಶಿವಮೊಗ್ಗ: ಹೊಳೆಹೊನ್ನೂರು ಹಾಗೂ ಕೂಡ್ಲಿಗೆರೆ ಹೋಬಳಿ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆ(Rain)ಯಿಂದ ಬೆಳೆ, ಆಸ್ತಿಪಾಸ್ತಿ ಹಾನಿಯಾಗಿರುವುದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು(Farmers) ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ(protest) ನಡೆಸಿದರು.
ಕಳೆದ ಭಾನುವಾರ ಎರಡೂ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಿಂದೆಂದೂ ಕಂಡರಿಯದ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಸುಮಾರು ಮನೆಗಳು ಹಾನಿಗೀಡಾಗಿವೆ. ನಿರಾಶ್ರಿತರಿಗೆ ಕಾಳಜಿ ಕೇಂದ್ರ(Care center)ಗಳನ್ನು ತೆರೆಯಲಾಗಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಅಡಿಕೆ ಮರಗಳು ಧರೆಗುರುಳಿವೆ. ಪ್ರತಿ ತೋಟದಲ್ಲೂ ಶೇ.50ರಷ್ಟು ಅಡಿಕೆ ಮರ(Areca nut)ಗಳು ನೆಲಕ್ಕುರುಳಿ ರೈತರು ಆತಂಕಕ್ಕೀಡಾಗಿದ್ದಾರೆ ಎಂದು ಮನವರಿಕೆ ಮಾಡಿಕೊಟ್ಟರು.
ವರ್ಷಗಟ್ಟಲೆ ಬೆಳೆಸಿದ ಮರಗಳು ಪ್ರಕೃತಿ ವಿಕೋಪದಿಂದ ಒಂದೆರಡು ತಾಸಿನಲ್ಲಿ ನೆಲಕಚ್ಚಿರುವುದು ಹಲವಾರು ರೈತರ ಜೀವನ ನಿರ್ವಹಣೆಗೆ ಹೊಡೆತ ನೀಡಿದೆ. ರೈತನ ಬೆವರಿನ ಫಸಲು ನೀರಿನಲ್ಲಿ ಕೊಚ್ಚಿಹೋಗಿದೆ. ಆದ್ದರಿಂದ ಈ ಘಟನೆ ಬಗ್ಗೆ ಅಧಿಕಾರಿಗಳಿಂದ ನೈಜ ಸರ್ವೇ ಮಾಡಿಸಿ ತಕ್ಷಣ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಪೇಪರ್ ಕಿರಿಕಿರಿ ಇಲ್ಲದೆ ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು. ಬಡ್ಡಿ ರಹಿತವಾಗಿ ಹೊಸ ಸಾಲ ನೀಡಬೇಕು. ಹೊಸದಾಗಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಎಡಿಸಿ ವಿ.ಅವಿನಾಶ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಮಹಿಳಾ ಸಂಚಾಲಕಿ ಭಾಗ್ಯಾ ರಾಘವೇಂದ್ರ, ಸಂಘದ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಬಿ.ಜಗದೀಶ್, ಪ್ರಮುಖರಾದ ಸಿ.ಬಿ.ಹನುಮಂತಪ್ಪ, ಡಿ.ಎನ್.ಪಂಚಾಕ್ಷರಿ, ಪಾಲಾಕ್ಷಪ್ಪ ಮತ್ತಿತರರು ಪ್ರತಿಭಟನೆಯಲ್ಲಿದ್ದರು.
ಸರ್ಕಾರ ಎಚ್ಚೆತ್ತುಕೊಳ್ಳಲಿ
ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಮಾರ್ಗಸೂಚಿ ಪ್ರಕಾರ ಪರಿಹಾರದ ಮೊತ್ತ 1 ಹೆಕ್ಟೇರ್ ಒಣಭೂಮಿ ಬೆಳೆಗೆ 8,500 ರೂ., ನೀರಾವರಿ ಬೆಳೆಗೆ 17 ಸಾವಿರ ರೂ., ಬಹುವಾರ್ಷಿಕ ತೋಟದ ಬೆಳೆಗಳಿಗೆ 22 ಸಾವಿರ ರೂ. ಇದೆ. ಈ ಪರಿಹಾರವನ್ನು ಶೇ.33ಕ್ಕಿಂತ ಹೆಚ್ಚು ಹಾನಿಯಾಗಿದ್ದಲ್ಲಿ ಮಾತ್ರ ಕೊಡಬಹುದು. 1 ಹೆಕ್ಟೇರ್‌ನಲ್ಲಿ 2.5 ಎಕರೆ ಅಡಿಕೆ ಬೆಳೆಗೆ 22 ಸಾವಿರ ರೂ., 1 ಎಕರೆಗೆ 9 ಸಾವಿರ ರೂ.ನಂತೆ 548 ಗಿಡಗಳಿಗೆ ಲೆಕ್ಕ ಹಾಕಿದಾಗ ಒಂದು ಮರಕ್ಕೆ 16 ರೂ. ಬರುತ್ತದೆ. ಈ 16 ರೂ.ನಿಂದ ಒಂದು ಅಡಿಕೆ ಮರವನ್ನು ತೋಟದಿಂದ ಕಡಿದು ಹೊರಗೆ ಸಾಗಿಸಲಿಕ್ಕೂ ಸಾಧ್ಯವಿಲ್ಲ. ಆದ್ದರಿಂದ ವಿಪತ್ತು ಪರಿಹಾರ ನಿಧಿ ಹೆಚ್ಚಿಸಲು ರೈತ ಸಂಘ ಪಾದಯಾತ್ರೆ, ಚಳವಳಿಗಳನ್ನು ಮಾಡಿ ಒತ್ತಾಯಿಸುತ್ತಲೇ ಇದೆ. ಆದರೆ ಈವರೆಗೂ ಹೆಚ್ಚಳ ಮಾಡಿಲ್ಲ. ಈಗಲಾದರೂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.