ಶಿವಮೊಗ್ಗ: ಬುಡಕಟ್ಟು ಜನಾಂಗದ ಮಹಿಳೆಯನ್ನು ದೇಶದ ರಾಷ್ಟ್ರಪತಿಯಾಗಿ ಪಡೆದಿದ್ದೇವೆ. ಆದರೆ ಅರಣ್ಯದಲ್ಲಿರುವ ಬುಡಕಟ್ಟು ಜನಾಂಗಕ್ಕೆ ಇನ್ನೂ ಹಕ್ಕು ಪತ್ರ ನೀಡಲು ಸರ್ಕಾರದಿಂದ ಸಾಧ್ಯವಾಗಿಲ್ಲ. ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದವು.
ಸರ್ಕಾರ ದಿವಾಳಿಯಾಗಿದೆ. ಹೊಸ ಮಾರ್ಗದಲ್ಲಿ ಸಂಚರಿಸಲು ಕೆಎಸ್ಆರ್ಟಿಸಿ ಬಸ್ಗಳೇ ಇಲ್ಲ. ಇರುವ ಬಸ್ಗಳು ಗುಜರಿ ಸೇರುವ ಸಮಯ ಬಂದಿದೆ. ಡಿಪೋಗಳಲ್ಲಿ ಡಿಸೇಲ್ ಕಳ್ಳತನವಾಗುತ್ತಿದೆ. ಆದರೆ ಸರ್ಕಾರ ಡಿಸೇಲ್ ಖರೀದಿಗೇ ದುಡ್ಡಿಲ್ಲ ಎಂದು ಹೇಳುತ್ತಿದೆ ಎಂದು ಪ್ರತಿಪಕ್ಷಗಳು ಸದನದಲ್ಲಿ ಸರ್ಕಾರದ ವಿರುದ್ಧ ವಾಕ್ಸಮರ ನಡೆಸಿದವು.
ಜಿಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳ ಯುವ ಸಂಸತ್ ಅನೇಕ ಕಾರಣಗಳಿಂದ ಗಮನಸೆಳೆಯಿತು. ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನವನ್ನು ಪ್ರಸ್ತಾಪಿಸುವ ಮೂಲಕ ಪ್ರೌಢಿಮೆ ಪ್ರದರ್ಶಿಸಿದರು. ಪ್ರತಿಪಕ್ಷ ನಾಯಕ ಸ್ಥಾನ ವಹಿಸಿದ್ದ ಹಾಲಸ್ವಾಮಿ, ಸಿಎಂ ಸ್ಥಾನದಲ್ಲಿದ್ದ ಅಂಶಕ್ ಸಮಯೋಚಿತ ಮಾತುಗಳ ಮೂಲಕ ಪರಿಸ್ಥಿತಿ ನಿಭಾಯಿಸಿದರು.
ಇಂಜಿನಿಯರಿಂಗ್ ಪದವಿ ಪಡೆದವರ ಪೈಕಿ ಶೇ. 17ರಷ್ಟು ಮಂದಿಗೆ ಇಂದು ಉದ್ಯೋಗವೇ ಸಿಗುತ್ತಿಲ್ಲ. ಸರ್ಕಾರ ಯುವನಿಧಿ ನೀಡಿದರೆ ನಿರುದ್ಯೋಗ ಸಮಸ್ಯೆ ಬಗೆಹರಿಯುವುದಿಲ್ಲ. ಯುವನಿಧಿ ಪ್ಲಸ್ ಮೂಲಕ ಕೌಶಲ ತರಬೇತಿ ನೀಡಿದ ಮಾತ್ರಕ್ಕೆ ಉದ್ಯೋಗ ಸಿಗುವುದಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಎಂದು ಸಭೆ ಆರಂಭದಲ್ಲೇ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.
ಸರ್ಕಾರ ಬಂದ ದಿನದಿಂದಲೂ 15 ಸಾವಿರ ಮಂದಿ ನೇಮಕಾತಿ ಮಾಡಿಕೊಳ್ಳುತ್ತೇವೆ ಎನ್ನುತ್ತಿರುವ ಶಿಕ್ಷಣ ಸಚಿವರಿಗೆ ರಾಜ್ಯದಲ್ಲಿ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ 6,158 ಶಾಲೆಗಳಿವೆ ಎಂಬ ಸಂಗತಿಯೇ ತಿಳಿದಿಲ್ಲ. ಮಾದಕ ವಸ್ತುಗಳ ವಿರುದ್ಧ, ಮಕ್ಕಳ ಹಕ್ಕುಗಳ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಮೂಡಿಸುತ್ತೇವೆ ಎನ್ನುತ್ತಾರೆ. ಆದರೆ ಇರುವ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಇನ್ನೂ ಜಾಗೃತಿ ನೀಡುವ ಮಾತೆಲ್ಲಿ? ಎಂದು ಪ್ರತಿಪಕ್ಷ ಸದಸ್ಯರು ವಾಗ್ದಾಳಿ ನಡೆಸಿದರು.