ಮೆಗ್ಗಾನ್ ಆಸ್ಪತ್ರೆಯಲ್ಲಿ ಗರ್ಭಿಣಿಯರ ಯಾತನೆ ಕಂಡು ಡಾ. ನಾಗಲಕ್ಷ್ಮಿ ಚೌಧರಿ ಗರಂ | Women's Commission

ಮೆಗ್ಗಾನ್ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿ ರೋಗಿಗಳಿಂದ ಮಾಹಿತಿ ಪಡೆದರು.
Published on

ಪ್ರಮುಖ ಮುಖ್ಯಾಂಶಗಳು

  • ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿಟ್ಟು
  • ತಾಯಿ ಮತ್ತು ಮಕ್ಕಳು ವಿಭಾಗದ ಕೌಂಟರ್ ಮುಂದೆ ಗರ್ಭಿಣಿಯರು, ಬಾಣಂತಿಯರ ಸಾಲು
  • 24 ಗಂಟೆಯೊಳಗೆ ಇಲ್ಲಿ ಕನಿಷ್ಠ 3ರಿಂದ 10 ಕೌಂಟರ್ ತೆರೆಯಲು ಅಧ್ಯಕ್ಷೆ ಸೂಚನೆ
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ(Meggan Hospital)ಯ ತಾಯಿ ಮತ್ತು ಮಕ್ಕಳು ವಿಭಾಗದಲ್ಲಿ ಒಂದೇ ಕೌಂಟರ್(counter) ಮುಂದೆ ಗರ್ಭಿಣಿಯರು, ಬಾಣಂತಿಯರು ಸಾಲುಗಟ್ಟಿ ನಿಂತಿರುವುದನ್ನು ಕಂಡ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಗರಂ ಆದರು.
ಸೋಮವಾರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ತಾಯಿ ಮತ್ತು ಮಕ್ಕಳ ವಿಭಾಗ(Mother and Child Department)ಕ್ಕೆ ತೆರಳಿದ್ದರು. ಈ ವೇಳೆ ಪ್ರವೇಶ ದ್ವಾರದ ಬಳಿ ಬೆಳಗ್ಗೆಯಿಂದಲೇ 7 ತಿಂಗಳು, 8 ತಿಂಗಳು, 9 ತಿಂಗಳ ಗರ್ಭಿಣಿಯರು ಹಾಗೂ ಕೆಲ ಬಾಣಂತಿಯರು ಅನುಭವಿಸುತ್ತಿದ್ದ ಯಾತನೆ ನೋಡಿ ಸಿಟ್ಟಿಗೆದ್ದರು.
ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ಕೇವಲ ಒಂದೇ ಕೌಂಟರ್ ಇದೆ. ಅದರ ಮುಂದೆ ನೂರಾರು ಮಹಿಳೆಯರು ಸರದಿಯಲ್ಲಿ ನಿಲ್ಲುವುದು ದುರಂತ. ಈ ಕುರಿತು ಆಯೋಗದ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಗುಡುಗಿದರು. 24 ಗಂಟೆಯೊಳಗೆ ಇಲ್ಲಿ ಕನಿಷ್ಠ 3ರಿಂದ 10 ಕೌಂಟರ್ ತೆರೆಯಬೇಕು ಎಂದು ತಾಕೀತು ಮಾಡಿದರು.
ಇದೇ ವೇಳೆ ಮೆಗ್ಗಾನ್ ಆಸ್ಪತ್ರೆಯ ಹೊರರೋಗಿ ವಿಭಾಗ, ಔಷಧ ವಿತರಣಾ ವಿಭಾಗ, ಶೌಚಗೃಹ, ಔಷಧ ವಿಭಾಗ, ಕುಡಿಯುವ ನೀರು, ಬಿಸಿನೀರು ವ್ಯವಸ್ಥೆ, ಐಸಿಯು, ಓಟಿಗಳಲ್ಲಿ ಸ್ಟೆಬಿಲೈಜ್ಡ್ ಪ್ರೋಟೋಕಾಲ್‌(Stabilized Protocol)ಗಳನ್ನು ಪರಿಶೀಲಿಸಿದರು. ಸ್ಟೆಬಿಲೈಜ್ಡ್ ಪ್ರೋಟೋಕಾಲ್‌ಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದರ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಆಸ್ಪತ್ರೆ ವಿರುದ್ಧ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ವರದಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಡಿಎಚ್‌ಒ ಡಾ. ಕೆ.ಎಸ್.ನಟರಾಜ್, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.

ಕೊಡುತ್ತಿಲ್ಲ ಇಎಸ್‌ಐ, ಪಿಎಫ್

ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಇದುವರೆಗೂ ನಮಗೆ ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ ಎಂದು ಗುತ್ತಿಗೆ ನೌಕರರು ಆಯೋಗದ ಅಧ್ಯಕ್ಷರ ಎದುರು ದೂರಿದರು. ಈ ಬಗ್ಗೆ ನಾವು ಪ್ರಶ್ನೆ ಮಾಡುವಂತಿಲ್ಲ. ಪ್ರಶ್ನೆ ಮಾಡಿದರೆ ಕೆಲಸದಿಂದಲೇ ತೆಗೆಯುವ ಬೆದರಿಕೆ ಹಾಕುತ್ತಿದ್ದಾರೆ. ಹಾಗಾಗಿ ನಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು. ಈ ಬಗ್ಗೆ ಗಮನ ಹರಿಸಿ ನ್ಯಾಯ ಕೊಡಿಸುವುದಾಗಿ ಡಾ. ನಾಗಲಕ್ಷ್ಮಿ ಚೌಧರಿ ಭರವಸೆ ನೀಡಿದರು. ಬಳಿಕ ಮಹಿಳಾ ಪೊಲೀಸ್ ಠಾಣೆ, ಬೊಮ್ಮನಕಟ್ಟೆಯ ಬಿಸಿಎಂ ಹಾಸ್ಟೆಲ್ ಸೇರಿದಂತೆ ಕೆಲವೆಡೆ ಭೇಟಿ ನೀಡಿ ಪರಿಶೀಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net