

ಶಿಕಾರಿಪುರ: ಪ್ರತಿಯೊಬ್ಬರೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರಬೇಕು ಎಂದು ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆರ್.ಆರ್.ಪಾಟೀಲ್ ಹೇಳಿದರು.
ತಾಲೂಕಿನ ಹಿತ್ತಲ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಸಮುದಾಯದತ್ತ ಶಾಲಾ ಕಾರ್ಯಕ್ರಮ, ಸುರಕ್ಷಿತ್ ಬಚ್ಪನ್ ಅಭಿಯಾನ ಹಾಗೂ ಮಿಷನ್ ಸುರಕ್ಷಾ ಅರಿವು ಕಾರ್ಯಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮತ್ತು ಒಳ್ಳೆ ನಡತೆ ಮೂಲಕ ಭವಿಷ್ಯ ರೂಪಿಸುವ ಸಂದರ್ಭದಲ್ಲಿ ಕಾನೂನು ಸಂಘರ್ಷಕ್ಕೆ ಸಿಲುಕಿ ಜೀವನ ವ್ಯರ್ಥ ಮಾಡಿಕೊಳ್ಳಬಾರದು ಎಂದು ತಿಳಿಸಿದರು.
ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಬಿಳವಾಣಿ ಮಾತನಾಡಿ, ಮಕ್ಕಳಿಗೆ ಉತ್ತಮ ಮಾರ್ಗದರ್ಶನ ಸಿಗಬೇಕು. ಒಳ್ಳೆಯ ಶಿಕ್ಷಣ ದೊರೆತಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ತಾಪಂ ಮಾಜಿ ಅಧ್ಯಕ್ಷ ಎ.ಪರಮೇಶಪ್ಪ, ಮುಖ್ಯಶಿಕ್ಷಕ ಮಹೇಶ್ವರ ಸ್ವಾಮಿ, ಕಾಲೇಜು ಪ್ರಾಚಾರ್ಯ ಪ್ರಭುಲಿಂಗ ಸ್ವಾಮಿ, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಅರವಿಂದ್, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಂಜನಪ್ಪ, ಜಿ.ಎಸ್.ಆರಾಧ್ಯಮಠ, ಶ್ಯಾಮ್ಪ್ರಸಾದ್ ಇತರರಿದ್ದರು.