ಬೇಡಿಕೆ ಈಡೇರಿಲು ಮೀನಮೇಷ

Protest by the Farmers' Association
ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ಜೋಗ ರಸ್ತೆಯ ಪೊಲೀಸ್ ಸ್ಟೇಷನ್ ಸಮೀಪ ರಸ್ತೆತಡೆ ನಡೆಸಲಾಯಿತು. ರಮೇಶ್ ಕೆಳದಿ, ಸಂತೋಷ್, ಚಂದ್ರಪ್ಪ, ಕೃಷ್ಣಮೂರ್ತಿ, ಸೋಮಶೇಖರ ಇತರರಿದ್ದರು.
Published on: 

ಸಾಗರ: ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘದ ಕರೆಯ ಮೇರೆಗೆ ಶಿವಮೊಗ್ಗ ಜಿಲ್ಲಾ ರೈತ ಸಂಘದಿಂದ ರಾಷ್ಟ್ರೀಯ ಹೆದ್ದಾರಿ 206ರ ಜೋಗ ರಸ್ತೆಯ ಪೊಲೀಸ್ ಸ್ಟೇಷನ್ ಸಮೀಪ ರಸ್ತೆ ತಡೆ ನಡೆಸಲಾಯಿತು. ಮೂರು ತಾಸಿಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಕೇಂದ್ರ ಸರ್ಕಾರ ಸಮಸ್ಯೆಗಳ ಕುರಿತು ಚರ್ಚಿಸಲು ರೈತ ಪ್ರಮುಖರ ಸಭೆ ಕರೆದಿತ್ತು. ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್, ಆಹಾರ ನಾಗರಿಕ ಖಾತೆ ಸಚಿವ ಪ್ರಲ್ಹಾದ ಜೋಷಿ ಅವರ ಜತೆ ಸತತ ಮೂರೂವರೆ ತಾಸು ಸಭೆ ನಡೆಸಿದರೂ ರೈತ ಸಂಘದ ಯಾವುದೇ ಬೇಡಿಕೆಯನ್ನು ಈಡೇರಿಸದೆ ಸಮಯಾವಕಾಶ ಕೋರಿ ಕಾಲಹರಣ ಮಾಡುತ್ತಿದೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ್ ಕೆಳದಿ ದೂರಿದರು.

ಕೇಂದ್ರ ಸರ್ಕಾರ ರೈತಪರ ಯೋಜನೆಗಳನ್ನು ಈಡೇರಿಸುವಲ್ಲಿ ಮೀನಮೇಷ ಎಣಿಸುತ್ತಿರುವುದು ರೈತರಿಗೆ ಮಾಡಿದ ಅವಮಾನ. ಹುಬ್ಬಳ್ಳಿ- ಧಾರವಾಡದಲ್ಲಿ ಮೂರು ಲಕ್ಷಕ್ಕೂ ಅಧಿಕ ರೈತರು ಪ್ರತಿಭಟನೆ ಮಾಡಿದ್ದರು. ಇದಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ದೆಹಲಿಗೆ ರೈತರನ್ನು ಮಾತುಕತೆಗೆ ಕರೆದಿತ್ತು. ಸಭೆಯಲ್ಲಿ ಯಾವುದೇ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಪದೇಪದೆ ಸಮಯಾವಕಾಶ ಕೇಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರ ಕರೆ ಮೇರೆಗೆ ರಸ್ತೆ ತಡೆ ನಡೆಸಿದ್ದು ಬೇಡಿಕೆ ಈಡೇರಿಸದಿದ್ದಲ್ಲಿ ರಸ್ತೆ ತಡೆಯನ್ನು ಬುಧವಾರದಿಂದ ಮುಂದುವರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂತೋಷ್, ಚಂದ್ರಪ್ಪ, ಕೃಷ್ಣಮೂರ್ತಿ, ಸೋಮಶೇಖರ, ಶಶಿಕಲಾ, ನಾಗರಾಜ್, ಟಾಕಪ್ಪ, ವಾಸು, ಅಜ್ಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net