ಕಾನೂನುಬಾಹಿರ ಚಟುವಟಿಕೆ ತಡೆಗೆ ಒತ್ತಾಯ

ಭದ್ರಾವತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಡಿವೈಎಸ್​ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿ.ಧರ್ಮಪ್ರಸಾದ್​, ಮಂಗೋಟೆ ರುದ್ರೇಶ್​, ಕೆ.ಎಚ್​.ತೀರ್ಥಯ್ಯ, ಸರಸ್ವತಿ ಇತರರಿದ್ದರು.
ಭದ್ರಾವತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಡಿವೈಎಸ್​ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜಿ.ಧರ್ಮಪ್ರಸಾದ್​, ಮಂಗೋಟೆ ರುದ್ರೇಶ್​, ಕೆ.ಎಚ್​.ತೀರ್ಥಯ್ಯ, ಸರಸ್ವತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮ, ಅನೈತಿಕ ಚಟುವಟಿಕೆ ತಡೆಗಾಗಿ ಬಿಜೆಪಿ ಆಕ್ರೋಶ
  • ಪೊಲೀಸರಿಂದಲೇ ರಾಜಿ, ಸಂಧಾನ
  • ಡಿವೈಎಸ್​ಪಿ ಕಚೇರಿ ಎದುರು ಬಿಜೆಪಿ ಪ್ರತಿಭಟನೆ
ಭದ್ರಾವತಿ: ನಗರದಲ್ಲಿ ಇಸ್ಪೀಟು, ಒ.ಸಿ, ಜೂಜಾಟ, ಗಾಂಜಾ, ಹಲ್ಲೆ, ಕೊಲೆ ಸೇರಿ ಅನೇಕ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕೆಲ ಪೊಲೀಸ್​ ಅಧಿಕಾರಿಗಳು ಇವುಗಳನ್ನು ನಿಯಂತ್ರಿಸುವ ಬದಲಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಕಾರ್ಯಕರ್ತರು ಡಿವೈಎಸ್​ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೊಲೀಸ್​ ಉಮೇಶ್​ ಹಾಗೂ ಅವರ ಸಂಬಂಧಿ ಸುಹಾಸ್​ ಮೇಲೆ ಹಲ್ಲೆ, ಗಾಂಧಿ ವೃತ್ತದಲ್ಲಿ ಗಾಂಧಿ ಎಂಬಾತನ ಮೇಲೆ ನಡೆದ ಹಲ್ಲೆ, ಸಿದ್ದಾರೂಢ ನಗರದ ಜಿಮ್​ನೊಳಗೆ ಕೊಲೆ ಯತ್ನ ಇತ್ಯಾದಿ ಪ್ರಕರಣಗಳು ನಡೆಯಲು ಕೆಲವು ಪೊಲೀಸ್​ ಅಧಿಕಾರಿಗಳ ನಡೆಯೇ ಕಾರಣ ಎಂದು ದೂರಿದರು.
ಸ್ಥಳಿಯ ಕೆಲ ಪೊಲೀಸ್​ ಅಧಿಕಾರಿಗಳು ರಾಜಕಾರಣಿಗಳ ಮನೆಗೆ ತೆರಳಿ ರಾಜಿ ಸಂಧಾನ ಮಾಡಿಸುತ್ತಿದ್ದಾರೆ. ಪೊಲೀಸ್​ ಇಲಾಖೆ ನೊಂದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಬೇಕೇ ಹೊರತು ರಾಜಿ ಸಂಧಾನಕ್ಕಲ್ಲ. ಸಂಧಾನವನ್ನು ನಾವೇ ಮಾಡುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಜಿ.ಧರ್ಮಪ್ರಸಾದ್​, ಗ್ರಾಮಾಂತರ ಅಧ್ಯಕ್ಷ ಕೆ.ಎಚ್​.ತೀರ್ಥಯ್ಯ, ಪ್ರಮುಖರಾದ ಮಂಗೋಟೆ ರುದ್ರೇಶ್​, ಜಿ.ಆನಂದಕುಮಾರ್​, ಕೂಡ್ಲಿಗೆರೆ ಹಾಲೇಶ್​, ಸರಸ್ವತಿ, ಸಿಮೆಂಟ್​ ಮಂಜಣ್ಣ, ಚನ್ನೇಶ್​, ಮೊಸರಳ್ಳಿ ಅಣ್ಣಪ್ಪ, ಸುರೇಶಪ್ಪ, ರಾಮಲಿಂಗಯ್ಯ, ರಾಜಶೇಖರ್​, ಧನುಷ್​, ಹಾ.ರಾಮಪ್ಪ, ಕವಿತಾ ಇತರರಿದ್ದರು.
ತಾಲೂಕಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಹಿಡಿಯುವ ಕೆಲಸ ನಮ್ಮ ಇಲಾಖೆಯಿಂದ ಮಾಡುತ್ತೇವೆ. ಗಾಂಜಾ ಮಾರಾಟ ಮಾಡುವವರನ್ನು ಈಗಾಗಲೆ ಪತ್ತೆಪಚ್ಚುವ ಕೆಲಸ ನಡೆಯುತ್ತಿದೆ. ಇಸ್ಪೀಟ್​, ಜೂಜಾಟಗಳ ಮೇಲೆ ನಿಗಾ ಇರಿಸಲಾಗುವುದು.
> ಕಾರಿಯಪ್ಪ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ
ಟಯರ್​ಗೆ ಬೆಂಕಿ ಹಚ್ಚಲು ಯತ್ನ
ನಗರದ ಬೈಪಾಸ್​ ರಸ್ತೆ ಬಳಿ ಇರುವ ಡಿವೈಎಸ್​ಪಿ ಕಚೇರಿ ಎದುರು ಪ್ರತಿಭಟನಾಕಾರರು ಟಯರ್​ಗೆ ಬೆಂಕಿ ಹಚ್ಚಲು ಮುಂದಾದರು. ಆದರೆ ಪೊಲೀಸ್​ ಸಿಬ್ಬಂದಿ ಟಯರ್​ ವಶಕ್ಕೆ ಪಡೆದರು. ಅಂಡರ್​ ಬ್ರಿಡ್ಜ್​ ವೃತ್ತದಲ್ಲಿ ಎನ್​ಎಸ್​ಯುಐ ಕಾರ್ಯಕರ್ತರು ಟಯರ್​ಗೆ ಬೆಂಕಿಹಚ್ಚಲು ಪೊಲೀಸರು ಅವಕಾಶ ನೀಡಿದ್ದಾರೆ. ಈಗ ಬಿಜೆಪಿ ಕಾರ್ಯಕರ್ತರು ಹಚ್ಚಿದರೆ ಅದನ್ನು ಏಕೆ ವಿರೋಧಿಸುವುದು. ಕಾನೂನು ಎಲ್ಲರಿಗೂ ಒಂದೇ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net