‘ಅಕ್ರಮ ಮರಳು’ ವಿಲೇಗೆ ಡಿಸಿ ಸೂಚನೆ | Illegal Sand

ಶಿವಮೊಗ್ಗದಲ್ಲಿ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿದರು. ಎನ್.ಹೇಮಂತ್, ಬಿ.ನಿಖಿಲ್, ಅಜ್ಜಯ್ಯ, ವಿ.ಅಭಿಷೇಕ್, ಡಾ. ಎಚ್.ಪಿ.ಎಸ್.ಮೈತ್ರಿ ಇದ್ದರು.
ಶಿವಮೊಗ್ಗದಲ್ಲಿ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿದರು. ಎನ್.ಹೇಮಂತ್, ಬಿ.ನಿಖಿಲ್, ಅಜ್ಜಯ್ಯ, ವಿ.ಅಭಿಷೇಕ್, ಡಾ. ಎಚ್.ಪಿ.ಎಸ್.ಮೈತ್ರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲೆಯ ವಿವಿಧೆಡೆ ಜಪ್ತಿ ಮಾಡಲಾದ ಮರಳು
  • ನಿಯಮಾನುಸಾರ ಹರಾಜು ಹಾಕಿ
  • ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿ
ಶಿವಮೊಗ್ಗ: ಜಿಲ್ಲೆಯ ಮರಳು ಸಮಿತಿಗಳ ನೇತೃತ್ವದಲ್ಲಿ ಜಪ್ತಿ ಮಾಡಿರುವ ಅಕ್ರಮ ಮರಳನ್ನು ನಿಯಮಾನುಸಾರ ಹರಾಜು ಮಾಡುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಚಿದಂಬರ್ ಅವರಿಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ(DC Prabhulinga Kavalikatti) ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲಾಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ(Task Force Committee), ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ ಸಮಿತಿ ಸಭೆ ನಡೆಸಿದರು.
ಜಪ್ತಿ ಮಾಡಿರುವ ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಆವರಣ, ಫ್ರೀಡಂ ಪಾರ್ಕ್, ಹೊಸನಗರ ಪೊಲೀಸ್ ಠಾಣೆ(Hosanagar Police Station) ಸೇರಿ ಹಲವೆಡೆ ಸಂಗ್ರಹಿಸಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಆಗದಂತೆ ಹಾಗೂ ಆಕ್ಷೇಪಕ್ಕೆ ಅವಕಾಶವಿಲ್ಲದಂತೆ ವಿಲೇ ಮಾಡಲು ತಿಳಿಸಿದರು.
ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ನದಿ ಪಾತ್ರಗಳಲ್ಲಿ ನೀರಿನ ಹರಿವು ಕಡಿಮೆಯಾದ ನಂತರ ಅಕ್ರಮ ಮರಳು ಗಣಿಗಾರಿಕೆ(Sand mining) ಹಾಗೂ ಸಾಗಣೆ ಆರಂಭವಾಗುವ ಸಾಧ್ಯತೆ ಇದೆ. ತಾಲೂಕು ಮರಳು ಸಮಿತಿಗಳಿಂದ ಈ ಹಿಂದೆ ರಚಿಸಿದ್ದ ಗಸ್ತು ತಂಡಗಳನ್ನು ಪುನಃ ಸಕ್ರಿಯಗೊಳಿಸಬೇಕು. ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಶಾಶ್ವತ ಅಥವಾ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲು, ಅಗತ್ಯ ಸಿಬ್ಬಂದಿ ಮತ್ತು ಅನುದಾನ ನೀಡುವಂತೆ ಇಲಾಖಾ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಮಂಜೂರು ಮಾಡಲಾದ ಮರಳು ಗಣಿ ಗುತ್ತಿಗೆಯಲ್ಲಿ ನಿಯಮ ಉಲ್ಲಂಘಿಸಿದ ದಬ್ಬಣಗದ್ದೆ ಮರಳು ಬ್ಲಾಕ್‌(Dabbanagadde sand block)ನ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹುಣಸವಳ್ಳಿಯ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮರಳನ್ನು ಅರಣ್ಯ ಇಲಾಖೆಯಿಂದ ಜಪ್ತಿ ಮಾಡಿದ್ದು, ನಿಯಮಾನುಸಾರ ವಿಲೇವಾರಿ ಮಾಡುವವರೆಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಕಲ್ಲುಪುಡಿ ಮಾಡುವ ಘಟಕ ಸ್ಥಾಪಿಸಲು ಪರವಾನಗಿ ಮತ್ತು ನಿಯಂತ್ರಣ ಸಮಿತಿಯಿಂದ ಪರವಾನಗಿ ನೀಡಿದ್ದು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮೋದನೆ ನೀಡಲಾಗಿದೆ. ಉಳಿದಂತೆ ಕ್ರಷರ್ ಘಟಕ ಚಾಲನೆಗೊಳಿಸಲು ಅನುಮತಿ ನೀಡುವ ಮುನ್ನ ಪರಿಶೀಲಿಸಲು ಸಲಹೆ ನೀಡಿದರು.

ಸ್ಥಗಿತ ಕ್ರಷರ್ ಮಾಲೀಕರಿಗೆ ನೋಟಿಸ್

ಜಿಲ್ಲೆಯಲ್ಲಿ ಇದುವರೆಗೆ 93 ಕ್ರಷರ್‌ಗಳಿಗೆ ಪರವಾನಗಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ಅವುಗಳಲ್ಲಿ 21 ಘಟಕಗಳ ಮಾಲೀಕರು ಇಲಾಖೆಗೆ ಯಾವುದೇ ಮಾಹಿತಿ ನೀಡದೆ ಯಂತ್ರೋಪಕರಣ ಕೊಂಡೊಯ್ದು ಘಟಕವನ್ನು ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಆ ಘಟಕಗಳ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಬೇಕು ಎಂದರು.
ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಬಿ.ನಿಖಿಲ್, ಅರಣ್ಯಾಧಿಕಾರಿ ಅಜ್ಜಯ್ಯ, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಉಪವಿಭಾಗಾಧಿಕಾರಿ ಡಾ. ಎಚ್.ಪಿ.ಎಸ್.ಮೈತ್ರಿ, ತಹಸೀಲ್ದಾರ್ ಎಸ್.ವಿ.ರಾಜೀವ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net