ಜಿಲ್ಲಾದ್ಯಂತ ಅಕ್ಕ ಪಡೆ ಕಾರ್ಯವೈಖರಿ ಅರಿವು ಮೂಡಿಸಿ Akka Pade

ಮಹಿಳೆಯರು ಮತ್ತು ಮಕ್ಕಳ ಸುರಕ್ಷೆ, ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಚರಣೆ ನಡೆಸುತ್ತಿರುವ ಅಕ್ಕ ಪಡೆ ಇನ್ಮುಂದೆ ತಾಲೂಕುಗಳಿಗೆ ಭೇಟಿ ನೀಡಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಎಸ್‌ಪಿ ಬಿ.ನಿಖಿಲ್ ತಿಳಿಸಿದರು.
Akka Pade
ಶಿವಮೊಗ್ಗದಲ್ಲಿ ಎಸ್ಪಿ ಬಿ.ನಿಖಿಲ್ ಅಧ್ಯಕ್ಷತೆಯಲ್ಲಿ ನಡೆದ ಅಕ್ಕ ಪಡೆ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಭಾರತಿ ಬಣಕಾರ್, ಶಶಿರೇಖಾ, ಮಂಜುನಾಥ್, ಚಂದ್ರಪ್ಪ ಗುಂಡಪಲ್ಲಿ ಇತರರಿದ್ದರು.
Published on: 

ಶಿವಮೊಗ್ಗ: ಮಹಿಳೆಯರು ಮತ್ತು ಮಕ್ಕಳ ಸುರಕ್ಷೆ, ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಕಾರ್ಯಾಚರಣೆ ನಡೆಸುತ್ತಿರುವ ಅಕ್ಕ ಪಡೆ ಇನ್ಮುಂದೆ ತಾಲೂಕುಗಳಿಗೆ ಭೇಟಿ ನೀಡಿ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಎಸ್‌ಪಿ ಬಿ.ನಿಖಿಲ್ ತಿಳಿಸಿದರು.

ಎಸ್ಪಿ ಕಚೇರಿಯಲ್ಲಿ ಗುರುವಾರ ಅಕ್ಕ ಪಡೆ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿಯ ಎರಡನೇ ತ್ರೈಮಾಸಿಕ ಸಭೆ ನಡೆಸಿ ಪ್ರಗತಿ ಪರಿಶೀಲಿಸಿದ ಅವರು, ಅಕ್ಕ ಪಡೆಯ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಂದುವರಿದಿವೆ. ಕಾರ್ಯಾಚರಣೆ ನಗರ ಪ್ರದೇಶಕ್ಕೆ ಸೀಮಿತಗೊಳ್ಳದೆ, ಹಳ್ಳಿಗಳಿಗೂ ತೆರಳಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಹೋಟೆಲ್‌ಗಳು ಹಾಗೂ ಲಾಡ್ಜ್‌ಗಳ ರಿಜಿಸ್ಟರ್‌ಗಳನ್ನು ತಪಾಸಣೆ ಮಾಡಲು, ಅಪರಿಚಿತ ವ್ಯಕ್ತಿಗಳ ಓಡಾಟದ ಮೇಲೆ ನಿಗಾ ವಹಿಸಬೇಕು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳ ಐಇಸಿ ಕಾರ್ಯಕ್ರಮಗಳ ಸಹಯೋಗದಲ್ಲಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಭಿಕ್ಷಾಟನೆ, ಬಾಲಕಾರ್ಮಿಕ ಪದ್ಧತಿ ಹಾಗೂ ಇತರ ಸಂಕಷ್ಟಗಳಿಗೆ ಒಳಗಾದ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಿ, ಸಖಿ ಕೇಂದ್ರ ಹಾಗೂ ನಿರಾಶ್ರಿತರ ಕೇಂದ್ರಗಳಿಗೆ ದಾಖಲಿಸಬೇಕು. ಮಹಿಳೆಯರಿಗೆ ಸಂಬಂಧಿಸಿದ ಹೆಚ್ಚಿನ ಕರೆಗಳು ಬಂದ ಸ್ಥಳ ಮತ್ತು ಹಾಟ್‌ಸ್ಪಾಟ್ ಪ್ರದೇಶಗಳನ್ನು ಗುರುತಿಸಿ ಭೇಟಿ ನೀಡಬೇಕು. ಮಹಿಳೆಯರು ಮತ್ತು ಮಕ್ಕಳ ಸುರಕ್ಷೆಗೆ ಹಮ್ಮಿಕೊಂಡಿರುವ ಜಾಗೃತಿ ಹಾಗೂ ರಕ್ಷಣಾ ಕಾರ್ಯಗಳು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ, ಡಿಡಿಪಿಐ ಎಸ್.ಆರ್.ಮಂಜುನಾಥ್ ಇತರರಿದ್ದರು.

1,158 ಸ್ಥಳಗಳಿಗೆ ಭೇಟಿ

ಅಕ್ಕ ಪಡೆ ತಂಡವು ಶಾಲಾ ಕಾಲೇಜುಗಳು, ಹಾಸ್ಟೆಲ್, ಬಸ್ ನಿಲ್ದಾಣ, ಉದ್ಯಾನ ಮತ್ತು ಮಾರುಕಟ್ಟೆ ಪ್ರದೇಶಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದೆ. ಅಕ್ಕಪಡೆಯು ಜುಲೈನಿಂದ ಸೆಪ್ಟೆಂಬರ್‌ವರೆಗೆ 1,158 ಸ್ಥಳಗಳಿಗೆ ಭೇಟಿ ನೀಡಿದೆ. ಮಹಿಳಾ ಸಂಬಂಧಿತ 83 ಜಾಗೃತಿ ಕಾರ್ಯಕ್ರಮ ನಡೆಸಿದೆ. ಭಿಕ್ಷಾಟನೆ, ಕೌಟುಂಬಿಕ ದೌರ್ಜನ್ಯ, ಬಾಲ ಕಾರ್ಮಿಕ, ಅನಾಥ, ನಿರ್ಗತಿಕ ಸೇರಿ ವಿವಿಧ ರಕ್ಷಣಾ ಕಾರ್ಯಗಳಲ್ಲಿ 685 ರೆಸ್ಕೂೃ ಪ್ರಕರಣ ದಾಖಲಿಸಿದೆ ಎಂದು ಎಸ್‌ಪಿ ನಿಖಿಲ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net