

ಶಿವಮೊಗ್ಗ: ಶಿವಮೊಗ್ಗ ದಸರಾದಲ್ಲೂ ವಂದೇ ಮಾತರಂ ವಿವಾದವು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಜಟಾಪಟಿಗೆ ಕಾರಣ ಆಗಿದ್ದು, ಸರ್ಕಾರದ ಸೂಚನೆ ಧಿಕ್ಕರಿಸಿ ಪೂರ್ಣ ವಂದೇ ಮಾತರಂ ಹಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಜನಪ್ರತಿನಿಧಿಗಳು ನಾಡಹಬ್ಬ ದಸರಾ ಬಹಿಷ್ಕರಿಸಿ ಹೊರ ನಡೆದರು.
ನಾಡಹಬ್ಬಕ್ಕೆ ಚಾಲನೆಗೂ ಮುನ್ನ ವಂದೇ ಮಾತರಂ ಮತ್ತು ನಾಡಗೀತೆ ಹಾಡಲಾಯಿತು. ವಂದೇ ಮಾತರಂನ ಎರಡು ಚರಣಕ್ಕೆ ಮಾತ್ರ ಮ್ಯೂಸಿಕ್ ಸಿದ್ಧಪಡಿಸಲಾಗಿತ್ತು. ನಂತರ ನಾಡಗೀತೆ ರೆಕಾರ್ಡ್ ಬರಲು ಸಿದ್ಧಪಡಿಸಲಾಗಿತ್ತು. ಗಾಯಕಿಯರು ವಂದೇ ಮಾತರಂ ಎರಡು ಚರಣ ಹಾಡಿ ಮುಗಿಸಿದ್ದರು. ಮುಂದಿನ ಚರಣ ಹಾಡುತ್ತಿದ್ದಂತೆ ನಾಡಗೀತೆ ಶುರುವಾಗಿತ್ತು. ಆದರೆ ಗಾಯಕಿಯರು ವಂದೇ ಮಾತರಂ ಮುಂದುವರಿಸುತ್ತಿದ್ದಂತೆ ಮ್ಯೂಸಿಕ್ ಬಂದ್ ಮಾಡಲಾಯಿತು. ಗಾಯಕಿಯರು ಪೂರ್ಣ ಚರಣ ಹಾಡಿದರು. ನಂತರ ನಾಡಗೀತೆ ಆರಂಭವಾಯಿತು.
ಸರ್ಕಾರದ ಸೂಚನೆ ಧಿಕ್ಕರಿಸಿ ಪೂರ್ಣ ವಂದೇ ಮಾತರಂ ಹಾಡಿದ್ದಕ್ಕೆ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಸೂಡಾ ಅಧ್ಯಕ್ಷ ಮಧುಸೂದನ್, ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್, ನಾಗರಾಜ ಕಂಕಾರಿ, ಪಾಲಾಕ್ಷಿ, ಯಮುನಾ ರಂಗೇಗೌಡ, ರೇಖಾ ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಮತ್ತು ಶಾಸಕ ಎಸ್.ಎನ್.ಚನ್ನಬಸಪ್ಪ ವಿರುದ್ಧ ಘೋಷಣೆ ಕೂಗುತ್ತ ಕಾಂಗ್ರೆಸ್ ಮುಖಂಡರು ಹೊರನಡೆದರು.
ಎಚ್.ಸಿ.ಯೋಗೇಶ್ ಅವರು ವೇದಿಕೆ ಮೇಲೆಯೇ ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ವೇದಿಕೆಯಿಂದ ಹೊರನಡಯುವುದಾಗಿ ಘೋಷಿಸಿ ತೆರಳಿದರು.
ಸರ್ಕಾರದ ಸುತ್ತೋಲೆಯನ್ನು ಧಿಕ್ಕರಿಸಿ ಪೂರ್ಣ ವಂದೇ ಮಾತರಂ ಹಾಡಿಸಲಾಗಿದೆ. ಈ ಬಾರಿ ದಸರಾ ಉಸ್ತುವಾರಿ ಆಗಿರುವುದು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ. ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು ಎಂದು ಎಚ್.ಸಿ.ಯೋಗೀಶ್ ಹೇಳಿದರು. ನಾವು ದಸರಾ ವಿರೋಧಿಗಳಲ್ಲ. ಆದರೆ ಸರ್ಕಾರದ ಸುತ್ತೋಲೆಗೆ ಬೆಲೆ ಕೊಡದ ಸಭೆಯಲ್ಲಿ ಇರುವುದಿಲ್ಲ ಎಂದು ಹೊರಬಂದಿದ್ದೇವೆ ಎಂದರು.
ದಸರಾ ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ್ದನ್ನು ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸಿದ ಕಾಂಗ್ರೆಸ್ ನಾಯಕರ ಧೋರಣೆಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿರುವುದು ಸರಿಯಲ್ಲ. ದೇಶಭಕ್ತರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಇಲ್ಲ. ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ ಕಾರಣಕ್ಕೆ ಆಯುಕ್ತರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು. ವಂದೇ ಮಾತರಂ ಹಾಡುವುದರಿಂದ ಮುಸ್ಲಿಮರಿಗೆ ನೋವಾಗುತ್ತದೆ ಎಂಬ ಕಾರಣ ಮುಂದಿಟ್ಟು ಕಾಂಗ್ರೆಸ್ ನಾಯಕರು ದಸರಾ ಕಾರ್ಯಕ್ರಮ ಬಹಿಷ್ಕರಿಸಿರುವುದು ಸರಿಯಲ್ಲ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ದುರದೃಷ್ಟಕರ. ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಬೇಕು ಎಂಬುದು ಜನರ ಭಾವನೆಯಾಗಿದೆ. ಕಾರ್ಯಕ್ರಮದಲ್ಲಿ ಯಾವ ಗೀತೆಯನ್ನು ಎಷ್ಟು ಸಮಯ ಹಾಡಬೇಕು ಎಂಬ ವಿಚಾರದಲ್ಲಿ ಆಯುಕ್ತರನ್ನೇ ಗುರಿಯಾಗಿಸುವುದು ಸೂಕ್ತವಲ್ಲ ಎಂದರು.