ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಗೊಂದಲ ಪರಿಹಾರ | Minister Madhu Bangarappa

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು. ಎಸ್.ಕೆ.ಮರಿಯಪ್ಪ, ವಿಜಯಕುಮಾರ್, ನಗರದ ಮಹಾದೇವಪ್ಪ, ಶರತ್ ಮರಿಯಪ್ಪ ಇತರರಿದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರನ್ನು ಮುಖಂಡರು ಮತ್ತು ಕಾರ್ಯಕರ್ತರು ಅಭಿನಂದಿಸಿದರು. ಎಸ್.ಕೆ.ಮರಿಯಪ್ಪ, ವಿಜಯಕುಮಾರ್, ನಗರದ ಮಹಾದೇವಪ್ಪ, ಶರತ್ ಮರಿಯಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 2028ರಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ
  • ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ
  • ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಚಿವರಿಗೆ ಅಭಿನಂದನೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್‌(District Congress)ನಲ್ಲಿ ಸಣ್ಣಪುಟ್ಟ ಗೊಂದಲಗಳಿವೆ. ಅವುಗಳನ್ನು ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಯಲಿದ್ದು 2028ರಲ್ಲಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ(Minister Madhu Bangarappa) ಹೇಳಿದರು.
ಎರಡನೇ ಬಾರಿ ಸಚಿವರಾದ ಬಳಿಕ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ(District Congress Office)ಗೆ ಶನಿವಾರ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾರ್ಯಕರ್ತರಲ್ಲಿ ಶಕ್ತಿ ಹೆಚ್ಚಿರುವ ಕಡೆಗಳಲ್ಲಿ ಇಂತಹ ಗೊಂದಲ, ಗಲಾಟೆಗಳು ಆಗುವುದು ಸಹಜ. ಆದರೆ ಅವುಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗುವುದು ಎಂದರು.
ಜಿಲ್ಲೆಯಿಂದ ಶಾಸಕ ಗೋಪಾಲಕೃಷ್ಣ ಬೇಳೂರು(MLA Gopalakrishna Belur) ಮತ್ತು ಬಿ.ಕೆ.ಸಂಗಮೇಶ್ವರ(B.K.Sangameshwar) ಕೂಡ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಪಟ್ಟಿದ್ದರು. ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಅವಕಾಶ ನೀಡಿದೆ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಶಿಕ್ಷಣ ಖಾತೆ ನೀಡಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು. ಆದರೆ ಅಷ್ಟೇ ಸವಾಲಿನಿಂದ ಕೂಡಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ಆತ್ಮತೃಪ್ತಿ ನನಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಮಧು ಬಂಗಾರಪ್ಪ ಅವರು ಎರಡನೇ ಅವಧಿಗೆ ಸಚಿವರಾಗಿರುವುದರಿಂದ ಜಿಲ್ಲೆಯಲ್ಲಿ ಹೊಸ ಶಕೆ ಆರಂಭಗೊಂಡಿದೆ. ಶಿಕ್ಷಣ ಇಲಾಖೆ(Education Department)ಯಲ್ಲಿ ಅವರು ಜಾರಿಗೆ ತಂದ ಅನೇಕ ಯೋಜನೆಗಳು ಫಲಪ್ರದವಾಗಿವೆ. ಇಲಾಖೆಯಲ್ಲಿ ಬಹಳಷ್ಟು ಸುಧಾರಣೆ ತಂದಿದ್ದಾರೆ. ರಾಜ್ಯದಲ್ಲಿ ಒಂದು ಸಾವಿರ ಕೆಪಿಎಸ್ ಆರಂಭಗೊಳ್ಳುತ್ತಿವೆ. ಸರ್ಕಾರದಿಂದ ಮಾತ್ರವಲ್ಲದೆ ಬೇರೆ ಬೇರೆ ಮೂಲದಿಂದಲೂ ಅನುದಾನ ತಂದರು. ಹಳೇ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಆಯಾ ಶಾಲೆಗಳ ಅಭಿವೃದ್ಧಿ ಮಾಡಿಸಿದ್ದು ಮಧು ಬಂಗಾರಪ್ಪ ಅವರಿಗೆ ಶಿಕ್ಷಣ ಖಾತೆಯನ್ನೇ ಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.
ಜಿಲ್ಲೆಯಿಂದಲೂ ಮತ್ತಿಬ್ಬರು ಶಾಸಕರು ಸಚಿವ ಸ್ಥಾನ ಕೇಳಿದ್ದರು. 2028ರಲ್ಲಿ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ವರಿಷ್ಠರು ಮಧು ಬಂಗಾರಪ್ಪ ಅವರಿಗೆ ಜವಾಬ್ದಾರಿ ನೀಡಿದ್ದಾರೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಪಕ್ಷಕ್ಕಾಗಿ ಎಲ್ಲರೂ ಒಂದಾಗಿ ಹೋಗಬೇಕಿದೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಿದೆ ಎಂದು ಮನವಿ ಮಾಡಿದರು.
ಎಂಎಲ್ಸಿ ಬಲ್ಕಿಷ್ ಬಾನು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜವಳಿ ಕೈಮಗ್ಗ ಅಭಿವೃದ್ಧಿ (ವಿದ್ಯುತ್) ನಿಗಮದ ಅಧ್ಯಕ್ಷ ಚೇತನ್ ಗೌಡ, ಮುಖಂಡರಾದ ಎಸ್.ಕೆ.ಮರಿಯಪ್ಪ, ಕಲಗೋಡು ರತ್ನಾಕರ್, ಎನ್.ರಮೇಶ್, ವಿಜಯಕುಮಾರ್, ವೇದಾ ವಿಜಯಕುಮಾರ್, ನಗರದ ಮಹಾದೇವಪ್ಪ, ಎಚ್.ಸಿ.ಯೋಗೇಶ್, ಜಿ.ಡಿ.ಮಂಜುನಾಥ, ಮಧುಸೂಧನ್, ಎಚ್.ಪಿ.ಗಿರೀಶ್, ಶರತ್ ಮರಿಯಪ್ಪ, ಸಿ.ಎಚ್.ಚಂದ್ರಭೂಪಾಲ್, ಶಿವಕುಮಾರ್ ಮತ್ತಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net