19ಕ್ಕೆ ರೈತ ನಾಯಕ ರುದ್ರಪ್ಪ ಸ್ಮರಣೆ ಕಾರ್ಯಕ್ರಮ I raita leader rudrappa

 ಕೊಡಿಹಳ್ಳಿ ಚಂದ್ರಶೇಖರ್, ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ
ಕೊಡಿಹಳ್ಳಿ ಚಂದ್ರಶೇಖರ್, ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ
Published on

ಪ್ರಮುಖ ಮುಖ್ಯಾಂಶಗಳು

  • ವಿಚಾರ ಸಂಕಿರಣ ಆಯೋಜನೆ
  • ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ
ಶಿವಮೊಗ್ಗ:

ರಾಜ್ಯ ರೈತ (raita) ಸಂಘ ಹಾಗೂ ಹಸಿರು ಸೇನೆಯ ಕೇಂದ್ರ ಕಚೇರಿಯಿಂದ ಆ.19ರ ಬೆಳಗ್ಗೆ 11.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ರೈತ ಸಂಘದ ಸಂಸ್ಥಾಪಕ ಎಚ್.ಎಸ್.ರುದ್ರಪ್ಪ (rudrappa) ನೆನಪಿನ ಕಾರ್ಯಕ್ರಮದ (programme) ಅಂಗವಾಗಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಮಲೆನಾಡಿನಲ್ಲಿ ಪ್ರತಿಧ್ವನಿಸುತ್ತಿರುವ ಅಣು ವಿದ್ಯುತ್ ಸ್ಥಾವರದ ಸ್ಥಾಪನೆ, ಬಗರ್‌ಹುಕುಂ ಮುಂತಾದ ಜ್ವಲಂತ ಸಮಸ್ಯೆ ಬಗ್ಗೆ ವಿಚಾರ ಸಂಕಿರಣದಲ್ಲಿ ಬೆಳಕು ಚೆಲ್ಲಲಾಗುವುದು. ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ವಿಚಾರ ಸಂಕಿರಣ ಉದ್ಘಾಟಿಸುವರು ಎಂದರು.
ಅಣು ವಿದ್ಯುತ್ ಸ್ಥಾವರದ ನಾಳಿನ ಅಪಾಯಗಳ ಕುರಿತು ಪರಿಸರವಾದಿ ಪ್ರೊ. ಬಿ.ಎಂ.ಕುಮಾರಸ್ವಾಮಿ, ಶರಾವತಿ ಹಿನ್ನೀರಿಗೆ ಹೊಸ ಯೋಜನೆ-ವಿದ್ಯುತ್ ಉತ್ಪಾದನೆ ನಂತರ ನಡೆಯುವ ಅಪಾಯಗಳ ಕುರಿತು ಪರಿಸರ ತಜ್ಞ ಅಖಿಲೇಶ್ ಚಿಪ್ಲಿ, ಬಗರ್‌ಹುಕುಂ ಹಾಗೂ ರಾಜ್ಯದಲ್ಲಿ ಬರ ಕುರಿತು ಲೇಖಕ ಡಾ. ಸರ್ಫ್ರರಾಜ್ ಚಂದ್ರಗುತ್ತಿ ವಿಚಾರ ಮಂಡಿಸಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ಪ್ರವಾಸಿ ಮಂದಿರದ ವೃತ್ತದಿಂದ ಅಂಬೇಡ್ಕರ್ ಭವನದವರೆಗೆ ಎಚ್.ಎಸ್.ರುದ್ರಪ್ಪ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ರೈತ ಮುಖಂಡರಾದ ಮಂಜುನಾಥ್ ಗೌಡ, ಉಮೇಶ್ ಪಾಟೀಲ್, ವಸಂತ್‌ಕುಮಾರ್, ಮಂಜುನಾಥ್ ಅರೆಕೊಪ್ಪ, ಎಚ್.ಪಿ.ಸತೀಶ್, ರೀಟಾ, ದಾನೇಶ್, ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.

ಅಮೆರಿಕ ಅತ್ಯಂತ ಅಪಾಯಕಾರಿ

ಅಮೆರಿಕದ ಸರಕುಗಳು ಭಾರತದೊಳಕ್ಕೆ ಬರಲು ಕೇಂದ್ರ ಸರ್ಕಾರ ಅನುಮತಿ ನೀಡಬಾರದು. ಅಮೆರಿಕದ ಮೇಲಿನ ಅವಲಂಬನೆ ಅತ್ಯಂತ ಅಪಾಯಕಾರಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಜೂಕು ಮನುಷ್ಯ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅರ್ಥ ಮಾಡಿಕೊಳ್ಳಬೇಕು. ನಮ್ಮ ದೇಶದೊಳಗೆ ಅಮೆರಿಕವನ್ನು ಬೆಂಬಲಿಸುವ ಶಕ್ತಿಗಳು ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೃಷಿ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಿದೆ. ಹೀಗಾಗಿ ಅಮೆರಿಕದಿಂದ ಆಮದು ಸಲ್ಲದು ಎಂದು ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
"

ಕೆಎಸ್‌ಆರ್‌ಟಿಸಿ ನೌಕರರ ವಿಚಾರವಾಗಿ ನಡೆಯುತ್ತಿರುವ ಹೋರಾಟ ಕೈ ಬಿಟ್ಟಿಲ್ಲ. ಈಗಾಗಲೇ ಅನೇಕ ಸಂಘಟನೆಗಳು ಹೋರಾಟದ ಪರವಾಗಿ ಸಕ್ರಿಯಗೊಂಡಿವೆ. ಚರ್ಚೆಗಳನ್ನು ನಡೆಸುತ್ತಿವೆ. ನಮ್ಮ ಸಂಘಟನೆಗೆ ಹೋರಾಟಕ್ಕೆ ಆಹ್ವಾನ ನೀಡಿದರೆ ಅಗತ್ಯ ಸಹಕಾರ ನೀಡಲಾಗುವುದು.

— ಕೋಡಿಹಳ್ಳಿ ಚಂದ್ರಶೇಖರ್ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net