ಮಲೆನಾಡಿನ ಮನೆಗಳಲ್ಲಿ ಗೋಪೂಜೆ ಸಂಭ್ರಮ deepavali gopooje

ಶಿವಮೊಗ್ಗ:ಕೆಮ್ಮಣು, ಜೇಡಿ ಮಣ್ಣಿನಿಂದ ವಿಶೇಷವಾಗಿ ಅಲಂಕೃತಗೊಂಡ, ನವ ವಧುಗಳಂತೆ ಸಿಂಗಾರಗೊಂಡ ಎತ್ತು ಹಾಗೂ ಹಸು. ಚೆಂಡು ಹೂವಿನಿಂದ ಸಿಂಗಾರಗೊಂಡ ಹಸುಗಳು. ಒಂದರ ಹಾರವನ್ನು ಹರಿಯಲು ಮತ್ತೊಂದು ಹಸುವಿನ ಪೈಪೋಟಿ. ಇದು ಸೋಮವಾರ ಹಾಗೂ ಮಂಗಳವಾರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಂಡು ಬಂದ ದೃಶ್ಯಾವಳಿಗಳು.
deepavali gopooje
ಶಿವಮೊಗ್ಗದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಗೋಪೂಜೆ ನೆರವೇರಿಸಿದರು.
Published on: 

ಶಿವಮೊಗ್ಗ:ಕೆಮ್ಮಣು, ಜೇಡಿ ಮಣ್ಣಿನಿಂದ ವಿಶೇಷವಾಗಿ ಅಲಂಕೃತಗೊಂಡ, ನವ ವಧುಗಳಂತೆ ಸಿಂಗಾರಗೊಂಡ ಎತ್ತು ಹಾಗೂ ಹಸು. ಚೆಂಡು ಹೂವಿನಿಂದ ಸಿಂಗಾರಗೊಂಡ ಹಸುಗಳು. ಒಂದರ ಹಾರವನ್ನು ಹರಿಯಲು ಮತ್ತೊಂದು ಹಸುವಿನ ಪೈಪೋಟಿ. ಇದು ಸೋಮವಾರ ಹಾಗೂ ಮಂಗಳವಾರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಂಡು ಬಂದ ದೃಶ್ಯಾವಳಿಗಳು.

ದೀಪಾವಳಿಯ ಬಲಿಪಾಡ್ಯಮಿಯಂದು ಎತ್ತು ಹಾಗೂ ಹಸುಗಳಿಗೆ ವಿಶೇಷ ಪೂಜೆ ನಿಮಿತ್ತ ಗ್ರಾಮೀಣ ಭಾಗದಲ್ಲಿ ಸಡಗರದ ವಾತಾವರಣ ನಿರ್ಮಾಣವಾಗಿತ್ತು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೆಲ ಗೋಶಾಲೆಗಳಲ್ಲಿ ಸಾಮೂಹಿಕ ಗೋಪೂಜೆಗೂ ವ್ಯವಸ್ಥೆ ಮಾಡಲಾಗಿತ್ತು.

ಕೃಷಿಯೇ ಮುಖ್ಯ ಜೀವನಾಧಾರವಾದ ಜಿಲ್ಲೆಯಲ್ಲಿ ವರ್ಷವಿಡೀ ತನ್ನನ್ನು ಹಾಗೂ ತನ್ನ ಕುಟುಂಬವನ್ನು ಪೊರೆಯುವ ಆಕಳು ಹಾಗೂ ಎತ್ತುಗಳಿಗೆ ಕೃಷಿಕ ಹಾಗೂ ಆತನ ಕುಟುಂಬ ವಿಶೇಷವಾಗಿ ಕೃತಜ್ಞತೆ ಸಲ್ಲಿಸುವ ದಿನವೇ ಬಲಿಪಾಡ್ಯಮಿ. ಚೆಂಡು ಹೂವಿನೊಂದಿಗೆ ಪಚ್ಚೆತೆನೆ, ಸಿಂಗಾರ (ಹಿಂಗಾರ), ವೀಳ್ಯದೆಲೆ, ಹಣ್ಣು, ಅಡಿಕೆ ಮುಂತಾದವುಗಳನ್ನು ಸೇರಿಸಿದ ಮಾಲೆಗಳನ್ನು ಸಿದ್ಧಪಡಿಸಿ ಆಕಳನ್ನು ಸಿಂಗರಿಸಲಾಗಿತ್ತು. ಕೆಲವರು ಮನೆಯ ಒಳಗಡೆ ಗೋವುಗಳನ್ನು ಕರೆತಂದು ಪೂಜೆ ಸಲ್ಲಿಸಿದರೆ. ಇನ್ನು ಕೆಲವರು ಕೊಟ್ಟಿಗೆಯಲ್ಲೇ ಆರಾಧಿಸಿದರು.

ಹಲವೆಡೆ ಎತ್ತುಗಳಿಗೆ ಚೆಂಡುಹೂವು ಮತ್ತಿತರ ಹೂವುಗಳಿಂದ ಸಿಂಗರಿಸಿ, ನಂತರ ಅವುಗಳ ಕೊಂಬಿಗೆ ಬಣ್ಣ ಹಚ್ಚಿ ಸಿಂಗರಿಸಲಾಗಿತ್ತು. ಸಿಂಗಾರಗೊಂಡ ಎತ್ತುಗಳಿಗೆ ಪೂಜೆ ಸಲ್ಲಿಸಿ ನಂತರ ಊರಿನ ಸುತ್ತಲೂ ಮೆರವಣಿಗೆ ನಡೆಸಲಾಯಿತು. ಸಗಣಿಯಿಂದ ಕೊಟ್ಟಿಗೆ ಬಳಿದು, ಬಾಗಿಲಿಗೆ ರಂಗೋಲಿ ಹಾಕಿ ನಂತರ ಇಡೀ ಕೊಟ್ಟಿಗೆಯಲ್ಲಿ ಕೆಮ್ಮಣ್ಣು ಹಾಗೂ ಜೇಡಿ ಮಣ್ಣಿನಿಂದ ಚಿತ್ರ ಬರೆಯಲಾಗಿತ್ತು. ಜಾನುವಾರುಗಳನ್ನು ಕಟ್ಟುವ ಕಂಬಗಳನ್ನೂ ಕೆಮ್ಮಣ್ಣು ಹಾಗೂ ಜೇಡಿ ಮಣ್ಣಿನಿಂದ ಸಿಂಗರಿಸಲಾಗಿತ್ತು.

ಬಲಿಪಾಡ್ಯಮಿಯಿಂದ ಐದು ದಿನಗಳವರೆಗೂ ಗೋವುಗಳಿಗೆ ಪ್ರತಿದಿನ ಒಂದೊಂದು ಬಣ್ಣದ ಓಕುಳಿ ಚುಮುಕಿಸಿ ಕೊಟ್ಟಿಗೆಗೆ ಪ್ರವೇಶಿಸಲು ಬಿಡಲಾಗುತ್ತದೆ. ಬೆಳಗ್ಗೆ ಮೇಯಲು ಕಾಡಿಗೆ ಹೋಗುವ ಜಾನುವಾರುಗಳು ಸಂಜೆ ವೇಳೆಗೆ ಕೊಟ್ಟಿಗೆಗೆ ಬರುವ ಸಂದರ್ಭದಲ್ಲಿ ಇದನ್ನೇ ಕಾಯುತ್ತಿರುವ ಮನೆಯ ಸದಸ್ಯರೊಬ್ಬರು ಕೊಟ್ಟಿಗೆ ಪ್ರವೇಶಕ್ಕೆ ಮುನ್ನವೇ ಎಲ್ಲ ಗೋವುಗಳಿಗೂ ಓಕುಳಿ ಚಿಮುಕಿಸುತ್ತಾರೆ. ನಂತರವೇ ಗೋವುಗಳಿಗೆ ಕೊಟ್ಟಿಗೆ ಪ್ರವೇಶ.

ಜಿಲ್ಲೆಯ ವಿವಿಧೆಡೆ ರೈತ ಸಮುದಾಯ ಕೃಷಿ ಪರಿಕರಗಳನ್ನು ಜೋಡಿಸಿ, ಅವುಗಳನ್ನು ಹೂವು, ಜೇಡಿ ಮಣ್ಣು, ಸುಣ್ಣ ಬಳಿದರು. ಈ ಮೂಲಕ ಬಲೀಂದ್ರನ ಪೂಜೆ ನೆರವೇರಿಸಿದರು. ನೇಗಿಲು, ಪಿಕಾಸಿ, ಗುದ್ದಲಿ, ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಪೂಜಿಸಲಾಯಿತು.