ಸಾಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2025-26ನೇ ಸಾಲಿನ ಬಿ.ವಿ.ಕಾರಂತ ಪ್ರಶಸ್ತಿಗೆ ರಂಗಕರ್ಮಿ ಪ್ರಸನ್ನ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು ಹಾಗೂ ಫಲಕ ಒಳಗೊಂಡಿದೆ.
ಗಾಂಧಿವಾದಿ ಪ್ರಸನ್ನ ಅವರು ರಂಗಭೂಮಿ, ಸಾಂಸ್ಕೃತಿಕ ಚಟುವಟಿಕೆ, ಸಾಮಾಜಿಕ ಚಳವಳಿ ಮೂಲಕ ನಾಡಿನ ಜನಮಾನಸದಲ್ಲಿ ನೆಲೆಯಾದವರು. ಐದು ದಶಕದಿಂದ ನಿರಂತರವಾಗಿ ಹಲವು ಸ್ವರೂಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸಾಧನೆ ಪರಿಗಣಿಸಿ ಬಿ.ವಿ.ಕಾರಂತ ಪ್ರಶಸ್ತಿ ನೀಡಲಾಗಿದೆ.
ಪ್ರಶಸ್ತಿ ಬಂದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರಂಗಕರ್ಮಿ ಪ್ರಸನ್ನ, ಬಿ.ವಿ.ಕಾರಂತ ಹೆಸರಿನಲ್ಲಿ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ರಂಗಭೂಮಿಯಲ್ಲಿ ಕಾರಂತ ಅವರದು ದೊಡ್ಡ ಹೆಸರು. ಪ್ರಶಸ್ತಿ ಸ್ವೀಕರಿಸುವುದು ಎಂದರೆ ಸಮಾಜ ನೀಡುವ ಗೌರವವನ್ನು ಸ್ವೀಕರಿಸುವುದು ಎಂದರ್ಥ. ನನಗೆ ಪ್ರಶಸ್ತಿಯ ಹಣ ಅಗತ್ಯವಿಲ್ಲ. ಚರಕ ಸಂಸ್ಥೆಗೆ ಪ್ರಶಸ್ತಿ ಹಣ ನೀಡುತ್ತೇನೆ ಎಂದರು.
ಚರಕದ ಮಹಿಳೆಯರು ಕೈಮಗ್ಗ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಚರಕದ ಅಡಿಯಲ್ಲಿ ಗಾಂಧಿ ಸಂಸ್ಥೆ ಆರಂಭಿಸಲು ಸಿದ್ಧತೆ ಕೈಗೊಂಡಿದ್ದಾರೆ. ಈ ಸಂಸ್ಥೆ ಮೂಲಕ ಕನ್ನಡದ ಯುವಜನರಿಗೆ ಸುಸ್ಥಿರ ಬದುಕಿನ ತರಬೇತಿ ನೀಡಲು ಮುಂದೆ ಬಂದಿರುವುದು ಸಂತಸದ ಸಂಗತಿ. ಗಾಂಧಿ ಸಂಸ್ಥೆ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದಿದ್ದಾರೆ. ನಾನು ಸಂತೋಷದಿಂದ ಒಪ್ಪಿದ್ದೇನೆ. ಈ ಸತ್ಕಾರ್ಯಕ್ಕೆ ಪ್ರಶಸ್ತಿಯ ಹಣ ವಿನಿಯೋಗವಾಗಲಿದೆ ಎಂದು ತಿಳಿಸಿದರು.