ಅಂಗವಿಕಲ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ

ಸಾಗರ ತಾಲೂಕಿನ ಭೀಮನಕೋಣೆಯಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಉದ್ಘಾಟಿಸಿದರು. ರೂಪ್‌ಸಿಂಗ್, ಸುವರ್ಣಾ ನಾಯಕ್ ಇತರರಿದ್ದರು.
ಸಾಗರ ತಾಲೂಕಿನ ಭೀಮನಕೋಣೆಯಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರವನ್ನು ಸಾಗರ ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್ ಉದ್ಘಾಟಿಸಿದರು. ರೂಪ್‌ಸಿಂಗ್, ಸುವರ್ಣಾ ನಾಯಕ್ ಇತರರಿದ್ದರು.
Published on
ಸಾಗರ: ಅಂಗವಿಕಲ ಮಕ್ಕಳನ್ನು ನೋಡಿಕೊಳ್ಳುವುದು ಸವಾಲಿನ ಕೆಲಸ. ಅವರಿಗೆ ಗುಣಮಟ್ಟದ ಶಿಕ್ಷಣ ನೀಡಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಹೇಳಿದರು.
ತಾಲೂಕಿನ ಭೀಮನಕೋಣೆಯಲ್ಲಿ ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್‌ನಿಂದ ಅಂಗವಿಕಲ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೇತ ಮಕ್ಕಳಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆ ಮಾಡುವ ಶೈಕ್ಷಣಿಕ ಕೆಲಸವು ಸಮಾಜಸೇವೆ ಆಗಿದೆ. ಸಂಸ್ಥೆಯು ಜಾಗ ಮಂಜೂರಾತಿಗೆ ಮಾಡಿರುವ ಮನವಿಯನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಸ್ಪೆಷಲ್ ಒಲಿಂಪಿಕ್ಸ್ ಉಪಾಧ್ಯಕ್ಷ ರೂಪ್‌ಸಿಂಗ್ ಮಾತನಾಡಿ, ಅಂಗವಿಕಲ ಮಕ್ಕಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅವರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ರಾಜ್ಯದ ಅಂಗವಿಕಲ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ ಎಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸುವರ್ಣಾ ನಾಯಕ್ ಮಾತನಾಡಿ, ಅಂಗವಿಕಲ ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರ ಪಾತ್ರದ ಜತೆ ಪಾಲಕರ ಶ್ರಮವೂ ಬೇಕಾಗುತ್ತದೆ. ಮಕ್ಕಳು ಕುಗ್ಗದಂತೆ ಅವರಲ್ಲಿ ನೈತಿಕ ಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ತಿಳಿಸಿದರು.
ಶಂಕರ ಕಣ್ಣಿನ ಆಸ್ಪತ್ರೆ ವೈದ್ಯೆ ಡಾ. ರಾಧಿಕಾ, ಭೀಮನಕೋಣೆ ಗ್ರಾಪಂ ಪಿಡಿಒ ಜಯಮಾಲಾ, ಶಾಂತಲಾ ಎಸ್.ಭಟ್, ಬಿ.ಎಚ್.ರಾಘವೇಂದ್ರ, ಮಹಮ್ಮದ್ ಫಕೀರ್, ನಾಗರಾಜ್ ಭಟ್, ಜ್ಯೋತಿ ಕೆರೆಮನೆ, ನಾಗರಾಜ್, ವೆಂಕಟೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net