ಭದ್ರಾ ಅಚ್ಚುಕಟ್ಟುದಾರರು ನಿರಾತಂಕ I bhadra farmars

ಭದ್ರಾ ಜಲಾಶಯ.
ಭದ್ರಾ ಜಲಾಶಯ.
Published on

ಪ್ರಮುಖ ಮುಖ್ಯಾಂಶಗಳು

  • ಡ್ಯಾಂನಲ್ಲಿ 157 ಅಡಿ ಜಲ ಸಂಗ್ರಹ
  • ಮೇ ಮಧ್ಯದವರೆಗೆ ತೊಂದರೆಯಿಲ್ಲ
  • ಗದ್ದೆ, ತೋಟಗಳಿಗೆ ನಿರಂತರ ಹರಿಯುತ್ತಿದೆ ನೀರು
  • ಮುಂಗಾರುಪೂರ್ವ ಮಳೆಯೂ ಉತ್ತಮ
ಅರವಿಂದ ಅಕ್ಲಾಪುರ ಶಿವಮೊಗ್ಗ
ಬೇಸಿಗೆ (summer) ಸಂದರ್ಭ ಅಚ್ಚುಕಟ್ಟುದಾರರಲ್ಲಿ ಕಳವಳ ಮೂಡಿಸುತ್ತಿದ್ದ ಭದ್ರೆ ಈ ಬಾರಿಯೂ ರೈತರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಜಲಾಶಯ (dam) ದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿದ್ದ ನೀರಿನ ಸಂಗ್ರಹಕ್ಕಿಂತಲೂ ತುಸು ಕಡಿಮೆ ಪ್ರಮಾಣದಲ್ಲಿ ನೀರಿನ ಸಂಗ್ರಹ (storage) ವಿದೆ. ಆದರೆ ನಿರಾಂತಕವಾಗಿ ಬೇಸಿಗೆ ಕಳೆಯಲು ಸಮಸ್ಯೆಯಿಲ್ಲ.
ಕೆಲಬಾರಿ ಮುಂಗಾರು ಹಂಗಾಮಿನಲ್ಲೇ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ಅಗತ್ಯವಿರುವಷ್ಟು ನೀರಿನ ಸಂಗ್ರಹ ಜಲಾಶಯದಲ್ಲಿರಲಿಲ್ಲ. ಆದರೆ ಈ ವರ್ಷ ಯಾವುದೇ ಅಡೆತಡೆಯಿಲ್ಲದೆ ರೈತರು ಎರಡು ಬೆಳೆ ತೆಗೆದಿದ್ದಾರೆ. ಈ ಬಾರಿ ಬೇಸಿಗೆ ಬೆಳೆಗೆ ಮೇ ಎರಡನೇ ವಾರದವರೆಗೂ ನಿರಂತರ ನೀರು ಪೂರೈಸುವ ಕ್ಷಮತೆ ಜಲಾಶಯಕ್ಕಿದೆ. ಜತೆಗೆ ಮುಂಗಾರುಪೂರ್ವ ಮಳೆಯೂ ಬಹುತೇಕ ಕಡೆಗಳಲ್ಲಿ ಉತ್ತಮವಾಗಿದೆ.
ಭದ್ರೆ ಪಕ್ಕದ ಜಿಲ್ಲೆಯ ಜೀವನಾಡಿ ಮಾತ್ರವಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಚಾರದ ಕಣದಲ್ಲೂ ರಾಜಕೀಯಕ್ಕೆ ಬಳಸಿಕೊಳ್ಳುವುದು ಸಾಮಾನ್ಯ. ಆದರೆ ದಾವಣಗೆರೆ ದಕ್ಷಿಣದ ಉಪಚುನಾವಣೆಯಲ್ಲಿ ಭದ್ರೆಯ ಪ್ರಸ್ತಾಪವೇ ಆಗುತ್ತಿಲ್ಲ. ಈ ವರ್ಷ ಭದ್ರಾ ಅಚ್ಚುಕಟ್ಟುದಾರರು ನೆಮ್ಮದಿಯಾಗಿದ್ದಾರೆ. ಭತ್ತದ ಎರಡನೇ ಬೆಳೆಗೆ ನಿರಂತರ ನೀರು ಸಿಗುವುದರಿಂದ ಉತ್ತಮ ಫಸಲಿನ ನಿರೀಕ್ಷೆಯಲಿದ್ದಾರೆ. ಇನ್ನೊಂದೆಡೆ ಭದ್ರೆಯನ್ನು ಜಪಿಸುತ್ತ ಮತ ಕೊಯ್ಲು ಮಾಡಿಕೊಳ್ಳಲು ಬಯಸುತ್ತಿದ್ದವರಿಗೆ ಭರ್ತಿ ನಿರಾಸೆಯಾಗಿದೆ.
ಈ ಹಿಂದೆ ಬರಗಾಲದ ಸಂದರ್ಭ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ದಿಕ್ಕೆಟ್ಟು ಕುಳಿತಿದ್ದರೆ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ವಾಕ್ಸಮರ ನಡೆದಿರುವ ನಿದರ್ಶನಗಳಿವೆ. ಅದರಲ್ಲೂ ಚುನಾವಣೆ ವರ್ಷಗಳಲ್ಲಿ ನೂರಾರು ಮಂದಿ ಅಚ್ಚುಕಟ್ಟುದಾರರು ಭದ್ರಾ ಕಾಡಾ ಕಚೇರಿ ಎದುರು ಜಮಾಯಿಸಿ ಕೈ ಮಿಲಾಯಿಸಿದ್ದು ಈಗ ಇತಿಹಾಸ. ಆದರೆ ಈ ಬಾರಿ ಅಂತಹ ಯಾವುದೇ ಬೆಳವಣಿಗೆಗಳಿಗೆ ಅವಕಾಶ ಇಲ್ಲದಂತಾಗಿದೆ.


ಹಲವು ಬಾರಿ ತೊಂದರೆ

ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ 2015-2017ರ ಅವಧಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೇಸಿಗೆಯಲ್ಲಿ ಉಳಿಸಿಕೊಳ್ಳುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಜಲಾಶಯದಲ್ಲಿ ನೀರು ಕಡಿಮೆ ಸಂಗ್ರಹವಾಗಿದ್ದೇ ಅದಕ್ಕೆ ಕಾರಣ. 2015ರಲ್ಲಿ ಗರಿಷ್ಠ 168, 2016ರಲ್ಲಿ 158 ಹಾಗೂ 2017ರಲ್ಲಿ 172 ಅಡಿ ನೀರು ಸಂಗ್ರಹವಾಗಿತ್ತು. 2002-03 ಹಾಗೂ 2003-04ರಲ್ಲಿ ಬರದ ಪರಿಣಾಮ ಜಲಾಶಯ ಭರ್ತಿ ಆಗಿರಲಿಲ್ಲ. 2002ರಲ್ಲಿ ಮುಂಗಾರು ಹಂಗಾಮಿಗೆ 97 ದಿನ ಹಾಗೂ 2003ರಲ್ಲಿ 98ದಿನ ಮಾತ್ರ ನೀರು ಹರಿಸಲಾಗಿತ್ತು. 2007ರಲ್ಲಿ ಭದ್ರಾ ನಾಲಾ ಆಧುನೀಕರಣದ ನಿಮಿತ್ತ ಮುಂಗಾರು ಹಂಗಾಮಿಗೆ ನೀರು ಹರಿಸಿರಲಿಲ್ಲ. 1946ರಲ್ಲಿ ಭದ್ರಾ ಜಲಾಶಯ ನಿರ್ಮಾಣ ಕಾರ್ಯ ಆರಂಭವಾಯಿತು. 1962-63ರಿಂದ ನೀರು ಸಂಗ್ರಹ ಮಾಡಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಜಲಾಶಯದಲ್ಲಿ ಗರಿಷ್ಠ ನೀರು ಸಂಗ್ರಹವಾಗದ ಅನೇಕ ಸಂದರ್ಭಗಳಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಸಮಸ್ಯೆಗೀಡಾಗಿದ್ದಾರೆ.

ಭದ್ರಾ ಅಚ್ಚುಕಟ್ಟು ವ್ಯಾಪ್ತಿ

ಬೆಳೆ, ಹೆಕ್ಟೇರ್
ಭತ್ತ-40,000
ತೋಟ-2,436
ಕಬ್ಬು-12,000
ಅರೆ ನೀರಾವರಿ-51,134
ಒಟ್ಟು-1,05,570

ನೀರಿನ ಸಂಗ್ರಹ (ಇದೇ ಅವಧಿ)

ಕಳೆದ ವರ್ಷ-159.2
ಈ ವರ್ಷ -157.7

ಹೀಗಿದೆ ಬೇಸಿಗೆಯಲ್ಲಿ ನೀರಿನ ಹಂಚಿಕೆ (ಟಿಎಂಸಿಗಳಲ್ಲಿ)

ಕಾಲುವೆ ಮೂಲಕ ಕುಡಿಯುವ ನೀರಿನ ಯೋಜನೆಗಳಿಗೆ-2.05
ನದಿ ಮೂಲಕ ಕುಡಿಯುವ ನೀರು ಯೋಜನೆಗಳಿಗೆ-3.38
ಭದ್ರಾವತಿ ವಿಭಾಗದ ವ್ಯಾಪ್ತಿಯ ಕೈಗಾರಿಕೆಗಳಿಗೆ-1.60
ದಾವಣಗೆರೆ ವಿಭಾಗದ ವ್ಯಾಪ್ತಿಯ ಕೈಗಾರಿಕೆಗಳಿಗೆ-1.33
ಜನವರಿ-ಮೇವರೆಗೆ ಆವಿಯಾಗುವ ನೀರು-1.91 ಟಿಎಂಸಿ
ಡೆಡ್ ಸ್ಟೋರೇಜ್-13.83

ದೀರ್ಘಾವಧಿ ಯೋಜನೆಗಳು ಅವಶ್ಯ

ಭದ್ರಾ ಜಲಾಶಯದ ಈಗಿನ ಸ್ಥಿತಿ ಆಶಾದಾಯಕವಾಗಿದೆ. ಆದರೆ ಪ್ರತಿ ವರ್ಷ ಮುಂಗಾರಿನಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾದರೆ ಅಥವಾ ಕಡೇ ಪಕ್ಷ 180 ಅಡಿ ನೀರಿನ ಸಂಗ್ರಹ ತಲುಪಿದರಷ್ಟೇ ರೈತರ ಆತಂಕ ದೂರವಾಗುತ್ತದೆ. ಇದುವರೆಗೆ ಹಲವು ವರ್ಷ ರೈತರು ಮುಂಗಾರು ಹಂಗಾಮಿನಲ್ಲೂ ಭತ್ತ ಬೆಳೆಯಲು ಸಾಧ್ಯವಾಗದ ನಿದರ್ಶಗಳೂ ಇವೆ. ನಾಲೆಗೆ ಕಾಯಕಲ್ಪ ನೀಡುವುದೂ ಸೇರಿ ಅನೇಕ ಕಾಮಗಾರಿಗಳಿಗೆ ಇದು ಸಕಾಲ. ಜಲಾಶಯದ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾದ ಅನೇಕ ಮಾರ್ಗೋಪಾಯಗಳು ಇಲ್ಲಿವೆ.

ಭದ್ರಾ ನಾಲೆಗಳ ದುರಸ್ತಿ

ಸಿಬ್ಬಂದಿಗೆ ನೀರಿನ ನಿರ್ವಹಣೆ ತರಬೇತಿ

ತಗ್ಗು ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯುವುದು

ಪರ್ಯಾಯ ಬೆಳೆಗಳತ್ತ ಆಲೋಚನೆ

ನದಿ ನೀರಿಗೆ ಚೆಕ್ ಡ್ಯಾಂ ನಿರ್ಮಾಣ

ನೀರು ಬಳಕೆದಾರರ ಸಂಘಕ್ಕೆ ನೀರು ನಿರ್ವಹಣೆ ಹೊಣೆ

ತೋಟದ ಬೆಳೆಗಳಿಗೆ ತುಂತುರು ನೀರಾವರಿ ಕಡ್ಡಾಯ

ಕುಡಿಯುವ ನೀರಿಗೆ ಜಲಾಶಯದ ಬದಲಿಗೆ ನದಿ ಅವಲಂಬನೆ

ಯೋಚನೆಗೆ ಇದು ಸಕಾಲ

ಪ್ರತಿ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗದೆ ಸಂಕಷ್ಟ ಎದುರಿಸುವ ಅಚ್ಚುಕಟ್ಟು ಪ್ರದೇಶದ ಸಫರಿಂಗ್ ಜೋನ್ ಗುರುತಿಸಬೇಕು. ಅಲ್ಲಿನ ರೈತರು ಪರ್ಯಾಯ ವ್ಯವಸ್ತೆಯತ್ತ ಚಿತ್ತ ಹರಿಸಬೇಕು. 1.05 ಲಕ್ಷ ಹೆಕ್ಟೇರ್ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಹಾಗೂ ಆಹಾರ ಬೆಳೆಯಿಂದ ಹಲವು ರೈತರು ಅಡಿಕೆಯತ್ತ ಮುಖ ಮಾಡಿದ್ದಾರೆ. ಹೀಗಾಗಿ ಬೇಸಿಗೆ ಹಂಗಾಮಿನಲ್ಲಿ ತೋಟಗಾರಿಕೆ ಬೆಳೆಗಳನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಕಡೇ ಪಕ್ಷ 45 ದಿನಗಳಾದರೂ ನೀರು ಹರಿಸಲೇಬೇಕು. ಅಚ್ಚುಕಟ್ಟುದಾರರು ಮುಂದಿನ ದಿನಗಳಲ್ಲಾದರೂ ಬೆಳೆಯ ಬದಲಾವಣೆ ಮಾಡಿಕೊಳ್ಳಬೇಕು. ಇಂಜಿನಿಯರಿಂಗ್, ಸಹಕಾರ ಹಾಗೂ ಕೃಷಿ ಇಲಾಖೆ ಸೇರಿಕೊಂಡು ಪರಿಸ್ಥಿತಿ ನಿಭಾಯಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net