

ರಿಪ್ಪನ್ಪೇಟೆ: ಶಾಸಕ ಗೋಪಾಲಕೃಷ್ಣ ಬೇಳೂರು ಅವರ ವಿರುದ್ಧ ಮಾಜಿ ಸಚಿವ ಹರತಾಳು ಹಾಲಪ್ಪ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಹೇಳಿದರು.
ಶಾಸಕರು ಕ್ಷೇತ್ರದ ಅಭಿವೃದ್ಧಿ ಜತೆಗೆ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಅವರ ಜನಪ್ರಿಯತೆ ಸಹಿಸಲಾಗದೆ ಹಾಲಪ್ಪ ಅವರು ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ವಿದ್ಯುತ್ ತಂತಿ ಬದಲಿಸಿಲ್ಲ ಎಂದು ಆರೋಪಿಸಿದ್ದಾರೆ. ಅವರು ಶಾಸಕರಾಗಿದ್ದಾಗ ಏನು ಮಾಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮುತ್ಸದ್ದಿ ನಾಯಕರಾದ ಕಾಗೋಡು ತಿಮ್ಮಪ್ಪ ಅವರೊಂದಿಗೆ ನಿಮ್ಮನ್ನು ಹೋಲಿಸಿಕೊಂಡರೆ ಬಾಲಿಶವಾಗುತ್ತದೆ. ಬಂಗಾರಪ್ಪ ಹಾಗೂ ತಿಮ್ಮಪ್ಪರ ಕುಟುಂಬಕ್ಕೆ ನೀವು ಏನು ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ಶಾಸಕರು ಅರಸಾಳು ಹಾಗು ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಹಳೆಯದಾಗಿದ್ದ ಎರಡು ವಿದ್ಯುತ್ ಮಾರ್ಗಗಳನ್ನುಬದಲಾಯಿಸಿದ್ದಾರೆ. ಮಾದಾಪುರ ಮತ್ತು ಮಸಗಲ್ಲಿ ಗ್ರಾಮಗಳಲ್ಲಿ ನೂತನ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.
ಕೆದ್ದಲಗುಡ್ಡೆ ವಿದ್ಯುತ್ ಪ್ರಸರಣ ಕೇಂದ್ರಕ್ಕೆ ಮತ್ತೊಂದು ಹೆಚ್ಚುವರಿ ನೂತನ ಗ್ರಿಡ್ ಅಳವಡಿಸಲು ಕ್ರಮ ವಹಿಸಲಾಗಿದೆ. ಕಾಲುಸಂಕ, ಕೆರೆ, ದೇವಸ್ಥಾನಗಳಿಗೆ ಅಗತ್ಯ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಅರಿವಿನ ಕೊರತೆಯಿಂದ ಹಾಲಪ್ಪ ಅವರು ಮಾಡುತ್ತಿರುವ ನಿಂದನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರಮುಖರಾದ ಎಚ್.ವಿ.ಈಶ್ವರಪ್ಪ ಗೌಡ, ಗಣಪತಿ, ವಿಜಯ್ ಮಳವಳ್ಳಿ, ಪ್ರಕಾಶ್ ಪಾಲೇಕರ್, ಶ್ರೀಧರ, ನವೀನ, ದೇವರಾಜ, ಗರ್ ಸುದ್ದಿಗೋಷ್ಠಿಯಲ್ಲಿದ್ದರು