ಮುಸ್ಲಿಮರ ಮತಗಳಿಗಾಗಿ ಬಸವರಾಜ ರಾಯರಡ್ಡಿ ಓಲೈಕೆ I muslim vote bank
ಎಸ್.ಎನ್.ಚನ್ನಬಸಪ್ಪ, ಶಾಸಕ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸ್ಥಾನಕ್ಕೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳಲಿ
ಲಜ್ಜೆಗೆಟ್ಟವರು ಇಂತಹ ಹೇಳಿಕೆ ನೀಡಲು ಸಾಧ್ಯ
ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿಕೆ
ಶಿವಮೊಗ್ಗ: ಮತಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಉನ್ನತ ಶಿಕ್ಷಣ ಸಚಿವ ಬಸವರಾಜ (basavaraja) ರಾಯರಡ್ಡಿ (rayaraddi) ಹಿಂದೂ ಧರ್ಮಕ್ಕಿಂತ ಇಸ್ಲಾಂ (islam) ಧರ್ಮವೇ ಶ್ರೇಷ್ಠ ಎಂದಿದ್ದಾರೆ. ಆದರೆ ಹಿಂದೂ ಧರ್ಮದಲ್ಲಿ ಹುಟ್ಟಿದವರಿಗೆ ಹಿಂದೂ ಧರ್ಮವೇ ಶ್ರೇಷ್ಠ ಆಗಿರಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ರಾಯರಡ್ಡಿ ರಾಜಕೀಯದಲ್ಲಿ ಬಹಳ ಹಿರಿಯವರು. ಲಜ್ಜೆಗೆಟ್ಟ ಮಾನಸಿಕತೆ ಇದ್ದವರು ಮಾತ್ರ ಈ ರೀತಿ ಹೇಳಿಕೆ ನೀಡಲು ಸಾಧ್ಯ. ಒಬ್ಬೊಬ್ಬರು ಒಂದೊಂದು ರೀತಿ ವರ್ತನೆ ಮಾಡುತ್ತಾರೆ. ಯಾರನ್ನೋ ಓಲೈಕೆ ಮಾಡಲು ಇಂತಹ ಹೇಳಿಕೆ ನೀಡುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕಾಂಗ್ರೆಸ್ ನಾಯಕರಿಗೆ ಬೇಕಾಗಿರೋದೇ ಮೆಕ್ಕಾ, ಮದೀನಾ. ಇಂದು ಉತ್ತಮ ರಾಜಕಾರಣಿಗಳೇ ಕ್ರೈಸ್ತ ಧರ್ಮೀಯರ ಜತೆ ಸಂಬಂಧ ಬೆಳೆಸಿಕೊಂಡಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ. ರಾಯರಡ್ಡಿ ಹಜ್ ಯಾತ್ರೆಗೆ ಹೋಗಲಿ. ಅದನ್ನು ಹೇಳಿ ಹೋಗುವುದರಲ್ಲೇನಿದೆ. ಯಾರು ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು ಎಂದರು.
ಬಸವರಾಜ ರಾಯರಡ್ಡಿ ಉನ್ನತ ಶಿಕ್ಷಣ ಸಚಿವ. ಸ್ಥಾನಕ್ಕೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳಬೇಕು. ಅಯೋಧ್ಯೆ, ಕಾಶಿ, ಮಥುರಾಗಳಿಗೆ ಹೋಗಿ ಬರುತ್ತೇನೆ ಎಂದು ರಾಯರಡ್ಡಿ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಹಗರಣದ ತನಿಖೆಯಾಗಲಿ
ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ಇನ್ನಷ್ಟು ಸಂಗತಿಗಳು ಹಾಗೂ ಯಾರ‌್ಯಾರು ಕೈಜೋಡಿಸಿದ್ದಾರೆ ಎಂಬುದು ಹೊರಬರಲಿದೆ ಎಂದು ಎಸ್.ಎನ್.ಚನ್ನಬಸಪ್ಪ ಹೇಳಿದರು.
ಹಗರಣ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಸಬೇಕು ಎಂದು ಒತ್ತಾಯಿಸಿದಾಗ ಸರ್ಕಾರ ಅವಕಾಶ ನೀಡಲಿಲ್ಲ. ಆದರೆ ವಿದ್ಯಾರ್ಥಿಗಳ ಹೋರಾಟದ ಪರಿಣಾಮ ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಹಗರಣದ ವಿರುದ್ಧ ಹೋರಾಟ ನಡೆಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಆರೋಪವೂ ಕೇಳಿಬಂದಿತ್ತು. ವಿದ್ಯಾರ್ಥಿನಿಯರನ್ನು ಎಳೆದಾಡಿದ್ದನ್ನು ರಾಜ್ಯವೇ ನೋಡಿದೆ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಆದರೆ ಅವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಸರ್ಕಾರದಿಂದ ನಡೆದಿದೆ. ಹೋರಾಟ ನಡೆಸಿದ ವಿದ್ಯಾರ್ಥಿಗಳನ್ನು ಜೈಲಿಗೆ ಕಳುಹಿಸಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೀಗ ಪ್ರಕರಣದಲ್ಲಿ ಐಎಎಸ್ ಅಧಿಕಾರಿ ಬಂಧನಕ್ಕೊಳಗಾಗಿದ್ದಾರೆ. ತನಿಖೆ ಮುಂದುವರಿದಂತೆ ಇನ್ನಷ್ಟು ವಿಚಾರಗಳು ಹೊರಬರುವ ಸಾಧ್ಯತೆ ಇದೆ. ಪ್ರಕರಣಕ್ಕೆ ಪೂರಕವಾಗಿ ಕೈಜೋಡಿಸಿರುವ ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು. ಆಡಳಿತ ವ್ಯವಸ್ಥೆಗೆ ಹೊಂದಿಸಿಕೊಂಡು ಕೆಲಸ ಮಾಡುವಂತೆ ಅಧಿಕಾರಿಗಳನ್ನು ನಿಯೋಜಿಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಅಧಿಕಾರಿಗಳು ಅಧಿಕಾರದ ದುರ್ಬಳಕೆ ಮಾಡಿಕೊಂಡರೆ ಕಾನೂನು ಪ್ರಕಾರ ಶಿಕ್ಷೆ ಅನುಭವಿಸಬೇಕು ಎಂದು ತಿಳಿಸಿದರು.
ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಯಾವುದೇ ಪಕ್ಷದ ಕಾರ್ಯಕರ್ತರಲ್ಲ. ಆದರೆ ಯಾವುದೇ ಸರ್ಕಾರದ ಅವಧಿಯಲ್ಲಿ ಅಧಿಕಾರ ದುರ್ಬಳಕೆ ಅಥವಾ ಅಕ್ರಮ ನಡೆದಿದ್ದರೆ ಅದಕ್ಕೆ ಜವಾಬ್ದಾರರು. ಅವರು ಶಿಕ್ಷೆಗೆ ಒಳಗಾಗಲೇಬೇಕು ಎಂದರು.