

ಸೊರಬ: ಇದು ನನ್ನ ತಂದೆ ಎಸ್.ಬಂಗಾರಪ್ಪ ಅವರ 94ನೇ ಜನ್ಮದಿನೋತ್ಸವದ ಕಾರ್ಯಕ್ರಮ. ಇದು ಕೇವಲ ಕುಟುಂಬದ ಕಾರ್ಯಕ್ರಮವಲ್ಲ. ಬಂಗಾರಪ್ಪ ಅವರ ಅಭಿಮಾನಿಗಳ ಕಾರ್ಯಕ್ರಮ. ಅವರನ್ನು ರೂಪಿಸಿದ್ದು ಸೊರಬದ ಜನತೆ. ಅವರಿಗೆ ಇಲ್ಲಿನ ಜನರು ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಬಂಗಾರಧಾಮದಲ್ಲಿ ಸೋಮವಾರ ಎಸ್.ಬಂಗಾರಪ್ಪ ಫೌಂಡೇಶನ್ ಮತ್ತು ವಿಚಾರ ವೇದಿಕೆಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 94ನೇ ಜನ್ಮದಿನೋತ್ಸವ ಹಾಗೂ ಬಂಗಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನನ್ನ ತಂದೆಯ ಕಪ್ಪು ಕನ್ನಡಕದ ಹಿಂದೆ ಸಾವಿರಾರು ಕನಸುಗಳಿದ್ದವು. ನಾನು ಒಬ್ಬ ಬಂಗಾರಪ್ಪ ಅವರನ್ನು ಕಳೆದುಕೊಂಡಿರಬಹುದು. ಆದರೆ ಅವರ ಅಭಿಮಾನಿಗಳ ರೂಪದಲ್ಲಿ ಲಕ್ಷಾಂತರ ಬಂಗಾರಪ್ಪ ಅವರನ್ನು ಪಡೆದುಕೊಂಡಿದ್ದೇನೆ. ಜನರ ಪ್ರೀತಿ ಮತ್ತು ಅಭಿಮಾನದಲ್ಲಿ ಅವರು ಇಂದಿಗೂ ಜೀವಂತವಾಗಿದ್ದಾರೆ ಎಂದರು.
ತಂದೆ ಎಸ್.ಬಂಗಾರಪ್ಪ ಅವರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ಆರಂಭಿಸಿದ್ದು, 2012ರಿಂದ ನಿರಂತರವಾಗಿ ಪ್ರದಾನ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರೊ. ನಟರಾಜ್ ಹುಳಿಯಾರ್ ಅವರಿಗೆ ಸಾಹಿತ್ಯ ಬಂಗಾರ, ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಕಲಬುರಗಿಯ ಶೇಖ್ ಮಾಸ್ತರ್ ಅವರಿಗೆ ರಂಗ ಬಂಗಾರ, ಸೇವಾ ಕ್ಷೇತ್ರದ ಸಾಧನೆಗಾಗಿ ಚಾಮರಾಜನಗರದ ಪ್ರೊ. ಜಿ.ಎಸ್.ಜಯದೇವ ಅವರಿಗೆ ಸೇವಾ ಬಂಗಾರ ಹಾಗೂ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರೀಯ ಕಬಡ್ಡಿ ತರಬೇತುದಾರ ಬಿ.ಸಿ.ರಮೇಶ್ ಅವರಿಗೆ ಕ್ರೀಡಾ ಬಂಗಾರ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಸಭಾಪತಿ ಸಲೀಂ ಅಹಮದ್ ಕಾರ್ಯಕ್ರಮ ಉದ್ಘಾಟಿಸಿದರು. ಸಣ್ಣ ನೀರಾವರಿ ಸಚಿವ ಅಜಯ್ ಧರ್ಮಸಿಂಗ್ ಅವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಸಿದ್ಧ ಜಾನಪದ ಕಲಾವಿದರಿಂದ ಜಾನಪದ ಝೇಂಕಾರ ಕಾರ್ಯಕ್ರಮ ನಡೆಯಿತು. ಬಳಿಕ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಎಂಎಲ್ಸಿ ಬಲ್ಕಿಶ್ ಬಾನು, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಮೆಹರೂಜ್ ಖಾನ್, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಸೂಡಾ ಅಧ್ಯಕ್ಷ ಸಿ.ಜಿ.ಮಧುಸೂದನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ.ಯೋಗೇಶ್, ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯಕ್, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಮಹಿಮ ಪಟೇಲ್, ಬಂಗಾರಪ್ಪ ಅವರ ಅಭಿಮಾನಿಗಳ ಬಳಗದವರು ಉಪಸ್ಥಿತರಿದ್ದರು.