ಭತ್ತದ ಬೆಳೆಗೆ ಎಡಬ್ಲ್ಯುಡಿ ವರದಾನ Paddy Crop

ಶಿವಮೊಗ್ಗ: ಎಲ್‌ನಿನೋ ಪ್ರಭಾವದಿಂದ ಬರ ಆವರಿಸಿ ರೈತರು ಕಂಗಾಲಾಗಿದ್ದಾರೆ. ನೀರಿನ ಕೊರತೆಯಿಂದ ಭತ್ತ ಬೆಳೆಯುವುದು ಕಷ್ಟವಾಗಿದೆ. ಇದನ್ನು ಮನಗಂಡಿರುವ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕಡಿಮೆ ನೀರಿನಲ್ಲಿ ಸುಸ್ಥಿರ ಭತ್ತದ ಫಸಲು ಪಡೆಯಲು ಹೊಸ ವಿಧಾನ ಕಂಡುಕೊಂಡಿದ್ದಾರೆ.
Paddy Crop
ಭತ್ತದ ಬೆಳೆಯಲ್ಲಿ ಪರ್ಯಾಯ ತೇವಗೊಳಿಸುವಿಕೆ ಹಾಗೂ ಒಣಗಿಸುವಿಕೆ ವಿಧಾನ ಅನುಷ್ಠಾನ ಮಾಡಿರುವುದು.
Published on: 

ನವೀನ್ ಬಿಲ್ಗುಣಿ ಶಿವಮೊಗ್ಗ

ಎಲ್‌ನಿನೋ ಪ್ರಭಾವದಿಂದ ಬರ ಆವರಿಸಿ ರೈತರು ಕಂಗಾಲಾಗಿದ್ದಾರೆ. ನೀರಿನ ಕೊರತೆಯಿಂದ ಭತ್ತ ಬೆಳೆಯುವುದು ಕಷ್ಟವಾಗಿದೆ. ಇದನ್ನು ಮನಗಂಡಿರುವ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಕತ್ತಲಗೆರೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕಡಿಮೆ ನೀರಿನಲ್ಲಿ ಸುಸ್ಥಿರ ಭತ್ತದ ಫಸಲು ಪಡೆಯಲು ಹೊಸ ವಿಧಾನ ಕಂಡುಕೊಂಡಿದ್ದಾರೆ.

ನೀರು ಉಳಿಸಿ, ಸುಸ್ಥಿರ ಇಳುವರಿ ಪಡೆಯಲು, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿಮೆಗೊಳಿಸಿ, ಕೃಷಿ ವೆಚ್ಚ ಕಡಿಮೆ ಭತ್ತದ ಉತ್ತಮ ಇಳುವರಿ ಪಡೆಯುವ ಎಡಬ್ಲ್ಯುಡಿ (ಭತ್ತದಲ್ಲಿ ಪರ್ಯಾಯ ತೇವಗೊಳಿಸುವಿಕೆ ಮತ್ತು ಒಣಗಿಸುವಿಕೆ) ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮೊದಲ ಹಂತವಾಗಿ ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಎಡಬ್ಲುೃಡಿ ಕಾರ್ಯಗತಗೊಳಿಸಿದ್ದಾರೆ.ಎಡಬ್ಲುೃಡಿ ವಿಧಾನದ ಮೂಲಕ ಭತ್ತ ಬೆಳೆದರೆ ನೀರಿನ ಉಳಿತಾಯ ಆಗಲಿದೆ. ಪ್ರತಿ ಹೆಕ್ಟೇರ್‌ಗೆ ಅಂದಾಜು 45ರಿಂದ 60 ಲಕ್ಷ ಲೀ. ನೀರು (ಶೇ.30-40ರಷ್ಟು) ಉಳಿಸಬಹುದು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.

ರಾಜ್ಯದಲ್ಲಿ 12 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುತ್ತಿದ್ದು, ಈ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಂಡರೆ ಭದ್ರಾ (72 ಟಿಎಂಸಿ) ಮತ್ತು ತುಂಗಭದ್ರಾ (132 ಟಿಎಂಸಿ) ಜಲಾಶಯಗಳಲ್ಲಿ ಸಂಗ್ರಹವಾಗುವಷ್ಟು ನೀರನ್ನು ಉಳಿಸಬಹುದು. ಈ ವಿಧಾನದಲ್ಲಿ ಸಂಗ್ರಹವಾಗುವ ನೀರಿನಿಂದ ಹೆಚ್ಚುವರಿ ಪ್ರದೇಶಗಳಲ್ಲಿ ಬೆಳೆಯುವ 1.20 ಎಕರೆ ರಾಗಿ, ಒಂದು ಎಕರೆ ಮೆಕ್ಕೆಜೋಳ, 1 ಎಕರೆ ಹತ್ತಿಗೆ ನೀರು ಪೂರೈಸಬಹುದು. 5ರಿಂದ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಆಹಾರ ಬೆಳೆಗಳಾದ ಮೆಕ್ಕೆಜೋಳ, ರಾಗಿ, ಜೋಳ ಮತ್ತು ವಾಣಿಜ್ಯ ಬೆಳೆ ಬೆಳೆಗಳಾದ ಕಬ್ಬು, ಹತ್ತಿಗೆ ನೀರು ಒದಗಿಸಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಉತ್ಪಾದನಾ ವೆಚ್ಚದಲ್ಲಿ ಇಳಿಕೆ: ಪ್ರತಿ ಹೆಕ್ಟೇರ್‌ಗೆ ಕನಿಷ್ಠ 5ರಿಂದ 10 ಸಾವಿರ ರೂ. ನಷ್ಟು ರಸಗೊಬ್ಬರ ಮತ್ತು ಕೀಟನಾಶಕಗಳ ವೆಚ್ಚವನ್ನು ಈ ವಿಧಾನ ಉಳಿಸಲಿದೆ. ಜತೆಗೆ 2.5ರಿಂದ 3.5 ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ಕಡಿಮೆಗೊಳಿಸಿ, ಪರಿಸರ ಸಂರಕ್ಷಣೆಯೊಂದಿಗೆ ಸೂಕ್ತ ಕಾರ್ಬನ್ ಕ್ರೆಡಿಟ್ ಯೋಜನೆಗಳ ಮೂಲಕ 2,000ರಿಂದ 8,500 ರೂ.ವರೆಗೆ ಸಂಭಾವ್ಯ ಆರ್ಥಿಕ ಲಾಭ ಪಡೆಯಬಹುದು. ಅಲ್ಲದೆ ಉತ್ತಮ ಬೆಳೆ ಬೆಳವಣಿಗೆ, ಇಳುವರಿಯಲ್ಲಿ ಶೇ.5ರಷ್ಟು ಹೆಚ್ಚಳ ಹಾಗೂ ಮಣ್ಣಿನ ಆರೋಗ್ಯ ಸುಧಾರಣೆಯೂ ಆಗಲಿದೆ.

ಸಾವಿರಾರು ಎಕರೆಯಲ್ಲಿ ಕಾರ್ಯಗತ: ಈಗಾಗಲೇ ದಾವಣಗೆರೆ ಜಿಲ್ಲೆಯ 5 ಸಾವಿರ ಹೆಕ್ಟೇರ್ ಮತ್ತು ಶಿವಮೊಗ್ಗ ಜಿಲ್ಲೆಯ 250 ಹೆಕ್ಟೇರ್ ವ್ಯಾಪ್ತಿಯಲ್ಲಿ ನೂತನ ವಿಧಾನ ಕಾರ್ಯಗತಗೊಂಡಿದೆ. ಎರಡೂ ಜಿಲ್ಲೆಗಳಲ್ಲಿ ಬೆಳೆಗಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಾವಣಗೆರೆಯಲ್ಲಿ 850 ಹೆಕ್ಟೇರ್ ಮತ್ತು ಶಿವಮೊಗ್ಗದಲ್ಲಿ 250 ಹೆಕ್ಟೇರ್‌ನಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿದೆ. ದಾವಣಗೆರೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಹಾಗೂ ಶಿವಮೊಗ್ಗ ತಾಲೂಕಿನ ಕುಂಸಿ, ಹಾರನಹಳ್ಳಿ, ಆಯನೂರು, ಶಿವಮೊಗ್ಗ ಕಸಬಾ, ನಿದಿಗೆ, ಹೊಳಲೂರು, ಬೀರನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ಮುಂಗಾರಿನಿಂದ ಹೊಸ ವಿಧಾನವನ್ನು ರೈತರು ಅಳವಡಿಸಿಕೊಂಡು ಭತ್ತ ನಾಟಿ ಮಾಡಿದ್ದಾರೆ ಎನ್ನುತ್ತಾರೆ ವಿಜ್ಞಾನಿ ಡಾ. ಶರಣಪ್ಪ ಕುರಿ.

ರಂಧ್ರದ ಪೈಪುಗಳ ಬಳಕೆ

30 ಸೆಂಮೀ ಉದ್ದ ಮತ್ತು 15 ಸೆಂಮೀ ಅಗಲದ ಪೈಪನ್ನು ನೀರಿನ ಮಟ್ಟ ಅಥವಾ ಆಳವನ್ನು ಅಳೆಯಲು ಬಳಕೆ ಮಾಡಿಕೊಳ್ಳಬೇಕಾಗುತ್ತದೆ. ಆ ಪೈಪಿಗೆ ಎಲ್ಲ ಕಡೆ ಕೆಳಗಿನಿಂದ 15 ಸೆಂ.ಮೀ. ಎತ್ತರವರೆಗೆ ರಂಧ್ರಗಳನ್ನು ಮಾಡಿ, 15 ಸೆಂ.ಮೀ. ಆಳದವರೆಗೆ ಹೂಳಬೇಕು. ನಂತರ ಆ ಪೈಪಿನ ಒಳಗಡೆ ಇರುವ ಮಣ್ಣನ್ನು ತಳಮಟ್ಟದವರೆಗೆ ತೆಗೆಯಬೇಕು. ನಂತರ ಪೈಪಿನ ಒಳಗಡೆ ಮತ್ತು ಹೊರಗಡೆ ನೀರಿನ ಮಟ್ಟ ಸಮಾನಾಂತರವಾಗಿರುವಂತೆ ಜಾಗ್ರತೆ ವಹಿಸಬೇಕು. ಮುಖ್ಯವಾಗಿ ಪೈಪ್‌ಗಳನ್ನು ಬದುವಿನ ಹತ್ತಿರ ಹೂಳಿದರೆ ಅನುಕೂಲ ಆಗುತ್ತದೆ.

ಏನಿದು ಎಡಬ್ಲ್ಯುಡಿ?

ಭತ್ತದ ಗದ್ದೆಯಲ್ಲಿ ನಿರಂತರವಾಗಿ ನೀರು ನಿಲ್ಲಿಸುವ ಬದಲು ಅಗತ್ಯಕ್ಕೆ ಅನುಗುಣವಾಗಿ ನೀರು ಹಾಯಿಸಿ (5 ಸೆಂ.ಮೀ.) ನಂತರ ನೀರನ್ನು ಇಂಗಲು ಬಿಡುವುದು(-10 ಸೆಂ.ಮೀ.). ತೇವ-ಒಣ-ತೇವ-ಒಣ ಚಕ್ರವನ್ನು ಮುಂದುವರಿಸಬೇಕು. ಈ ವಿಧಾನ ಭತ್ತ ತೆಂಡೆ(ತೆನೆ) ಒಡೆದ ನಂತರದಿಂದ ಹೂಬಿಡುವ ಹಂತದವರೆಗೆ ಇರಲಿದೆ. ಈ ವಿಧಾನದ ಅಳತೆಗೆ ಪಾನಿ ಪೈಪ್ ಮತ್ತು ನ್ಯೂರೋ ಪಲ್ಸ್ (ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಇಂಟರ್ನೆಟ್ ಆಫ್ ಥಿಂಗ್ಸ್-ಐಒಟಿ) ತಂತ್ರಜ್ಞಾನ ಆಧಾರಿತ ಸಾಧನ ಬಳಕೆ ಮಾಡಲಾಗುತ್ತಿದೆ.

ಭತ್ತದಲ್ಲಿ ಪರ್ಯಾಯ ತೇವಗೊಳಿಸುವಿಕೆ ಮತ್ತು ಒಣಗಿಸುವಿಕೆ ಪ್ರಸ್ತುತ ಅನಿವಾರ್ಯ. ಬರ ಆವರಿಸಿರುವುದರಿಂದ ಮಿತ ನೀರಿನಲ್ಲಿ ಸುಸ್ಥಿರ ಬೆಳೆ ಬೆಳೆಯಲು ಎಡಬ್ಲ್ಯುಡಿ ವಿಧಾನ ವರದಾನ. ನೀರು ಉಳಿತಾಯದ ಜತೆಗೆ ಮಣ್ಣಿನ ಸಂರಕ್ಷಣೆ, ಸುಸ್ಥಿರ ಇಳುವರಿ, ಕೃಷಿ ವೆಚ್ಚ ಕಡಿಮೆ ಆಗಲಿದೆ.
ಡಾ. ಶರಣಪ್ಪ ಕುರಿ, ಕತ್ತಲಗೆರೆ ಸಂಶೋಧನಾ ಕೇಂದ್ರದ ವಿಜ್ಞಾನಿ
ಭತ್ತದ ಬೆಳೆಯಲ್ಲಿ ಪರ್ಯಾಯ ತೇವಗೊಳಿಸುವಿಕೆ ಹಾಗೂ ಒಣಗಿಸುವಿಕೆ ಉತ್ತಮ ವಿಧಾನ. ನೀರು, ಔಷಧ ಮತ್ತು ಗೊಬ್ಬರ ಬಳಕೆ ಕಡಿಮೆ ಆಗಲಿದೆ. ಎರಡು ಎಕರೆ ವ್ಯಾಪ್ತಿಯಲ್ಲಿ ಎಡಬ್ಲ್ಯುಡಿ ವಿಧಾನ ಅಳವಡಿಸಿದ್ದು, ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೇನೆ.
ರಮೇಶ್ ಗೌಡ, ಹಾರನಹಳ್ಳಿ ರೈತ
ಎಡಬ್ಲ್ಯುಡಿ ವಿಧಾನದಿಂದ ನೀರಿನ ಸದ್ಬಳಕೆ ಆಗಲಿದೆ. ಅದರಲ್ಲೂ ಈ ವರ್ಷ ಈ ವಿಧಾನ ಸೂಕ್ತವಾಗಿದೆ. ಶಿವಮೊಗ್ಗ ತಾಲೂಕಿನ ಏಳು ಹೋಬಳಿಗಳಲ್ಲಿ ಭತ್ತದ ಬೆಳೆಯಲ್ಲಿ ಇದನ್ನು ರೈತರು ಅನುಸರಿಸುತ್ತಿದ್ದಾರೆ.
ಗಾಯತ್ರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ