ಸಾಗರ ತಾಲೂಕಿನ ಮಾಲ್ವೆ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ತಾಯಿಗೊಂದು ಪತ್ರ ಯೋಜನೆ ಕಾರ್ಯಕ್ರಮದಲ್ಲಿ ತಾಪಂ ಸಹಾಯಕ ನಿರ್ದೇಶಕಿ ಆರ್.ಎಂ.ಪೂರ್ಣಿಮಾ, ಅಶ್ಫಾಕ್ ಅಹ್ಮದ್, ಅನ್ನಪೂರ್ಣಾ ಇತರರಿದ್ದರು.
ಸಾಗರ: ಕೇಂದ್ರ ಸರ್ಕಾರದ ವಿಬಿ ಜಿ ರಾಮ್ ಜಿ ಯೋಜನೆಯನ್ನು ತಾಲೂಕಿನಲ್ಲಿ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಎಲ್ಲ ಗ್ರಾಪಂಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದು ತಾಪಂ ಸಹಾಯಕ ನಿರ್ದೇಶಕಿ ಆರ್.ಎಂ.ಪೂರ್ಣಿಮಾ ಹೇಳಿದರು.
ತಾಲೂಕಿನ ಮಾಲ್ವೆ ಗ್ರಾಪಂ ವ್ಯಾಪ್ತಿ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ತಾಯಿಗೊಂದು ಪತ್ರ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲಾ ಮಕ್ಕಳು ಕುಟುಂಬದ ಸದಸ್ಯರಿಗೆ ಪತ್ರ ಬರೆಯುವ ಮೂಲಕ ಯೋಜನೆ ಮಹತ್ವದ ಬಗ್ಗೆ ಅರಿವು ಮೂಡಿಸಲಲು ಪ್ರಯತ್ನಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಅರ್ಹ ಗ್ರಾಮೀಣ ಕುಟುಂಬಗಳಿಗೆ ಹೊಸ ರೋಜ್‌ಗಾರ್ ಗ್ಯಾರಂಟಿ ಕಾರ್ಡ್ ನೀಡುವ ಜತೆ 125 ದಿನ ಉದ್ಯೋಗ, ಪ್ರತಿ ದಿನಕ್ಕೆ 382 ರೂ. ವೇತನ, ಪ್ರತಿ ಕುಟುಂಬ 5 ಲಕ್ಷ ರೂ.ವರೆಗೆ ವೈಯಕ್ತಿಕ ಸೌಲಭ್ಯ ಬಳಸಿಕೊಳ್ಳಬೇಕು. 318 ಕಾಮಗಾರಿಗಳನ್ನು ಯೋಜನೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.
ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಮಕ್ಕಳು ತಾಯಿಗೊಂದು ಪತ್ರ ಬರೆದರು. ಅಮ್ಮ, ನೀನು ಗ್ರಾಮದ ಎಲ್ಲರಿಗೂ ಯೋಜನೆ ಬಗ್ಗೆ ತಿಳಿಸು ಎಂದು ಬರೆದಿದ್ದರು. ಮಾಲ್ವೆ ಪಿಡಿಒ ಅಶ್ಫಾಕ್ ಅಹ್ಮದ್, ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಅನ್ನಪೂರ್ಣಾ, ಸಿಬ್ಬಂದಿ ಇದ್ದರು.