ಎನ್.ಆರ್.ಪುರದಲ್ಲಿ ಸಂಗೀತ ನತ್ಯ ಸಂಭ್ರಮ 2025 ಕಾರ್ಯಕ್ರಮದಲ್ಲಿ ಮಕ್ಕಳ ಭರತನಾಟ್ಯ ನೋಡುಗರ ಮನಸೂರೆಗೊಳಿಸಿತು.
Published on:
Copied
Follow Us
ಎನ್.ಆರ್.ಪುರ: ಸಂಗೀತ, ಕಲೆ, ಸಂಸ್ಕಾರಗಳು ದೇಶದ ಬಹು ದೊಡ್ಡ ಆಧಾರ ಸ್ತಂಭಗಳು ಎಂದು ಅಮ್ಮ ಫೌಂಡೇಷನ್ ಸಂಸ್ಥಾಪಕ, ಜೆಡಿಎಸ್ ರಾಜ್ಯಉಪಾಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಹೇಳಿದರು.
ರಾಗ ಮಯೂರಿ ಅಕಾಡೆಮಿ ಸಂಗೀತ, ನೃತ್ಯ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿ, ಭರತನಾಟ್ಯ, ನೃತ್ಯ ರೂಪಕಗಳು, ಸಂಸ್ಕೃತಿಗಳು ಈ ದೇಶದ ಮೂಲ ಬೇರುಗಳಾಗಿವೆ. ಭರತ ನಾಟ್ಯ ಸಂಸ್ಕೃತಿ ನಮ್ಮ ದೇಶದ ಪರಂಪರೆ ಉಳಿಸುತ್ತಿದೆ. ಭರತ ಪೂರ್ವದಿಂದಲೇ ಭರತನಾಟ್ಯ ಹುಟ್ಟಿದೆ. ವಿದೇಶಗಳಲ್ಲೂ ಭಾರತದ ಕಲೆಯು ವಿಜೃಂಭಿಸುತ್ತಿದೆ. ಇಂತಹ ಕಲೆ, ಸಂಸ್ಕೃತಿಗಳನ್ನು ಉಳಿಸುವಲ್ಲಿ ಮಕ್ಕಳ, ಪಾಲಕರ ಪಾತ್ರವೂ ಬಹಳ ಮುಖ್ಯವಾಗಿದೆ ಎಂದರು.
ನಿಮ್ಮ ಮಕ್ಕಳು ಇಂತಹ ಕಲೆಗಳನ್ನು ಕಲಿಯುವುದರಿಂದ ವಿದೇಶದಲ್ಲೂ ಅವಕಾಶಗಳನ್ನು ಗಳಿಸಬಹುದು. ವಿದೇಶಿ ಸಂಸ್ಕೃತಿಯಿಂದ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಸಂಸಾರಗಳು ಹಾಳಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ದೇಶೀಯ ಸಂಸ್ಕೃತಿ, ಕಲೆಗಳನ್ನು ಬೆಳೆಸಿ ಉಳಿಸಬೇಕಿದೆ. 80ಕ್ಕೂ ಅಧಿಕ ಮಕ್ಕಳನ್ನು ಒಗ್ಗೂಡಿಸಿಕೊಂಡು ಇಂತಹ ನೃತ್ಯ ವೈಭವ ಕಾರ್ಯಕ್ರಮ ಮಾಡುವುದು ಸುಲಭದ ಕಾರ್ಯವಲ್ಲ. ಮಕ್ಕಳಿಗೆ ಅಂಕಗಳಿಕೆ ಜತೆಗೆ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ ಎಂದರು.
ಪುತ್ತೂರಿನ ಭರತನಾಟ್ಯ ಕಲಾವಿದ ವಿದ್ವಾನ್ ದೀಪಕ್‌ಕುಮಾರ್ ಮಾತನಾಡಿ, ಭರತನಾಟ್ಯ ಕಲಾವಿದೆ ಅಂಕಿತಾ ಪ್ರಜ್ವಲ್ ರಾಗ ಮಯೂರಿ ಅಕಾಡೆಮಿ ಹುಟ್ಟುಹಾಕಿ ಕಲೆ ಆರಾಧನೆ ಮಾಡಿದ್ದಾರೆ. ಸಣ್ಣ ತಾಲೂಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿ ನೂರಾರು ಮಕ್ಕಳಿಗೆ ಭರತನಾಟ್ಯ ಕಲಿಸಿರುವುದು ದೊಡ್ಡ ಸಾಧನೆ. ಹಲವು ತಂತ್ರಜ್ಞಾನ ಬಳಸಿಕೊಂಡು ಶ್ರೀಕೃಷ್ಣ ಲೀಲಾ ರೂಪಕ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಗೀತ ನೃತ್ಯ ಅಕಾಡೆಮಿ ಸದಸ್ಯೆ ಡಾ. ಬಿ.ವಿ.ಗೀತಾ ಉಪನ್ಯಾಸ ನೀಡಿ, ಪುರಾಣದ ಕಥೆಗಳನ್ನು ನಮ್ಮ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ನೃತ್ಯ ರೂಪಕದ ಮೂಲಕ ಶ್ರೀಕೃಷ್ಣಲೀಲಾ ನೃತ್ಯ ರೂಪಕ ಆಯೋಜಿಸಿದ್ದಾರೆ. ನಮ್ಮ ದೇಶದ ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಾಗಿದೆ. ಭರತ ನಾಟ್ಯ, ನೃತ್ಯ, ಸಂಗೀತವನ್ನು ಅಕಾಡೆಮಿಗಳನ್ನು ತರಬೇತಿ ಪಡೆದ ಗುರುಗಳಿಂದ ಶಾಸ್ತ್ರೀಯವಾಗಿ ಕಲಿಯಬೇಕು ಎಂದರು.
ರಾಗಮಯೂರಿ ಅಕಾಡೆಮಿ ಕಾರ್ಯದರ್ಶಿ ಎಚ್.ಯು.ಪ್ರಜ್ವಲ್, ನಿರ್ದೇಶಕಿ ಅಂಕಿತಾ ಪ್ರಜ್ವಲ್, ಜಿಪಂ ಮಾಜಿ ಸದಸ್ಯ ಪಿ.ಆರ್.ಸದಾಶಿವ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಸಮಾಜ ಸೇವಕಿ ಜುಬೇದಾ, ಮುಖಂಡರಾದ ಚಂದ್ರಶೇಖರ್, ಸಾರ್ಥಕ್ ಗೌಡ, ಗಾಂಧಿ ಗ್ರಾಮ ನಾಗರಾಜ್, ಶಿವದಾಸ್ ಇತರರಿದ್ದರು.