ಸಿಎಂ ಬಳಿಗೆ ಬೆಳೆಗಾರರ ನಿಯೋಗ| areca growers

ಎಲೆಚುಕ್ಕೆ ರೋಗ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಸಿಎಂ ಬಳಿಗೆ ನಿಯೋಗ ತೆರಳುವ ಕುರಿತು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ, ಬಿ.ಆರ್.ಜಯಂತ್, ವಿದ್ಯಾದರ, ಡಾ. ಬಿ.ಜಿ.ಗಂಗಾಧರ ನಾಯ್ಕ ಇದ್ದರು.
ಎಲೆಚುಕ್ಕೆ ರೋಗ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಸಿಎಂ ಬಳಿಗೆ ನಿಯೋಗ ತೆರಳುವ ಕುರಿತು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ, ಬಿ.ಆರ್.ಜಯಂತ್, ವಿದ್ಯಾದರ, ಡಾ. ಬಿ.ಜಿ.ಗಂಗಾಧರ ನಾಯ್ಕ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಎಂಎಂ ನೇತೃತ್ವದಲ್ಲಿ ಮುಖ್ಯ ಮಂತ್ರಿ ಭೇಟಿ
  • ಎಲೆಚುಕ್ಕೆ ರೋಗಕ್ಕೆ ಪರಿಹಾರ ಕಲ್ಪಿಸುವಂತೆ ಒತ್ತಾಯ
  • ಅಡಕೆ ಬೆಳೆಗಾರರ ಸಭೆಯಲ್ಲಿ ನಿರ್ಣಯ
ಶಿವಮೊಗ್ಗ: ಎಲೆಚುಕ್ಕೆ ರೋಗ ಬಾಧಿತ ಅಡಕೆ (areca) ತೋಟಗಳಿಗೆ ಶಾಶ್ವತ ಪರಿಹಾರ (relef) ಕಲ್ಪಿಸುವಂತೆ ಸರ್ಕಾರ (government) ದ ಮೇಲೆ ಒತ್ತಡ ಹೇರುವ ಸಲುವಾಗಿ ಸಹಕಾರಿಗಳನ್ನೊಂಡ ನಿಯೋಗದಿಂದ ಸಿಎಂ (cm) ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಸಿಎಂ ಭೇಟಿಯಾಗಿ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮನವಿ ಸಲ್ಲಿಸಿ ಎಲೆಚುಕ್ಕೆ ರೋಗ, ಅಡಕೆ ಟಾಸ್ಕ್‌ಫೋರ್ಸ್‌ಗೆ ವೇಗ ನೀಡುವುದು, ಎನ್‌ಆರ್‌ಸಿ ಹಾಗೂ ಅಡಕೆ ಮಂಡಳಿ ಸ್ಥಾಪಿಸುವ ಬಗ್ಗೆ ಗಮನ ಸೆಳೆಯಲು ನಿರ್ಣಯ ಕೈಗೊಳ್ಳಲಾಯಿತು. ನಿಯೋಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ಮ್ಯಾಮ್ಕೋಸ್, ಕ್ಯಾಂಪ್ಕೊ, ಅಡಕೆ ಮಾರಾಟಗಾರರ ಮಹಾಮಂಡಳದ ಪದಾಧಿಕಾರಿಗಳು, ಪಾರಂಪರಿಕ ಅಡಕೆ ಬೆಳೆಯುವ ಪ್ರದೇಶಗಳ ಜನಪ್ರತಿನಿಧಿಗಳು ಇರಲಿದ್ದಾರೆ.
ಸಭೆಯ ಆರಂಭದಲ್ಲಿ ಮಾತನಾಡಿದ ಆರ್.ಎಂ.ಮಂಜುನಾಥ ಗೌಡ, ಎಲೆಚುಕ್ಕೆ ರೋಗದಿಂದ ದೊಡ್ಡ ಮಟ್ಟದಲ್ಲಿ ಹಾನಿಗೊಳಗಾದ ಅಡಕೆ ತೋಟಗಳ ಮಾಲೀಕರಿಗೆ ಪರಿಹಾರಧನ ಒದಗಿಸುವುದು, ಈ ರೋಗಕ್ಕೆ ಔಷಧ ಕಂಡುಹಿಡಿಯುವುದು ತುರ್ತು ಅವಶ್ಯ. ಅಗತ್ಯವಿದ್ದರೆ ಮುಂದಿನ ದಿನಗಳಲ್ಲಿ ಎಲ್ಲರನ್ನೂ ಸೇರಿಸಿ ಹೋರಾಟ ಮಾಡಲಿಕ್ಕೂ ಹಿಂಜರಿಯುವುದಿಲ್ಲ. ಈ ಹಿಂದೆ ಹಳದಿ ರೋಗ ಬಂದಿತ್ತು. ಈಗ ಎಲೆಚುಕ್ಕೆ ರೋಗದಿಂದ ಅಡಕೆ ತೋಟಗಳು ನಾಶವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಎಲೆಚುಕ್ಕೆ ರೋಗದ ಪರಿಹಾರಕ್ಕೆ ಹಣ ಮೀಸಲಿರಿಸಲಾಗಿದೆ ಎಂದು ಕೇಂದ್ರ, ರಾಜ್ಯ ಸರ್ಕಾರಗಳು ಹೇಳುತ್ತಿವೆ. ಆದರೆ ಅದು ಯಾರನ್ನೂ ತಲುಪುತ್ತಿಲ್ಲ. ನಾನು ರಾಜಕೀಯ ದೃಷ್ಟಿಕೋನದಿಂದ ಮಾತನಾಡುತ್ತಿಲ್ಲ. ಆದರೆ ಸರ್ಕಾರಗಳ ಮೇಲೆ ಬೆಳೆಗಾರರಿಗೆ ನಂಬಿಕೆ ಉಳಿದಿಲ್ಲ. ಸಹಕಾರ ವಲಯದಿಂದಲೇ ಏನಾದರೂ ಮಾಡಬೇಕು ಎಂದರು.
ಜಿಪಂ ಮಾಜಿ ಸದಸ್ಯ ಬಿ.ಆರ್.ಜಯಂತ್, ಶಿಮುಲ್ ಅಧ್ಯಕ್ಷ ವಿದ್ಯಾಧರ, ಸಾಮಾಜಿಕ ಕಾರ್ಯಕರ್ತರಾದ ತೀ.ನ.ಶ್ರೀನಿವಾಸ್, ಶ್ರೀಧರ ಕಲ್ಲಹಳ್ಳ, ಅಡಕೆ ಬೆಳೆಗಾರರಾದ ಜಿ.ಎನ್.ಸುಧೀರ್, ವಾಟಗೋಡು ಸುರೇಶ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಂಜಯ್ ಇತರರಿದ್ದರು.

ಪ್ರಗತಿಯಲ್ಲಿದೆ ಸಂಶೋಧನೆ

ಎಲೆಚುಕ್ಕೆ ರೋಗದ ಬಗ್ಗೆ ಕೆಳದಿ ಶಿವಪ್ಪನಾಯಕ ಕೃಷಿ ಹಾಗೂ ತೋಟಗಾರಿಕೆ ವಿವಿಯಿಂದ ಸಮಗ್ರ ಸಂಶೋಧನೆ ನಡೆದಿದೆ. ಇದರ ವರದಿಯೂ ಸಿದ್ಧವಾಗಿದೆ. ಇದಕ್ಕಾಗಿ ವಿವಿಯಲ್ಲಿ ಪ್ರತ್ಯೇಕ ಟಾಸ್ಕ್‌ಫೋರ್ಸ್ ರಚನೆಯಾಗಿದೆ. ಬದಲಾಗುತ್ತಿರುವ ಹವಾಗುಣ, ಕಡಿಮೆಯಾಗುತ್ತಿರುವ ಮಣ್ಣಿನ ಫಲವತ್ತತೆ, ಹೆಚ್ಚುತ್ತಿರುವ ಬ್ಯಾಕ್ಟೀರಿಯಾ ಹಾಗೂ ಫಂಗಸ್‌ಗಳ ಸಾಮರ್ಥ್ಯ ಹೀಗೆ ಅನೇಕ ಸಂಗತಿಗಳು ಎಲೆಚುಕ್ಕೆ ರೋಗಕ್ಕೆ ಕಾರಣವಾಗುತ್ತಿವೆ. ರೋಗಕ್ಕೆ ತುತ್ತಾಗಿರುವ ಹಿಂಗಾರ, ಗರಿ ಯಾವುದನ್ನೂ ತೋಟದಲ್ಲಿ ಬಿಡದೆ ನಾಶಪಡಿಸಬೇಕು. ವಿವಿಯಿಂದ ಸೂಚಿಸುವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೆಳದಿ ಶಿವಪ್ಪನಾಯಕ ಕೃಷಿ-ತೋಟಗಾರಿಕೆ ವಿವಿ ವಿಜ್ಞಾನಿ ಡಾ. ಬಿ.ಜಿ.ಗಂಗಾಧರ ನಾಯ್ಕ ಸಲಹೆ ನೀಡಿದರು.

ಎನ್‌ಆರ್‌ಸಿ-ಮಂಡಳಿ ಅವಶ್ಯ

ಕೇವಲ ಹಣಕಾಸಿನ ನೆರವಿನಿಂದ ಎಲೆಚುಕ್ಕೆ ರೋಗಕ್ಕೆ ಪರಿಹಾರ ಸಾಧ್ಯವಿಲ್ಲ. ಸುದೀರ್ಘ ಸಮಯ ನಿರಂತರವಾಗಿ ಈ ರೋಗದ ಬಗ್ಗೆ ಸಂಶೋಧನೆ ನಡೆಯಬೇಕು. ಇದಕ್ಕಾಗಿ ಎನ್‌ಆರ್‌ಸಿ (ರಾಷ್ಟ್ರೀಯ ಸಂಶೋಧನಾ ಸಂಸ್ಥೆ ) ಆರಂಭಿಸಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಅಡಕೆ ಟಾಸ್ಕ್‌ಫೋರ್ಸ್‌ಗೆ ರಾಜ್ಯ ಸರ್ಕಾರ ಜೀವ ತುಂಬಬೇಕು. ಮುಖ್ಯವಾಗಿ ಅಡಕೆ ಬೋರ್ಡ್ ರಚನೆಗೆ ಇದು ಸಕಾಲ. ಇದಕ್ಕಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಗಮನ ಸೆಳೆಯಬೇಕೆಂದು ರಾಜ್ಯ ಯೋಜನೆ ಹಾಗೂ ನೀತಿ ಆಯೋಗದ ಸದಸ್ಯ ಡಾ. ಟಿ.ಎನ್.ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟರು. ಎಲೆಚುಕ್ಕೆ ಹರಡುವ ಪ್ರದೇಶ ಹಾಗೂ ಹಾಗೂ ಅದರ ತೀವ್ರತೆ ಹೆಚ್ಚುತ್ತಿದೆ. ಆದರೆ ಈ ಬಾರಿ ಎಲೆಚುಕ್ಕೆ ರೋಗವೇ ಕಾಣಿಸಿಕೊಂಡಿಲ್ಲ ಎಂದು ಲೋಕಸಭೆಯಲ್ಲಿ ಕೃಷಿ ಸಚಿವರೇ ಹೇಳಿರುವುದು ಆಶ್ಚರ್ಯ ಮೂಡಿಸಿದೆ. ಎಲೆಚುಕ್ಕೆ ರೋಗ ಅಡಕೆ ಬೆಳೆಗಾರರ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ. ಇದನ್ನು ಎದುರಿಸಲು ಸಂಘಟಿತ ಪ್ರಯತ್ನ ಅಗತ್ಯ ಎಂದರು.
ರೈತರ ಉದಾಸೀನವೇ ಸಮಸ್ಯೆ
ಬೆಲೆ ಕುಸಿತವಾದಾಗ ಮಾತ್ರ ಅಡಕೆ ಬೆಳೆಗಾರರು ಎದ್ದು ಕೂರುತ್ತಾರೆ. ಸಭೆಗೆ ಬರುವಂತೆ ಹಲವರಿಗೆ ತಿಳಿಸಿದ್ದೆ. ಆದರೆ ಬಹುತೇಕರು ಬಂದಿಲ್ಲ. ಇದೇನು ನನ್ನ ಕುಟುಂಬದ ಮದುವೆ ಕಾರ್ಯಕ್ರಮವಲ್ಲ. ನಮಗೆ ರೈತರ ಉದಾಸೀನವೇ ಸಮಸ್ಯೆಯಾಗಿದೆ. ಖುದ್ದು ಸಮಸ್ಯೆಗೆ ಸಿಲುಕುವವರೆಗೂ ಅಡಕೆ ಬೆಳೆಗಾರರು ಹೊರಗೆ ಬರುವುದಿಲ್ಲ. ಈ ಹಿಂದೆ ಅಡಕೆ ನಿಷೇಧ ಪ್ರಸ್ತಾಪ ಬಂದಾಗ ದೊಡ್ಡ ಮಟ್ಟದ ಹೋರಾಟ ನಡೆಸಿದ್ದೆವು. ಬಳಿಕ ಬೆಳೆಗಾರರೆಲ್ಲ ನಿದ್ರೆಗೆ ಜಾರಿದಂತಿದೆ. ಅಡಕೆ ಮಂಡಳಿ ಸ್ಥಾಪಿಸಬೇಕೆಂದು 20 ವರ್ಷಗಳ ಹಿಂದೆಯೇ ಒತ್ತಾಯ ಮಾಡಲಾಗಿತ್ತು. ಹುಣಸೆಹಣ್ಣು, ಹಲಸಿನಕಾಯಿಗೆ ಮಂಡಳಿ ರಚನೆ ಮಾಡಬೇಕೆಂದು ಸಂಸತ್‌ನಲ್ಲಿ ಆಗ್ರಹಿಸುವ ಹಿರಿಯ ರಾಜಕಾರಣಿ ಎಚ್.ಡಿ.ದೇವೇಗೌಡರು ಅಡಕೆಗೆ ಎದುರಾಗಿರುವ ಆಪತ್ತಿನ ಬಗ್ಗೆ ಮಾತನಾಡದಿರುವುದು ದುರದೃಷ್ಟಕರ ಎಂದು ಮಂಜುನಾಥ ಗೌಡ ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net