ತುರ್ತು ಪರಿಸ್ಥಿತಿ ದಿನಗಳು ಮತ್ತೊಮ್ಮೆ ಕರ್ನಾಟಕಕ್ಕೂ ಬರಲಿವೆ
ಹಿಂದು ನಾಯಕರು, ಸಂಘಟನೆಗಳ ಹತ್ತಿಕ್ಕಲು ತಂದಿರುವ ಕರಾಳ ಶಾಸನ
ಶಿವಮೊಗ್ಗದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆತಂಕ
ಶಿವಮೊಗ್ಗ: ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಅಂಗೀಕರಿಸಿರುವ ದ್ವೇಷ ಭಾಷಣ ವಿರೋಧಿ ಮಸೂದೆಯು ತುರ್ತು ಪರಿಸ್ಥಿತಿ(Emergency)ಗಿಂತ ಘೋರವಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ (K.S.Eshwarappa) ದೂರಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಾಕ್ ಸ್ವಾತಂತ್ರ್ಯ(Freedom of speech), ಪತ್ರಿಕಾ ಸ್ವಾತಂತ್ರ್ಯ ಎಲ್ಲವನ್ನು ನಾಗರೀಕರಿಂದ ಕಸಿದುಕೊಂಡು ರಾಷ್ಟ್ರಭಕ್ತ ನಾಯಕರನ್ನು ಬಂಧಿಸುವುದರ ಮೂಲಕ ಅಂದಿನ ಪ್ರಧಾನಿ ಇಂದಿರಾ ಗಾಂಧಿ(Indira Gandhi) ಇಡೀ ದೇಶವನ್ನೇ ಒಂದು ಜೈಲನ್ನಾಗಿ ಪರಿವರ್ತನೆ ಮಾಡಿದ್ದರು. ಅಂದು ಭಾರತ್ ಮಾತಾಕಿ ಜೈ, ವಂದೇ ಮಾತರಂ ಹೇಳುವುದೂ ರಾಷ್ಟ್ರದ್ರೋಹದ ಘೋಷಣೆಗಳಾಗಿದ್ದವು. ಇದೀಗ ಮತ್ತೊಮ್ಮೆ ಕರ್ನಾಟಕಕ್ಕೂ ಅಂತಹ ದಿನಗಳು ಬರಲಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
ಈ ಮಸೂದೆ(Bill)ಯಿಂದ ಮುಂದಾಗುವ ಪರಿಣಾಮಗಳನ್ನು ರಾಜ್ಯ ಸರ್ಕಾರವೇ ಅನುಭವಿಸಬೇಕಾಗಬಹುದು. ಮಸೂದೆಯು ಹಿಂದು ನಾಯಕರು, ಹಿಂದು ಸಂಘಟನೆಗಳನ್ನು ಹತ್ತಿಕ್ಕಲು ತಂದಿರುವ ಕರಾಳ ಶಾಸನವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗುವುದು ದ್ವೇಷದ ಘೋಷಣೆಯಾಗಿ ಕೇಳುವುದಿಲ್ಲ. ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸುವುದು ರಾಷ್ಟ್ರದ್ರೋಹದ ಕೆಲಸ ಎಂಬುದು ಕಾಂಗ್ರೆಸ್(Congress)ನ ನಿಲುವು. ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪ್ರಜಾಪ್ರಭುತ್ವ(Democracy)ವನ್ನು ಉಳಿಸಲು ಹೋರಾಟ ಮಾಡಿದ ರಾಜ್ಯದ ಲಕ್ಷಾಂತರ ಕಾರ್ಯಕರ್ತರಿಗೆ ಜೈಲುವಾಸ ಹೊಸತೇನಲ್ಲ. ಹಾಗಾಗಿ ಈ ಮಸೂದೆಯ ವಿರುದ್ಧ ಇಡೀ ಹಿಂದು ಸಮಾಜ ಹೋರಾಡಲಿದೆ ಎಂಬ ಎಚ್ಚರಿಕೆಯನ್ನು ರವಾನಿಸಿದರು.
ಮುಂದಿನ ದಿನಗಳಲ್ಲಿ ಇದು ಹಿಂದುತ್ವದ ಪರ ಮತ್ತು ಹಿಂದುತ್ವ ವಿರೋಧಿ ಮನಸ್ಥಿತಿಗಳ ನಡುವಿನ ರಾಜಕೀಯ ಹೋರಾಟವಾಗಿ ಮಾರ್ಪಟ್ಟು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ನಿರ್ನಾಮವಾಗಿ ಹಿಂದು ಪರವಾದ ಸರ್ಕಾರ ಅಧಿಕಾರಕ್ಕೆ ಬರುವುದು ಶತಸಿದ್ಧ. ಈ ವೋಟ್ ಬ್ಯಾಂಕ್(Vote bank)ರಾಜಕಾರಣಕ್ಕಾಗಿ ತಂದಿರುವ ಕರಾಳ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಮತ್ತು ಯಾವುದೇ ಕಾರಣಕ್ಕೆ ಮಸೂದೆಗೆ ಅಂಕಿತ ಹಾಕಬಾರದೆಂದು ರಾಜ್ಯಪಾಲರಿಗೂ ಮನವಿ ಮಾಡುತ್ತೇವೆ ಎಂದರು.