

ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಇಬ್ಬರು ವ್ಯಕ್ತಿಗಳಿಂದ ಪುನಃ ಜೀವಬೆದರಿಕೆ ಕರೆ ಬಂದಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಪಿ ಬಿ.ನಿಖಿಲ್ ಅವರಿಗೆ ಸೋಮವಾರ ದೂರು ನೀಡಿದ್ದಾರೆ.
ರಿಜ್ವಾನ್ ಬೇಗ್ ಮತ್ತು ಫರಾನ್ ರಶೀದ್ ಎಂಬುವರಿಂದ ಬೆದರಿಕೆ ಕರೆಗಳು ಬಂದಿವೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ. ಅ.17ರ ರಾತ್ರಿ 8.49ಕ್ಕೆ ರಿಜ್ವಾನ್ ಬೇಗ್ನಿಂದ ಮೊಬೈಲ್ಗೆ ಕರೆ ಬಂದಿತ್ತು. ಅದೇ ದಿನ ರಾತ್ರಿ 10.49ಕ್ಕೆ ಡಿಜಿಟಲ್ ಫರಾನ್ ರಶೀದ್ ಎಂಬಾತನಿಂದ ಬೆದರಿಕೆ ಕರೆ ಬಂದಿತ್ತು. ಟ್ರಾಯ್ ತಂತ್ರಾಂಶದ ಮೂಲಕ ಬೆದರಿಕೆ ಕರೆ ಮಾಡಿದವರ ಹೆಸರು ತಿಳಿದುಬಂದಿದೆ ಎಂದು ದೂರಿದ್ದಾರೆ.
ನನಗೆ ಬೆದರಿಕೆ ಕರೆಗಳು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಎರಡ್ಮೂರು ಬಾರಿ ಬಂದಿದ್ದವು. ಅನಾಮಧೇಯ ವ್ಯಕ್ತಿಗಳು ವೈಯಕ್ತಿಕವಾಗಿ ನಿಂದಿಸಿ ಜೀವಬೆದರಿಕೆ ಒಡ್ಡಿರುವುದರಿಂದ ನನಗೆ ಹಾಗೂ ನಮ್ಮ ಕುಟುಂಬಕ್ಕೆ ತೀವ್ರ ಆತಂಕ ಉಂಟಾಗಿದೆ. ಅವರನ್ನು ತಕ್ಷಣ ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಮಗೆ ಮತ್ತು ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಮೀರ್ ಹೆಸರು ಪ್ರಸ್ತಾಪ: ಕರೆ ಮಾಡಿದ ಇಬ್ಬರೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಅದರಲ್ಲಿ ಒಬ್ಬ ಸಚಿವ ಜಮೀರ್ ಅಹಮ್ಮದ್ ವಿಷಯ ಪ್ರಸ್ತಾಪಿಸಿ ಬೆದರಿಕೆ ಹಾಕಿದ್ದಾನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.
ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ರಿಜ್ವಾನ್ ಬೇಗ್ ಕರೆ ಮಾಡಿದಾಗ ನಾನು ಕುಟುಂಬದ ಜತೆಗೆ ಚಿತ್ರಮಂದಿರದಲ್ಲಿದ್ದೆ. ಆತ ನೀವು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಲ್ಲವೆ ಎಂದು ಪ್ರಶ್ನಿಸಿದ. ನಂತರ ಏನೇನೋ ಮಾತನಾಡಲು ಆರಂಭಿಸಿದ. ನನಗೆ ಆತನ ಮಾತು ಸ್ಪಷ್ಟವಾಗಿ ಕೇಳಿಸಲಿಲ್ಲ. ಆಗ ನಾನು ಸರಿಯಾಗಿ ಮಾತನಾಡುವುದಿದ್ದರೆ ಮಾತನಾಡು, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದಾಗ ದೂರು ಕೊಡಿ ಎಂದು ಹೇಳಿ ಕರೆ ಕಟ್ ಮಾಡಿದ ಎಂದು ಆರೋಪಿಸಿದರು.
ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪದ ಆಶ್ರಯ ಮನೆ ಹಸ್ತಾಂತರ ವಿಳಂಬಕ್ಕೆ ಸಚಿವ ಜಮೀರ್ ಅಹಮದ್ ಖಾನ್ ಕೂಡ ಕಾರಣ ಎಂದು ಇತ್ತೀಚೆಗೆ ನಡೆದ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದೆ. ಜಮೀರ್ ಅವರು ಬಡವರಿಗೆ 12 ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈವರೆಗೂ ಬಿಡುಗಡೆ ಮಾಡಿಲ್ಲ. ಅವರು ಬದುಕಿದ್ದಾರಾ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದೆ. ಎರಡನೇ ಬಾರಿ ಕರೆ ಮಾಡಿದ ವ್ಯಕ್ತಿ ಈ ವಿಷಯ ಪ್ರಸ್ತಾಪಿಸಿ ದಾಖಲೆಗಳಿವೆ ಕೊಡುತ್ತೇನೆ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ದೂರಿದರು.
ಈ ಹಿಂದೆಯೂ ಬೆದರಿಕೆ ಕರೆಗಳು ಬಂದಿದ್ದಾಗ ನಾನು ಪೊಲೀಸರಿಗೆ ದೂರು ಕೊಟ್ಟಿದ್ದೆ. ಈ ಬಾರಿ ಕರೆಗಳು ವಿದೇಶದಿಂದ ಬಂದಿದ್ದಲ್ಲ, ನಮ್ಮ ದೇಶದಿಂದಲೇ ಮಾಡಿದ್ದಾರೆ. ರಾಜ್ಯ ಸರ್ಕಾರ ಇದರ ಬಗ್ಗೆ ತಕ್ಷಣ ಸೂಕ್ತ ಗಮನಹರಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದರು. ರಾಷ್ಟ್ರಭಕ್ತರ ಬಳಗದ ಅಧ್ಯಕ್ಷ ಕೆ.ಇ.ಕಾಂತೇಶ್, ಪ್ರಮುಖರಾದ ಮೋಹನ್ ಜಾಧವ್, ಲಕ್ಷ್ಮೀ ಶಂಕರನಾಯ್ಕ್, ಎಸ್.ಜಿ.ಬಾಲು. ಶಂಕರ್ ನಾಯ್ಕ, ಅನಿತಾ, ಶಿವಾಜಿ, ವಿಜಯಕುಮಾರ್, ಸಂತೋಷ್ ಮತ್ತಿತರರಿದ್ದರು.