ಸಂವಿಧಾನದ ಆಶಯ, ಜಾತ್ಯತೀತ ಮೌಲ್ಯಗಳ ಮೇಲೆ ದಾಳಿ GSN Memory

ಶಿವಮೊಗ್ಗ: ದೇಶದಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳು, ಸಂವಿಧಾನದ ಆಶಯ ಹಾಗೂ ಜಾತ್ಯತೀತ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ. ಬಲಪಂಥೀಯ ಮತ್ತು ಪ್ರತಿಗಾಮಿ ಶಕ್ತಿಗಳು ಸಮಾಜದಲ್ಲಿ ಕೋಮುವಾದಿ ವಿಷ ಹರಡುವುದರ ಜತೆಗೆ, ತಮ್ಮ ಸಿದ್ಧಾಂತಗಳನ್ನೇ ಜನರ ಸಹಜ ಚಿಂತನೆಯಾಗಿ ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಆತಂಕ ವ್ಯಕ್ತಪಡಿಸಿದರು.
GSN Memory
ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಎಸ್‌ಎನ್ ನೆನಪುಗಳು ಕೃತಿಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಬಿಡುಗಡೆಗೊಳಿಸಿದರು. ಎಂ.ಎನ್.ಸುಂದರರಾಜ್, ಕಿಮ್ಮನೆ ರತ್ನಾಕರ್, ಜಿ.ಎಸ್.ನಾಗರಾಜ್, ಕೆ.ಬಸಪ್ಪಗೌಡ, ಪಿ.ಪುಟ್ಟಯ್ಯ ಇದ್ದರು.
Published on: 

ಶಿವಮೊಗ್ಗ: ದೇಶದಲ್ಲಿ ಪ್ರಜಾಪ್ರಭುತ್ವದ ಸಂಸ್ಥೆಗಳು, ಸಂವಿಧಾನದ ಆಶಯ ಹಾಗೂ ಜಾತ್ಯತೀತ ಮೌಲ್ಯಗಳ ಮೇಲೆ ದಾಳಿ ನಡೆಯುತ್ತಿದೆ. ಬಲಪಂಥೀಯ ಮತ್ತು ಪ್ರತಿಗಾಮಿ ಶಕ್ತಿಗಳು ಸಮಾಜದಲ್ಲಿ ಕೋಮುವಾದಿ ವಿಷ ಹರಡುವುದರ ಜತೆಗೆ, ತಮ್ಮ ಸಿದ್ಧಾಂತಗಳನ್ನೇ ಜನರ ಸಹಜ ಚಿಂತನೆಯಾಗಿ ಬಿಂಬಿಸಲು ಪ್ರಯತ್ನಿಸುತ್ತಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಆತಂಕ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಹಿರಿಯ ನ್ಯಾಯವಾದಿ ಹಾಗೂ ಕಮ್ಯುನಿಸ್ಟ್ ಹೋರಾಟಗಾರ ಜಿ.ಎಸ್.ನಾಗರಾಜ್ ಅವರ ಜೀವನಾನುಭವಗಳನ್ನು ದಾಖಲಿಸಿರುವ ಜಿಎಸ್‌ಎನ್ ನೆನಪುಗಳು ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಚಳವಳಿಗೆ ಕೊಡುಗೆ ನೀಡಿದ ಹಿರಿಯ ನಾಯಕರನ್ನು ಗೌರವಿಸುವುದರ ಜತೆಗೆ ದೇಶದ ಪ್ರಸ್ತುತ ರಾಜಕೀಯ ಹಾಗೂ ಸಂವಿಧಾನಾತ್ಮಕ ಸ್ಥಿತಿಗತಿಯ ಬಗ್ಗೆಯೂ ಗಂಭೀರ ಚರ್ಚೆ ನಡೆಸಬೇಕಿದೆ ಎಂದರು.

ಸಮಾಜದಲ್ಲಿ ಬಲಪಂಥೀಯ ಹಾಗೂ ಪ್ರತಿಗಾಮಿ ಶಕ್ತಿಗಳು ಗೋಚರಿಸುವ ಧಮನಕಾರಿ ವ್ಯವಸ್ಥೆಯ ಜತೆಗೆ ಅಗೋಚರ ವ್ಯವಸ್ಥೆಯನ್ನೂ ರೂಪಿಸಿವೆ. ಜನರ ಮನಸ್ಸಿನಲ್ಲಿ ತಮ್ಮ ಸಿದ್ಧಾಂತಗಳೇ ಸಹಜ ಮತ್ತು ಸಾಮಾನ್ಯ ಚಿಂತನೆ ಎಂಬ ಭಾವನೆ ಮೂಡಿಸುವ ಪ್ರಯತ್ನ ನಡೆಸುತ್ತಿವೆ. ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ತಮ್ಮ ಪ್ರಭಾವ ವಿಸ್ತರಿಸುತ್ತಿವೆ ಎಂದು ಹೇಳಿದರು.

ಸಾಮಾಜಿಕ ಸಾಮರಸ್ಯ ಬೆಳೆಸುವಲ್ಲಿ ಹಾಗೂ ಪ್ರತಿಯೊಬ್ಬರೂ ಈ ರಾಜ್ಯ ನನ್ನದು, ಈ ದೇಶ ನನ್ನದು, ಈ ಜಗತ್ತು ನನ್ನದೆಂಬ ಭಾವನೆಯೊಂದಿಗೆ ಬದುಕುವಂತಹ ಸಮಾಜ ನಿರ್ಮಿಸುವಲ್ಲಿ ಹಿರಿಯ ನಾಯಕರ ಕೊಡುಗೆ ಮಹತ್ವದ್ದಾಗಿದೆ. ರಾಜ್ಯ ಮತ್ತು ದೇಶದ ಏಕತೆಯಷ್ಟೇ ಅಲ್ಲದೆ, ಇಡೀ ಮಾನವಕುಲದ ಏಕತೆಯ ಸಾರ್ವತ್ರಿಕ ಮೌಲ್ಯವನ್ನು ಎತ್ತಿಹಿಡಿಯಬೇಕು. ವಸುದೈವ ಕುಟುಂಬಕಂ ಎಂಬುದು ಜಗತ್ತಿನ ಎಲ್ಲರೂ ಒಂದೇ ಕುಟುಂಬದವರು ಎಂಬ ಉದಾತ್ತ ಸಂದೇಶ ಸಾರುತ್ತದೆ ಎಂದರು.

ಪಾರದರ್ಶಕ ಚುನಾವಣೆ ಇಂದಿಗೆ ಅಗತ್ಯ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣಾ ಪ್ರಕ್ರಿಯೆ ಅತ್ಯಂತ ಮಹತ್ವದ್ದಾಗಿದೆ. ಪ್ರತಿಯೊಬ್ಬರ ಮತದಾನದ ಹಕ್ಕಿನ ರಕ್ಷಣೆ ಮತ್ತು ಪಾರದರ್ಶಕ ಚುನಾವಣೆ ನಡೆಸುವ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿದೆ. ಆಯೋಗದ ನೇಮಕಾತಿ ಪ್ರಕ್ರಿಯೆ ಸ್ವತಂತ್ರ ಹಾಗೂ ಪಾರದರ್ಶಕವಾಗಿರಬೇಕು. ಈ ಕುರಿತು ಸಂವಿಧಾನ ರಚನಾ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಸಂಸತ್ತು ಈ ಸಂಬಂಧ ಕಾನೂನು ರೂಪಿಸಬೇಕೆಂಬ ಆಶಯವಿತ್ತು ಎಂದು ಎಂ.ಎ.ಬೇಬಿ ಹೇಳಿದರು.

ಪ್ರಧಾನಮಂತ್ರಿ, ಲೋಕಸಭೆಯ ಪ್ರತಿಪಕ್ಷದ ನಾಯಕ ಮತ್ತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಯ ಮೂಲಕ ನೇಮಕಾತಿ ನಡೆಯಬೇಕೆಂಬ ವ್ಯವಸ್ಥೆಯನ್ನು ನ್ಯಾಯಾಲಯ ಸೂಚಿಸಿತ್ತು. ಆದರೆ ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕಾಯ್ದೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳನ್ನು ಆಯ್ಕೆ ಸಮಿತಿಯಿಂದ ಹೊರಗಿಡಲಾಗಿದೆ. ಪ್ರಧಾನಮಂತ್ರಿ ಹಾಗೂ ಅವರು ನಾಮನಿರ್ದೇಶನ ಮಾಡುವ ಸಚಿವರು ಸಮಿತಿಯಲ್ಲಿರುವುದರಿಂದ ಸರ್ಕಾರಕ್ಕೆ ಮೂರರಲ್ಲಿ ಎರಡು ಬಹುಮತ ದೊರೆಯುತ್ತದೆ. ಇದರಿಂದ ವಿರೋಧ ಪಕ್ಷದ ನಾಯಕನ ಪಾತ್ರದ ಮಹತ್ವವೇನು ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಟೀಕಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಹಿರಿಯ ನ್ಯಾಯವಾದಿ ಜಿ.ಎಸ್.ನಾಗರಾಜ್, ಹಿರಿಯ ನ್ಯಾಯವಾದಿ ಕೆ.ಬಸಪ್ಪಗೌಡ, ಸಮಾಜವಾದಿ ನಾಯಕ ಪಿ.ಪುಟ್ಟಯ್ಯ ಉಪಸ್ಥಿತರಿದ್ದರು.

ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಬದುಕಿನಲ್ಲಿ ಮೌಲ್ಯ, ಬದ್ಧತೆ ಮತ್ತು ಸೈದ್ಧಾಂತಿಕ ನಿಷ್ಠೆಯೊಂದಿಗೆ ಮುನ್ನಡೆದ ಹಿರಿಯ ವಕೀಲ ಜಿ.ಎಸ್.ನಾಗರಾಜ್ ಅವರ ಜೀವನಾನುಭವಗಳು ಯುವಜನತೆಗೆ ಸ್ಫೂರ್ತಿಯಾಗಲಿವೆ. ಪುಸ್ತಕದಲ್ಲಿ ಅವರ ನಾಲ್ಕು ಅಂಶಗಳ ಕುರಿತು ಬರೆದಿದ್ದೇನೆ.
ಎಂ.ಎನ್.ಸುಂದರರಾಜ್, ಲೇಖಕ