ಅಂಬೇಡ್ಕರ್ ಆದರ್ಶಗಳು ಉದಾತ್ತವಾದದ್ದು I ambedkar Ideals

ಕಿರುಹೊತ್ತಗೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಪ್ರಭುಲಿಂಗ ಕವಳಿಕಟ್ಟಿ, ಎಚ್.ಎಸ್.ಸುಂದರೇಶ್, ಬಿ.ನಿಖಿಲ್, ಎನ್.ಹೇಮಂತ್, ಮಾಯಣ್ಣ ಗೌಡ ಇದ್ದರು.
ಕಿರುಹೊತ್ತಗೆಯನ್ನು ಗಣ್ಯರು ಬಿಡುಗಡೆ ಮಾಡಿದರು. ಬಿ.ವೈ.ರಾಘವೇಂದ್ರ, ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ‌್ಯಾನಾಯ್ಕಾ, ಪ್ರಭುಲಿಂಗ ಕವಳಿಕಟ್ಟಿ, ಎಚ್.ಎಸ್.ಸುಂದರೇಶ್, ಬಿ.ನಿಖಿಲ್, ಎನ್.ಹೇಮಂತ್, ಮಾಯಣ್ಣ ಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಾಬಾಸಾಹೇಬರು ಎಲ್ಲರಿಗೂ ಮಾದರಿ
  • ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬಣ್ಣನೆ
ಶಿವಮೊಗ್ಗ: ಅಂಬೇಡ್ಕರ್ (ambedkar) ಅವರ ತತ್ವ, ಆದರ್ಶಗಳು ಉದಾತ್ತವಾದದ್ದು. ಅನ್ಯಾಯದ ವಿರುದ್ಧ ಧ್ವನಿಯಾಗಿ, ಸಮಾನತೆಗಾಗಿ ಹೋರಾಡಿದ ಯುಗಪುರುಷ ಅಂಬೇಡ್ಕರ್ ನಮ್ಮೆಲ್ಲರಿಗೂ ಮಾದರಿ (model) ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ (raghavendra) ಹೇಳಿದರು.
ಜಿಲ್ಲಾಡಳಿತದಿಂದ ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯಂತ ಸುಶಿಕ್ಷಿತರಾಗಿದ್ದ ಅಂಬೇಡ್ಕರ್ ಹಲವು ವಿವಿಗಳಿಂದ ಪದವಿ ಪಡೆದಿದ್ದರು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅವರೊಬ್ಬ ಶಕ್ತಿ. ಅಸ್ಪಶ್ಯತೆ ನಿವಾರಣೆ ಮಾಡಿ, ಸರ್ವಧರ್ಮಗಳು ಸಮಭಾವದಿಂದ ಬದುಕಬೇಕೆಂಬ ಸಂವಿಧಾನ ನೀಡಿದ ಮಹಾನ್ ಚೇತನ. ಅಸ್ಪಶ್ಯತೆ ವಿರುದ್ಧ ಅವರು ಗಟ್ಟಿ ಧ್ವನಿಯಾಗಿದ್ದರು ಎಂದು ಬಣ್ಣಿಸಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಅಂಬೇಡ್ಕರ್ ಅವರದ್ದು ದೈವದತ್ತ ಕೊಡುಗೆ. ನಮ್ಮ ಸಂವಿಧಾನಕ್ಕೆ ಮಹಾನ್ ಶಕ್ತಿ ನೀಡಿದವರು ಅವರು. ನಮ್ಮೆಲ್ಲರಿಗೆ ಧ್ವನಿ ನೀಡಿದ ಮಹಾನ್ ಚೇತನವು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು ಎಂದು ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ.ನಾಗೇಶ್ ಬಿದರಗೋಡು ವಿಶೇಷ ಉಪನ್ಯಾಸ ನೀಡಿ, ಅಂಬೇಡ್ಕರ್ ವಿಷಯದಲ್ಲಿ ವಿಜೃಂಭಣೆಗಿಂತ ವಿಚಾರ ಮುಖ್ಯ. ಆರಾಧನೆಗಿಂತ ಆಚರಣೆ ಮುಖ್ಯವಾಗಬೇಕು. ಅಂಬೇಡ್ಕರ್ ಪ್ರಜ್ಞೆಯಾಗಿ ನಮ್ಮೊಳಗಿರಬೇಕು. ಯಾವ ಮಾನದಂಡಗಳಲ್ಲೂ ಅವರನ್ನು ಅಳೆಯಲು ಸಾಧ್ಯವಿಲ್ಲ ಎಂದರು.
ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳು) ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ಚೇತನ್, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಎನ್.ಹೇಮಂತ್, ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಿ.ಮಲ್ಲೇಶಪ್ಪ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಬೋಧಿಸಲಾಯಿತು. ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿನಿಲಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂಬೇಡ್ಕರ್ ಕುರಿತ ಕಿರುಹೊತ್ತಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ಮೆರವಣಿಗೆಯಲ್ಲಿ ಶಾಸಕ ಚೆನ್ನಿ ಡಾನ್ಸ್
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಾಲಿಕೆ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಹೂವಿನ ಹಾರ ಹಾಕಿದರು. ಬಳಿಕ ಸಭಾ ಕಾರ್ಯಕ್ರಮ ನಡೆಯುವ ಸಭಾಂಗಣದವರೆಗೂ ಅಂಬೇಡ್ಕರ್ ಭಾವಚಿತ್ರದೊಂದಿಗೆ ಮೆರವಣಿಗೆ ಸಾಗಿ ಬಂದಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಕಾಲೇಜು ವಿದ್ಯಾರ್ಥಿಗಳು, ದಲಿತಪರ ಸಂಘಟನೆಗಳ ಪ್ರಮುಖರು ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ ಜನಪದ ವಾದ್ಯಗಳ ಸದ್ದಿಗೆ ತಕ್ಕಂತೆ ಡಾನ್ಸ್ ಮಾಡಿದ್ದು ಗಮನಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net