ಮನುಷ್ಯನಿಗೆ ದೀಕ್ಷೆ ಇಲ್ಲದೇ ಮೋಕ್ಷವೂ ಸಿಗಲ್ಲ । Shiva deeksha
ರಾಗಿಗುಡ್ಡದ ಬಿ.ಎಸ್.ಯಡಿಯೂರಪ್ಪ ವೀರಶೈವ ಉಚಿತ ವಿದ್ಯಾರ್ಥಿ ನಿಲಯದಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳು ಉಚಿತ ಶಿವದೀಕ್ಷೆ ಸ್ವೀಕರಿಸಿದರು. ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಶ್ರೀ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಸ್ವಾಮೀಜಿ, ಶ್ರೀ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ಸಿ.ಎಸ್.ಷಡಾಕ್ಷರಿ, ಸಿ.ಜಿ.ಪರಮೇಶ್ವರಪ್ಪ, ಡಾ. ಶಿವಯೋಗಿ ಎಲಿ, ಡಾ. ಸಿ.ಎ.ಹಿರೇಮಠ, ಸಂತೋಷ್ ಬಳ್ಳೆಕೆರೆ ಇದ್ದರು.
ಜೀವನದಲ್ಲಿ ಸಾಯುವ ಮುನ್ನ ಲಿಂಗ ದೀಕ್ಷೆ ಪಡೆಯುವುದು ಅತಿಮುಖ್ಯ
ದೀಕ್ಷೆ ಪಡೆದವರಿಗೆ ಸಿಗಲಿದೆ ಲಿಂಗಪೂಜೆ ಮಾಡುವ ಅಧಿಕಾರ
ಕಾಶಿ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿಕೆ
ಶಿವಮೊಗ್ಗ: ಮನುಷ್ಯ ಸಾಯುವ ಮುನ್ನ ದೀಕ್ಷೆ ಪಡೆದಿರಬೇಕು. ದೀಕ್ಷೆ ಇಲ್ಲದೇ ಮೋಕ್ಷವೂ ಸಿಗುವುದಿಲ್ಲ ಎದು ಕಾಶಿ ಪೀಠ(Kashi peetha)ದ ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ರಾಗಿಗುಡ್ಡದ ಬಿ.ಎಸ್.ಯಡಿಯೂರಪ್ಪ ವೀರಶೈವ ಉಚಿತ ವಿದ್ಯಾರ್ಥಿ ನಿಲಯ(Hostel)ದಲ್ಲಿ 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಶಿವದೀಕ್ಷೆ(Shiva deekshe) ನೀಡಿ ಆಶೀವರ್ಚನ ನೀಡಿದ ಅವರು, ಜೀವನದಲ್ಲಿ ಲಿಂಗ ಅಥವಾ ಶಿವ ದೀಕ್ಷೆ ಪಡೆಯುವುದು ಅತಿಮುಖ್ಯ ಎಂದರು.
ದೀಕ್ಷೆ ಎಷ್ಟು ವರ್ಷಕ್ಕೆ ಸಿಕ್ಕಿತೆಂಬುದು ಮುಖ್ಯವಲ್ಲ. ಎಂಟು ವರ್ಷಕ್ಕೆ ದೀಕ್ಷೆ ಪಡೆಯಬೇಕಿದೆ. ಆಗ ಸಾಧ್ಯವಾಗದಿದ್ದರೆ ಯೌವನಾವಸ್ಥೆ, ಆಗಲೂ ಆಗದಿದ್ದರೆ ಮುಪ್ಪಿನಲ್ಲಿ ಪಡೆಯಬಹುದು. ಕೊನೆಯಪಕ್ಷ ಸಾಯುವುದಕ್ಕೂ ಮುನ್ನ ದೀಕ್ಷೆ ಪಡೆದಿರಬೇಕು. ಆಗ ಮಾತ್ರ ಮೋಕ್ಷವು ಪ್ರಾಪ್ತಿ ಆಗಲಿದೆ ಎಂದರು.
ವೀರಶೈವ ಲಿಂಗಾಯತ(veerashaia Lingayata)ರಲ್ಲಿ ಉಪನಯನ ಸಂಸ್ಕಾರ ಮತ್ತು ದೀಕ್ಷಾ ಸಂಸ್ಕಾರ ಪ್ರಮುಖವಾಗಿವೆ. ಉಪನಯನ ಎಂಬುದು ವರ್ಣ ಎಂಬ ಆಧಾರದ ಮೇಲೆ ಮಾಡುವುದಾಗಿದೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯನಾಗಿ ಜನ್ಮ ತಾಳಿರಬೇಕು. ಈ ಮೂರು ವರ್ಗದವರನ್ನು ಹೊರತುಪಡಿಸಿ ಬೇರೆಯವರಿಗೆ ಉಪನಯನ(Upanayana) ಮಾಡಬೇಕಿಲ್ಲ. ಆದರೆ ವ್ಯಕ್ತಿಯ ವ್ಯಕ್ತಿತ್ವದ ಆಧಾರದ ಮೇಲೆ ದೀಕ್ಷೆ ನೀಡಲಾಗುತ್ತದೆ. ದೀಕ್ಷೆ ನೀಡುವಾಗ ವರ್ಣ ಆಶ್ರಮಗಳಲ್ಲ, ಅವನಲ್ಲಿರುವ ಉತ್ಕಟವಾದ ಭಕ್ತಿಯನ್ನು ಪರೀಕ್ಷಿಸಿ ದೀಕ್ಷೆ ನೀಡಲಾಗುತ್ತದೆ ಎಂದರು.
ದೀಕ್ಷೆಗೆ ಉತ್ಕಟವಾದ ಇಚ್ಛೆವೊಂದದಿದ್ದರೆ ಬ್ರಾಹ್ಮಣ, ವೀರಶೈವ, ಲಿಂಗಾಯತರು, ಕ್ಷತ್ರಿಯರೆಂದು ನೋಡುವುದಿಲ್ಲ. ನಿತ್ಯ ಕರ್ಮ ಎಂದರೆ ಇಷ್ಟಲಿಂಗ ಪೂಜೆ(Istalinga puje). ಮಂತ್ರ ಜಪ, ಅಷ್ಟಾವರಗಳ ಆಚರಣೆ, ಪಂಚಾಚಾರ್ಯರ ಪರಿಪಾಲನೆಗಳು ಮಾಡುವುದೇ ದೀಕ್ಷೆಯ ಉದ್ದೇಶವಾಗಿದೆ ಎಂದು ಹೇಳಿದರು.
ದೀಕ್ಷೆ ಪಡೆದವರಿಗೆ ಲಿಂಗಪೂಜೆ ಮಾಡುವ ಅಧಿಕಾರ ಸಿಗಲಿದ್ದು, ಕಲಿಯುವ ಎಲ್ಲ ವಿದ್ಯೆಗಳು ಪ್ರಾಪ್ತಿ ಆಗಲಿವೆ. ಎಲ್ಲ ವಿದ್ಯೆಗಳಿಗೂ ಮೂಲ ಮಂತ್ರವಿದ್ಯೆಯಾಗಿದೆ. ಹಾಗಾಗಿ ದಿನಕ್ಕೆ ಒಮ್ಮೆಯಾದರೂ ಲಿಂಗಪೂಜೆ ಮಾಡಬೇಕು. ಲಿಂಗವನ್ನು ಸದಾ ಕೊರಳಲ್ಲಿ ಧರಿಸಿರಬೇಕು. 108 ಎಂಟು ಬಾರಿ ಜಪ ಮಾಡಬೇಕು. ಇದರಿಂದ ಬುದ್ಧಿ ಮತ್ತು ಮನಸ್ಸು ಶುದ್ಧಿವಾಗುತ್ತದೆ ಎಂದು ಹೇಳಿದರು.
ಹೊನ್ನಾಳಿಯ ಹಿರೇಕಲ್ಮಠದ ಶ್ರೀ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಕೋಣಂದೂರು ಬೃಹನ್ಮಠದ ಶ್ರೀ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಗೌರವಾಧ್ಯಕ್ಷ ಸಿ.ಜಿ.ಪರಮೇಶ್ವರಪ್ಪ, ಕಾರ್ಯದರ್ಶಿ ಡಾ. ಶಿವಯೋಗಿ ಎಲಿ, ಖಜಾಂಚಿ ಎನ್.ಎಂ.ರಂಗನಾಥ, ಕಾರ್ಯಕ್ರಮದ ಸಂಚಾಲಕರಾದ ಡಾ. ಸಿ.ಎ.ಹಿರೇಮಠ, ಬಿ.ಎಚ್.ನಿರಂಜನಮೂರ್ತಿ, ಪ್ರಮುಖರಾದ ಸಂತೋಷ್ ಬಳ್ಳೆಕೆರೆ ಮತ್ತಿತರರು ಉಪಸ್ಥಿತರಿದ್ದರು.