ಶಿವಮೊಗ್ಗ ಮಾರಿಕಾಂಬೆಯ ದರ್ಶನಕ್ಕೆ ಜನಸಾಗರ I marikamba jatre
ಶಿವಮೊಗ್ಗ ಮಾರಿಕಾಂಬ ಜಾತ್ರೆಯ ಎರಡನೇ ದಿನ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿರುವ ದೇವಿ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಗದ್ದುಗೆಯಲ್ಲಿ ವಿರಾಜಮಾನವಾದ ದೇವಿ
ಜಾತ್ರೆಯ ಎರಡನೇ ದಿನವೂ ಭಕ್ತರ ಸರದಿ ಸಾಲು
ಬೇವಿನುಡಿಗೆ ತೊಟ್ಟು ಹರಕೆ ತೀರಿಸಿದ ಜನರು
ಶಿವಮೊಗ್ಗ: ನಗರದ ಪುರಾಣ ಪ್ರಸಿದ್ಧ ಕೋಟೆ ಮಾರಿಕಾಂಬ (marikamba) ಜಾತ್ರೆ (fair) ಯ ಎರಡನೇ ದಿನವಾದ ಬುಧವಾರ (wednesday) ವೂ ದೇವಿಯ ದರ್ಶನಕ್ಕೆ ಜನಸಾಗರವೇ ನೆರೆದಿತ್ತು. ಸರದಿ ಸಾಲಿನಲ್ಲಿ ನಿಂತ ಭಕ್ತರು ದೇವಿಗೆ ಹರಕೆ ಸಲ್ಲಿಸಿ ಪುನೀತರಾದರು.
ಗಾಂಧಿ ಬಜಾರ್‌ನಲ್ಲಿ ಪ್ರತಿಷ್ಠಾಪಿಸಿದ್ದ ಮಾರಿಕಾಂಬ ದೇವಿಯನ್ನು ಮಂಗಳವಾರ ಮಧ್ಯರಾತ್ರಿ ರಥದಲ್ಲಿ ಕೂರಿಸಿ, ಮೆರವಣಿಗೆ ಮೂಲಕ ಉಪ್ಪಾರ ಸಮಾಜದವರು ಕೋಟೆ ರಸ್ತೆಯಲ್ಲಿರುವ ಮಾರಿಗದ್ದುಗೆಗೆ ಬುಧವಾರ ಮುಂಜಾನೆ ಕರೆತಂದರು. ಈ ವೇಳೆ ಗಂಗಾ ಪರಮೇಶ್ವರಿ ದೇವಾಲಯದ ಬಳಿ ಗಂಗಾಮತಸ್ಥರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬುಧವಾರ ಬೆಳಗಿನ ಜಾವ ಹರಿಜನ ಸಮಾಜದವರು ಬೇವಿನ ಉಡುಗೆ ಉಟ್ಟು ದೇವಿಗೆ ಪೂಜಿಸಿ ಗದ್ದುಗೆ ಮೇಲೆ ಕೂರಿಸಿದರು. ನಂತರ ಕುರುಬ ಸಮಾಜದ ಚೌಡಿಕೆ ಕುಟುಂಬದವರು ದೇವಿಗೆ ಮೊದಲ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದರು. ಈ ಎಲ್ಲ ಕಾರ್ಯಗಳ ನಂತರ ವಿವಿಧ ಸಮಾಜದವರು ಸರದಿಯಂತೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬುಧವಾರವೂ ಭಕ್ತರು ಬೆಳಗಿನ ಜಾವವೇ ಕೋಟೆ ರಸ್ತೆಯಲ್ಲಿರುವ ಮಾರಿ ಗದ್ದುಗೆ ಬಳಿ ಜಮಾಯಿಸಿ ದೇವಿ ದರ್ಶನ ಪಡೆದರು. ಮಾರಿ ಗದ್ದುಗೆ ಬಳಿ ಭಕ್ತರ ಸರತಿ ಸಾಲು ಮೊದಲ ದಿನದಂತೆಯೇ ಮುಂದುವರೆದಿತ್ತು.
ಮಾರಿಕಾಂಬ ದೇವಾಲಯದ ಸುತ್ತಲೂ ಭಕ್ತಾದಿಗಳಿಗೆ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದ್ದು ದೇವಿಯ ದರ್ಶನ ವ್ಯವಸ್ಥೆಗೆ ಲೋಪವಾಗದಂತೆ ಸಮಿತಿಯಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಶೇಷ ದರ್ಶನಕ್ಕೆ ದರ ನಿಗದಿಪಡಿಸಲಾಗಿದೆ. ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಸುತ್ತಲೂ ನೂರಾರು ಮಳಿಗೆಗಳು ಜಾತ್ರೆಯ ಸಂಭ್ರಮಕ್ಕೆ ಮೆರುಗು ನೀಡಿದ್ದವು. ಸಾವಿರಾರು ಭಕ್ತರು ಹರಕೆ ತೀರಿಸಲು ಕೋಳಿ, ಕುರಿ ಅರ್ಪಣೆಗೆ ಸಿದ್ಧರಾಗಿ ಬಂದಿದ್ದರು.
ದೇವಿಯ ಮಡಿಲಲ್ಲಿ ಪುಟ್ಟ ಮಕ್ಕಳನ್ನು ಕೂರಿಸಿ ಹರಕೆ ತೀರಿಸುವ ಪಾಲಕರ ಸಂಪ್ರದಾಯ ಪ್ರತಿ ವರ್ಷದಂತೆಯೇ ಮುಂದುವರಿಯಿತು. ಮಹಿಳೆಯರು ದೇವಿಗೆ ಸೀರೆ, ಮಡಿಲಕ್ಕಿ ಸಮರ್ಪಣೆ ಮಾಡಿದರು. ಹಲವು ಸಂಘ-ಸಂಸ್ಥೆಗಳಿಂದ ನಿರಂತರವಾಗಿ ಮಜ್ಜಿಗೆ ಮತ್ತು ಪಾನಕ ವಿತರಣೆ ನಡೆಯಿತು.
ವಿವಿಧ ಹರಕೆಗಳ ಅರ್ಪಣೆ
ಬೆಳಗಿನ ಜಾವದಿಂದಲೇ ಭಕ್ತರು ವಿವಿಧ ಹರಕೆಗಳನ್ನು ದೇವಿಗೆ ಅರ್ಪಿಸಲು ತಂಡೋಪತಂಡವಾಗಿ ಮಾರಿ ಗದ್ದುಗೆಗೆ ಆಗಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆಯವರೆಗೂ ಬೇವಿನುಡುಗೆ ತೊಟ್ಟ ಭಕ್ತರು ದೇವಸ್ಥಾನಕ್ಕೆ ಬಂದು ಹರಕೆ ತೀರಿಸುತ್ತಿದ್ದದ್ದು ವಿಶೇಷ. ಇನ್ನು ವಿವಿಧ ಸಮಾಜದವರು ದೇವಿಗೆ ಮೊಸರನ್ನದ ಎಡೆ ಹರಕೆ ಸಲ್ಲಿಸಿದರು.
ದೇವಿಗೆ ಕುರಿ, ಕೋಳಿಗಳ ಬಲಿ
ಶಿವಮೊಗ್ಗದ ವಿವಿಧೆಡೆ ಬುಧವಾರ ಕುರಿ, ಕೋಳಿಗಳನ್ನು ದೇವಿಗೆ ಬಲಿಕೊಡಲಾಯಿತು. ಭಕ್ತರು ತಮ್ಮ ಮನೆಗಳ ಮುಂದೆಯೇ ಕುರಿಗಳನ್ನು ಕಡಿದು ದೇವಿಗೆ ಸಮರ್ಪಿಸಿದರು. ಮಟನ್ ಸ್ಟಾಲ್‌ಗಳ ಮುಂದೆ ಕುರಿ ಮಾಂಸ ಖರೀದಿಗೆ ಜನ ಜಮಾಯಿಸಿದ್ದರು. ಬಂಧು ಬಳಗವನ್ನೆಲ್ಲಾ ಆಹ್ವಾನಿಸಿ, ಎಲ್ಲರೂ ಒಟ್ಟಾಗಿ ಸೇರಿ ಮಾಂಸದೂಟ ಸವಿದರು.
ಇನ್ನು ರಾಜ್ಯದ ವಿವಿಧ ಭಾಗಗಳಿಂದ ಜನ ಶಿವಮೊಗ್ಗದಲ್ಲಿರುವ ತಮ್ಮ ಸಂಬಂಧಿಕರ ಮನೆಗಳಿಗೆ ಆಗಮಿಸುತ್ತಿದ್ದಾರೆ. ಜಾತ್ರೆ ನಡೆಯುತ್ತಿರುವ ಕೋಟೆ ರಸ್ತೆ ಮಾತ್ರವಲ್ಲದೆ, ಎಸ್‌ಪಿಎಂ ರಸ್ತೆ, ಒಟಿ ರಸ್ತೆ, ಅಶೋಕ ರಸ್ತೆಗಳೂ ಜನಜಂಗುಳಿಯಿಂದ ಕೂಡಿವೆ.