ಸಮಾರೋಪಾದಿಯಲ್ಲಿ ರಾಜನಾಲೆ, ಕಾಲುವೆ ಸ್ವಚ್ಛಗೊಳಿಸಿದರೆ ಶಿವಮೊಗ್ಗಕ್ಕೆ ಉಳಿಗಾಲ

Rainy season meeting
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಳೆಗಾಲ ಪೂರ್ವ ಸಿದ್ಧತೆ ಕುರಿತು ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳ ಸಭೆ ನಡೆಸಿದರು. ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಉಪ ಆಯುಕ್ತ ತುಷಾರ್ ಹೊಸೂರ ಇದ್ದರು.
Published on

ಶಿವಮೊಗ್ಗ: ಮಳೆಗಾಲ ಆರಂಭಕ್ಕೂ ಮುನ್ನವೇ ಸಮಾರೋಪಾದಿಯಲ್ಲಿ ರಾಜನಾಲೆ, ಕಾಲುವೆ, ಸಣ್ಣಪುಟ್ಟ ಚರಂಡಿಗಳನ್ನೂ ಸ್ವಚ್ಛಗೊಳಿಸಿದರೆ ಮಾತ್ರ ಶಿವಮೊಗ್ಗ ಉಳಿಯುತ್ತದೆ. ಇಲ್ಲವಾದಲ್ಲಿ ಬೆಂಗಳೂರಿನಲ್ಲಿ ಆದ ಪರಿಸ್ಥಿತಿ ಇಲ್ಲಿಗೂ ಬರಲಿದೆ. ಹಾಗಾಗಿ ಮೇ 31ರೊಳಗೆ ಹೂಳು ಮತ್ತು ಇತರೆ ತ್ಯಾಜ್ಯ ತೆಗೆಸುವ ಕೆಲಸ ಆಗಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮಹಾನಗರ ಪಾಲಿಕೆ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ಸಣ್ಣ ಚರಂಡಿಗಳನ್ನೂ ಕ್ಲೀನ್ ಮಾಡಿಸಬೇಕು. ಗುತ್ತಿಗೆದಾರರ ಬೆನ್ನತ್ತಿ ಕೆಲಸ ಮಾಡಿಸಿದಾಗ ಮಾತ್ರ ಶಿವಮೊಗ್ಗಕ್ಕೆ ಉಳಿಗಾಲ. ಇಲ್ಲವಾದರೆ ಮುಂದೆ ಮಳೆಯಿಂದ ನಾನಾ ಸಂಕಷ್ಟ ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ತಣ್ಣಗೆ ಕುಳಿತು ಮಳೆ ಬಿದ್ದ ಬಳಿಕ ಕೆಲಸ ಮಾಡಿಸಲು ಹೋಗುವುದು ಸರಿಯಲ್ಲ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರತಿ ವರ್ಷ ಇದೇ ಪಟ್ಟಿ ಹಿಡಿದು ಹೋಗುವ ಕೆಲಸ ಆಗಬಾರದು. ನಾಗರಿಕರಿಗೆ ಅನುಕೂಲ ಆಗಬೇಕೋ ವಿನಃ ಗುತ್ತಿಗೆದಾರರಿಗಲ್ಲ. ಇಷ್ಟೊತ್ತಿಗಾಗಲೇ ಹೂಳೆತ್ತುವ ಕೆಲಸ ಮುಗಿಸಬೇಕಿತ್ತು. ಪ್ರತಿ ವರ್ಷವೂ ಈ ಬಗ್ಗೆ ಚರ್ಚೆ ಮಾಡುವುದಕ್ಕೆ ಬೇಸರ ಬರುತ್ತದೆ ಎಂದರು.

7, 8, 9, 18ನೇ ವಾರ್ಡ್‌ಗಳಲ್ಲಿ ಸಣ್ಣ ಡ್ರೈನೇಜ್‌ಗಳನ್ನು ಕ್ಲೀನ್ ಮಾಡಿಲ್ಲ. ಇದರಿಂದ ಸಣ್ಣ ಮಳೆಯಾದರೂ ಮುಖ್ಯ ರಸ್ತೆಗಳಲ್ಲಿ ನೀರು ಹರಿಯುತ್ತಿದೆ. ಪಾಲಿಕೆಯಲ್ಲಿ ಯಂತ್ರೋಪಕರಣಗಳಿದ್ದರೂ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಈ ಮಾಸಾಂತ್ಯದೊಳಗೆ ಕೆಲಸ ಮುಗಿಸಿದರೆ ನೀವಿರುವ ಜಾಗಕ್ಕೆ ಬಂದು ಧನ್ಯವಾದ ಸಮರ್ಪಣೆ ಮಾಡುತ್ತೇವೆ ಎಂದು ಇಂಜಿಯರ್‌ಗಳಿಗೆ ತಿಳಿಸಿದರು.

ಅಶೋಕ ವೃತ್ತದಿಂದ ಬೆಕ್ಕಿನಕಲ್ಮಠವರೆಗೆ ಡ್ರೈನೇಜ್, ಬೊಮ್ಮನಕಟ್ಟೆ, ವಿದ್ಯಾನಗರ, ಶಾಂತಮ್ಮ ಲೇಔಟ್, ಚಿಕ್ಕಲ್, ಟಿಪ್ಪುನಗರ ಮುಖ್ಯ ರಸ್ತೆ ಸೇರಿ ನಗರಾದ್ಯಂತ ಇರುವ ಚರಂಡಿ, ರಸ್ತೆ, ರಾಜಕಾಲುವೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸೂಚಿಸಿದರು. ಪಾಲಿಕೆ ಉಪ ಆಯುಕ್ತ ತುಷಾರ ಹೊಸೂರು ಉಪಸ್ಥಿತರಿದ್ದರು.

ಗುತ್ತಿಗೆದಾರರ ಬಿಗಿ ಗೊಳಿಸಿದರೆ ಕೆಲಸ ಪೂರ್ಣ

ಶಿವಮೊಗ್ಗ ನಗರದಲ್ಲಿ ಮಳೆಯಿಂದ ಆಗುವ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಇನ್ಮುಂದೆ ಗುತ್ತಿಗೆದಾರರ ಬಿಗಿಗೊಳಿಸಿ ಕೆಲಸ ಮಾಡಿಕೊಳ್ಳಬೇಕಿದೆ ಎಂದು ಚನ್ನಬಸಪ್ಪ ಹೇಳಿದರು. ಮುಂಗಾರು ಆರಂಭಕ್ಕೆ ಇನ್ನ ಕೆಲವೇ ದಿನ ಬಾಕಿ ಇದೆ. ಹಾಗಾಗಿ ಇರುವ ಅವಧಿಯಲ್ಲೇ ನಗರಾದ್ಯಂತ ಕೆಲಸ ಮಾಡಿಸಿಕೊಳ್ಳಬೇಕು. ಏಕಕಾಲಕ್ಕೆ ಹೂಳು ತೆಗೆಸಬೇಕು. ಗುತ್ತಿಗೆದಾರರ ಮೇಲೆ ಬಿಟ್ಟರೆ ಎಲ್ಲೋ ಒಂದು ಕಡೆ ಕೆಲಸ ಮಾಡುತ್ತಾರೆ. ಅಲ್ಲಿ ಮುಗಿದ ಮೇಲೆ ಮತ್ತೊಂದು ಕಡೆ ಹೋಗುತ್ತಾರೆ. ಆ ರೀತಿ ಆಗಬಾರದು. ಯಂತ್ರಗಳನ್ನು ಬಳಸಿ ಏಕಕಾಲಕ್ಕೆ ತ್ವರಿತಗತಿಯಲ್ಲಿ ಕೆಲಸ ಮಾಡಿಸಬೇಕು. ಇಂಜಿನಿಯರ್‌ಗಳು ಸ್ಥಳದಲ್ಲೇ ಇದ್ದು ಕೆಲಸ ಪೂರ್ಣಗೊಳಿಸುವವರೆಗೂ ಇರಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net