ಸಮಾಜದಲ್ಲಿ ಅಶಾಂತಿ ಅಭಿವೃದ್ಧಿಗೆ ಮಾರಕ; ಕೇಂದ್ರ ಸಚಿವ ಬೇಸರ

16 smg 8
Published on

ಶಿವಮೊಗ್ಗ: ಸಮಾಜದಲ್ಲಿ ಪದೇ ಪದೇ ಕೊಲೆ ನಡೆಸಿ ಅಶಾಂತಿ ಮೂಡಿಸುವುದು ಅಭಿವೃದ್ಧಿಗೆ ಮಾರಕ ಎಂದು ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ಮಂಗಳವಾರ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪ್ರೇಮ್‌ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕೃತ್ಯಗಳ ಹಿಂದೆ ಎಸ್‌ಡಿಪಿಐ, ಪಿಎ್ಐ ಇದೆಯೆಂದು ಹೇಳುವ ಮುನ್ನ ಅಲ್ಪಸಂಖ್ಯಾತ ಸಮಾಜದ ಪ್ರಮುಖರು ಸಭೆ ನಡೆಸಿ ಯಾರ ಕೈವಾಡ ಇದೆ. ಯಾರು ಎಲ್ಲಿಂದ ಬಂದಿದ್ದಾರೆ. ತಮ್ಮದೇ ಸಮುದಾಯದ ಅಪರಿಚಿತರು ಯಾಕಾಗಿ ಓಡಾಡುತ್ತಾರೆ. ಇವೆಲ್ಲವನ್ನು ಚರ್ಚೆ ಮಾಡಿ ಮದರಸಾ ಮತ್ತು ಅವರ ಶಿಕ್ಷಣ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಅಂತಹ ಯುವಕರಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸ ಮಾಡಬೇಕು ಎಂದರು.

ಜಿಲ್ಲಾಧಿಕಾರಿಗಳು ಕೂಡ ಅಲ್ಪಸಂಖ್ಯಾತ ಮುಖಂಡರ ಸಭೆ ಕರೆದು ಈ ವಿಚಾರಗಳ ಬಗ್ಗೆ ಮನದಟ್ಟು ಮಾಡಬೇಕು. ಭವಿಷ್ಯದಲ್ಲಿ ಇದೇ ರೀತಿ ಮುಂದುವರಿದರೆ ನೆಮ್ಮದಿ ಜೀವನ ಕಷ್ಟಕರವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡು ಎಲ್ಲಾ ಜಾತಿ ವರ್ಗದವರನ್ನು ಜತೆಯಾಗಿ ಕರೆದುಕೊಂಡು ಹೋಗಬೇಕೆಂಬ ಆಶಯ ಹೊಂದಿದ್ದಾರೆ. ಆದರೆ ಇಂತಹ ಘಟನೆಗಳಿಂದ ಸಮಾಜ, ಸರ್ಕಾರಗಳಿಗೂ ಕೆಟ್ಟ ಹೆಸರು ಬರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net