

ಅರವಿಂದ ಅಕ್ಲಾಪುರ ಶಿವಮೊಗ್ಗ
ರಾಜಕಾರಣವೇ ಹಾಗೆ. ಯಾವುದೋ ನಿರ್ಧಾರ ಇನ್ನೆಲ್ಲೋ ಫಲ ನೀಡುತ್ತದೆ. ಇಂದು ಮಾಡಿದ ಕೃಷಿಗೆ ಮುಂದೆಂದೋ ಫಸಲು ಸಿಗುತ್ತದೆ. ಅದರಲ್ಲೂ ಚುನಾವಣೆ ಹೊಸ್ತಿಲಲ್ಲಿ ಕೆಲ ರಾಜಕಾರಣಿಗಳು ಯಾವ ಕೆಲಸ ಮಾಡಿದರೂ ಅದು ಟಿಕೆಟ್‌ಗಾಗಿ ಹಾಗೂ ಮತ ಗಳಿಕೆಗಾಗಿ ಎಂಬುದು ಸ್ಪಷ್ಟ.
ಕಳೆದ ಕೆಲ ದಿನಗಳಿಂದ ಜಿಲ್ಲೆಯ ವಿವಿಧೆಡೆ ಕ್ರೀಡಾಕೂಟಗಳ ಆರ್ಭಟ. ಅದರಲ್ಲೂ ರೋಮಾಂಚನದ ಪ್ರತೀಕದಂತಿರುವ ಕ್ರಿಕೆಟ್, ವಾಲಿಬಾಲ್ ಹಾಗೂ ಕಬಡ್ಡಿ ಪಂದ್ಯಾವಳಿಗಳು ಪ್ರತಿ ದಿನ ಒಂದಿಲ್ಲೊಂದು ಕಡೆ ನಡೆಯುತ್ತಿವೆ. ನೂರಾರು ಮಂದಿ ಇದರಲ್ಲಿ ಭಾಗವಹಿಸುತ್ತಾರೆ. ಪ್ರೇಕ್ಷಕರ ಸಂಖ್ಯೆ ರಣಜಿ ಪಂದ್ಯಾವಳಿಯ ವೀಕ್ಷಕರ ಪ್ರಮಾಣವನ್ನೂ ಮೀರಿಸುತ್ತದೆ.
ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳೇ ಇಂತಹ ಪಂದ್ಯಾವಳಿಯ ಆಯೋಜಕರು. ಕೆಲವರು ನೇರವಾಗಿ ಕಾಣಿಸಿಕೊಂಡರೆ ಇನ್ನು ಕೆಲವರು ಇದಕ್ಕೆಲ್ಲ ಹಣಕಾಸಿನ ನೆರವು ನೀಡಿ, ಪಂದ್ಯಾವಳಿ ಉದ್ಘಾಟಿಸಿ, ಸನ್ಮಾನ ಮಾಡಿಸಿಕೊಳ್ಳುತ್ತಾರೆ. ಆದರೆ ಪಂದ್ಯಾವಳಿಯ ಫ್ಲೆಕ್ಸ್‌ಗಳಲ್ಲಿ ಮಾತ್ರ ಟಿಕೆಟ್ ಆಕಾಂಕ್ಷಿಗಳ ಫೋಟೋಗಳು ರಾರಾಜಿಸುತ್ತವೆ. ಅಲ್ಲಿಗೆ ಅವರ ಉದ್ಧೇಶ ಸ್ಪಷ್ಟವಾದಂತೆ.
ಲಕ್ಷ..ಲಕ್ಷ ರೂ. ಖರ್ಚು
ಕೆಲವೆಡೆ ಕ್ರಿಕೆಟ್ ಪಂದ್ಯಾವಳಿಯನ್ನು ಕೆಪಿಎಲ್(ಕರ್ನಾಟಕ ಪ್ರೀಮಿಯರ್ ಲೀಗ್) ಮೀರಿಸುವಂತೆ ಆಯೋಜಿಸಲಾಗುತ್ತಿದೆ. ಪಾನೀಯ, ಉಪಾಹಾರ, ಭೋಜನ, ಗೆದ್ದವರಿಗೆ ದೊಡ್ಡ ಮೊತ್ತದ ನಗದು ಬಹುಮಾನ, ನೆರಳಿಗೆ ಶಾಮಿಯಾನ, ಮೈಕ್ ವ್ಯವಸ್ಥೆ, ಕೆಲವೆಡೆ ಎಲ್‌ಇಡಿ ವ್ಯವಸ್ಥೆಯೂ ಇರುತ್ತದೆ.
ಪ್ರಥಮ ಬಹುಮಾನವಾಗಿ 50 ಸಾವಿರ ರೂ.ವರೆಗೆ ಹಣ ನೀಡಲಾಗುತ್ತದೆ. ವಿವಿಧ ವಿಭಾಗಗಳಲ್ಲೂ ಪ್ರತ್ಯೇಕ ಬಹುಮಾನ ನಿಗದಿಯಾಗಿರುತ್ತದೆ. ಯಾವುದೇ ಕ್ರೀಡಾಕೂಟವಾದರೂ ಕೇವಲ ನಗದು ಬಹುಮಾನಕ್ಕೆಂದು ಕನಿಷ್ಟ ಒಂದು ಲಕ್ಷ ರೂ.ವರೆಗೂ ಖರ್ಚು ಮಾಡಲಾಗುತ್ತದೆ.
ಟಿಕೆಟ್ ಆಕಾಂಕ್ಷಿಗಳು ದಿನಕ್ಕೊಂದು ಊರಿನಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ತಮ್ಮ ಕ್ರೀಡಾಪ್ರೇಮ ಮೆರೆಯುತ್ತಿದ್ದಾರೆ! ಕ್ರೀಡಾ ಸಚಿವರು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರೂ ಇದುವರೆಗೆ ಈ ಮಟ್ಟದಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹ ಸಿಕ್ಕಿರಲಿಲ್ಲ. ಆದರೆ ಟಿಕೆಟ್ ಆಕಾಂಕ್ಷಿಗಳು ಏಕಾಏಕಿ ಎಚ್ಚೆತ್ತುಕೊಂಡು ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕ್ರೀಡಾಕೂಟಗಳ ಮೊರೆ ಹೋಗಿರುವುದು ವಿಶೇಷ.
ಎಲ್ಲೆಲ್ಲಿ ಕ್ರೀಡಾಕೂಟ?
ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರದಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಗಳ ಆಯೋಜನೆಯಾಗುತ್ತಿದೆ. ಭದ್ರಾವತಿಯಲ್ಲಿ ಕಬಡ್ಡಿ ಟೂರ್ನ್‌ಮೆಂಟ್‌ಗಳು ನಡೆಯುತ್ತಿವೆ. ಉಳಿದಂತೆ ಸಾಗರ, ಹೊಸನಗರದಲ್ಲೂ ಕ್ರಿಕೆಟ್ ಮ್ಯಾಚ್‌ಗಳನ್ನು ಆಯೋಜಿಸಲಾಗುತ್ತಿದೆ. ಸೊರಬದಲ್ಲಿ ಹೋರಿ ಹಬ್ಬದ್ದೇ ಭರಾಟೆ.
ಹಾಲಿ, ಮಾಜಿಗಳು ದೂರ
ಮೊದಲ ಬಾರಿ ಶಾಸಕರಾಗುವ ತವಕದಲ್ಲಿರುವ ಟಿಕೆಟ್ ಆಕಾಂಕ್ಷಿಗಳು ಮಾತ್ರ ಇಂತಹ ಕ್ರೀಡಾಕೂಟಗಳ ಸಂಪೂರ್ಣ ಆಯೋಜನೆಗೆ ಹಣ ನೀಡುತ್ತಾರೆ. ಹಾಲಿ ಹಾಗೂ ಮಾಜಿ ಶಾಸಕರು ಸ್ವಲ್ಪ ಮಟ್ಟಿನ ದೇಣಿಗೆ ಕೊಟ್ಟು ದೂರವುಳಿಯುತ್ತಿದ್ದಾರೆ. ಕೆಲ ಟಿಕೆಟ್ ಆಕಾಂಕ್ಷಿಗಳಂತೂ ದಿನಕ್ಕೆ ಮೂರ‌್ನಾಲ್ಕು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಕೊಟ್ಟು ಜನಪ್ರಿಯತೆಯ ಗ್ರಾಫ್ ಏರಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಯಾವತ್ತೂ ರಾಜಕೀಯದಾಟ ಹೊರತುಪಡಿಸಿ ಬೇರೆ ಕ್ರೀಡೆಗಳ ಬಗ್ಗೆ ಯೋಚನೆಯನ್ನೇ ಮಾಡದವರು ಈಗ ಕ್ರೀಡೆಗಳ ಬಗ್ಗೆ ಭರ್ಜರಿ ಭಾಷಣ ಬಿಗಿಯುತ್ತಿರುವುದು ಜನರಿಗೆ ನಗು ತರಿಸುತ್ತಿದೆ.
ಯುವಕರು ಫುಲ್ ಖುಷ್
ಇನ್ನೊಂದೆಡೆ ನಿರಂತರವಾಗಿ ವಿವಿಧ ಪಂದ್ಯಾವಳಿಯನ್ನು ಭಾಗವಹಿಸುವ ಕ್ರೀಡಾತಂಡಗಳಿಗೆ ಈ ಬೆಳವಣಿಗೆ ಖುಷಿ ತಂದಿದೆ. ಹಿಂದೆಂದಿಗಿಂತಲೂ ಹೆಚ್ಚಿನ ಮೊತ್ತದ ನಗದು ಬಹುಮಾನ ನೀಡುತ್ತಿರುವುದು ಕ್ರೀಡಾಪಟುಗಳನ್ನು ಆಕರ್ಷಿಸುತ್ತಿದೆ. ಬಹುತೇಕ ಕಡೆಗಳಲ್ಲಿ ಹೊನಲು ಬೆಳಕಿನ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಕ್ರೀಡಾಪಟುಗಳ ದೈನಂದಿನ ಚಟುವಟಿಕೆಗೂ ತೊಂದರೆಯಾಗುವುದಿಲ್ಲ. ಒಟ್ಟಾರೆ ಚುನಾವಣೆ ವರ್ಷದಲ್ಲಿ ಹೆಚ್ಚು ಬಹುಮಾನ ಗೆಲ್ಲುವ ಅವಕಾಶವನ್ನು ಕ್ರೀಡಾಪಟುಗಳು ತಪ್ಪಿಸಿಕೊಳ್ಳುತ್ತಿಲ್ಲ.
ನಾಲ್ಕು ವರ್ಷದ ಬಳಿಕ ಪ್ರತ್ಯಕ್ಷ
ಶಿವಮೊಗ್ಗ ಗ್ರಾಮಾತರದಲ್ಲಿ ಕಳೆದ ಚುನಾವಣೆಗೆ ಇನ್ನಿಲ್ಲದ ಪ್ರಯತ್ನ ನಡೆಸಿ ವಿಫಲರಾದ ಬಳಿಕ ಜನರಿಂದ ದೂರಾಗಿದ್ದ ಕೆಲವರು ಈಗ ಅದ್ಧೂರಿ ಕ್ರಿಕೆಟ್ ಟೂರ್ನ್‌ಮೆಂಟ್ ಆಯೋಜಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳುವ ಯತ್ನ ಮಾಡುತ್ತಿದ್ದಾರೆ!
ಕ್ರೀಡಾಕೂಟಗಳ ಆಯೋಜನೆಗಾಗಿಯೇ ಟಿಕೆಟ್ ಆಕಾಂಕ್ಷಿಗಳ ಹೆಸರಿನಲ್ಲಿ ಅಭಿಮಾನ ಬಳಗ ಹುಟ್ಟಿಕೊಂಡಿದೆ. ಇನ್ನು ಕೆಲವೆಡೆ ಯುವಕರೇ ಆಯೋಜಿಸುವ ಕ್ರೀಡಾಕೂಟಗಳಿಗೆ ರಾಜಕಾರಣದಿಂದ ಹೆಚ್ಚಿನ ಪ್ರಮಾಣದ ದೇಣಿಗೆ ಹರಿದು ಬರುತ್ತಿದೆ. ಹೀಗಾಗಿ ಕ್ರೀಡಾ ಸಂಘಟಕರಿಗೂ ಇದು ಸುಗ್ಗಿ ಕಾಲ.
ಕಷ್ಟ-ಸುಖದಲ್ಲೂ ಭಾಗಿ
ಒಂದೆಡೆ ಕ್ರೀಡೆಗೆ ಬೆಂಬಲ ನೀಡುತ್ತಿರುವ ರಾಜಕಾರಣಿಗಳು ಇನ್ನೊಂದೆಡೆ ತಮ್ಮ ಕ್ಷೇತ್ರದಲ್ಲಿ ಯಾವುದೇ ಶುಭ ಕಾರ್ಯಕ್ರಮ ನಡೆದರೂ ಅಲ್ಲಿಗೆ ಹಾಜರಾಗುತ್ತಿದ್ದಾರೆ. ನೊಂದವರ ಮನೆಗೆ ತೆರಳಿ ಸಾಂತ್ವನ ಹೇಳುತ್ತಿದ್ದಾರೆ. ರಾಜಕಾರಣಿಗಳು ಭಾಗವಹಿಸದ ಮದುವೆ, ಗೃಹಪ್ರವೇಶ, ನಾಮಕರಣಗಳು ವಿರಳಾತಿವಿರಣ ಎನ್ನಬಹುದು. ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರುವವರೆಗೂ ಕ್ರೀಡಾಕೂಟಗಳು ನಿರಂತರವಾಗಿ ನಡೆಯುತ್ತವೆ. ಅದೇ ರೀತಿ ರಾಜಕಾರಣಿಗಳು ಭಾಗವಹಿಸುವ ಶುಭ ಸಮಾರಂಭಗಳಿಗೂ ಯಾವುದೇ ಆತಂಕವಿಲ್ಲ.
ಸರ್ಕಾರಿ ಶಾಲೆಗೆ ನೆರವು
ಕೆಲವು ರಾಜಕಾರಣಗಳಿಗೆ ಚುನಾವಣಾ ಕಾಲದಲ್ಲಿ ಸರ್ಕಾರಿ ಶಾಲೆಗಳ ಮೇಲೆ ಇನ್ನಿಲ್ಲದ ಪ್ರೀತಿ ಉಕ್ಕುತ್ತಿದೆ. ಇದೇ ಕಾರಣಕ್ಕೆ ಶಾಲೆಗಳ ಮೂಲ ಸೌಕರ್ಯ, ಸ್ಮಾರ್ಟ್ ಕ್ಲಾಸ್ ಹೀಗೆ ನಾನಾ ಬಗೆಯ ನೆರವು ನೀಡಲು ಮುಂದಾಗುತ್ತಿದ್ದಾರೆ. ಯಾವ ಶಾಲೆಗೆ ದೇಣಿಗೆ ನೀಡಿದರೆ ಏನು ಪ್ರಯೋಜನ ಎಂಬ ಸ್ಥಳೀಯ ಮುಖಂಡರ ಆಂತರಿಕ ವರದಿ ಗಮನಿಸಿ ರಾಜಕಾರಣಿಗಳು ದೇಣಿಗೆ ನೀಡುತ್ತಿದ್ದಾರೆ. ಚುನಾವಣಾ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೂ ಶುಕ್ರದೆಸೆ ಬಂದಂತಾಗಿದೆ.