

ಶಿವಮೊಗ್ಗ: ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪ ಪತ್ತೆಯಾದ ಅನುಮಾನಾಸ್ಪದ ಬಾಕ್ಸ್ಗಳನ್ನು ತೆರೆದು ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ. ಈ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ವಾಟ್ಸಪ್ ಮೂಲಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
‘ಅನುಮಾನಾಸ್ಪದ ಬಾಕ್ಸ್ಗಳ ಕುರಿತು ತಜ್ಞರ ತಂಡ ಪರಿಶೀಲಿಸಿದೆ. ಅವುಗಳನ್ನು ತೆರೆದಿದ್ದು ಕೆಲವು ರದ್ದಿ ವಸ್ತುಗಳು ಪತ್ತೆಯಾಗಿವೆ. ಬಾಕ್ಸ್ಗಳಲ್ಲಿ ಯಾವುದೆ ಸ್ಪೋಟಕ ವಸ್ತು ಇರಲಿಲ್ಲ. ಅವುಗಳನ್ನು ಸ್ಥಳದಿಂದ ರವಾನಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅದು ಉಪ್ಪು ಎಂದು ತಿಳಿದು ಬಂದಿದೆ’ ಎಂದು ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದ ಸಮೀಪ ಪತ್ತೆಯಾದ ಅನುಮಾನಾಸ್ಪದ ಬಾಕ್ಸ್ಗಳನ್ನು ತೆರೆಯಲು ಬಾಂಬ್ ನಿಷ್ಕ್ರಿಯ ದಳ ಸ್ಪೋಟಕ ಬಳಕೆ ಮಾಡಿತು. ಬಾಕ್ಸ್ಗಳನ್ನು ತೆರೆಯಲು ಪ್ರತ್ಯೇಕವಾಗಿ ಸ್ಪೋಟ ನಡೆಸಲಾಯಿತು. ಬಾಕ್ಸ್ಗಳ ಕುರಿತು ತೀವ್ರ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿತ್ತು. ಹಲವು ಬಾರಿ ಪ್ರಯತ್ನಿಸಿದರು ಟ್ರಂಕ್ ತೆರೆಯಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಸ್ಪೋಟ ನಡೆಸಲು ಯೋಜಿಸಲಾಯಿತು.
ಮತ್ತೊಂದು ಟ್ರಂಕ್ನಲ್ಲಿ ಏನಿತ್ತು?
ಸ್ಪೋಟಕ ಅಳವಡಿಸಿ ರಾತ್ರಿ 2.40ಕ್ಕೆ ಮೊದಲ ಬಾರಿ ಸ್ಪೋಟಿಸಿ ಒಂದು ಟ್ರಂಕ್ ತೆರೆಯಲಾಯಿತು. ಅದರಲ್ಲಿ ಕೆಲವು ನ್ಯೂಸ್ ಪೇಪರ್ಗಳು, ಬಿಳಿ ಬಣ್ಣದ ಪೌಡರ್ ಇರುವ ಪ್ಯಾಕೆಟ್ ದೊರೆತಿದೆ. ರಾತ್ರಿ 3.24ಕ್ಕೆ ಎರಡನೇ ಬಾರಿ ಸ್ಪೋಟಿಸಿ ಮತ್ತೊಂದು ಟ್ರಂಕ್ ತೆಗೆಯಲಾಯಿತು. ಅದರಲ್ಲಿಯು ನ್ಯೂಸ್ ಪೇಪರ್ ಮತ್ತು ಬಿಳಿ ಬಣ್ಣದ ಪೌಡರ್ ದೊರೆತಿದೆ. ಟ್ರಂಕ್ ಮತ್ತು ಬಿಳಿ ಬಣ್ಣದ ಪೌಡರ್ ಇರುವ ಚೀಲಗಳನ್ನು ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದಿದೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.