

ಶಿವಮೊಗ್ಗ: ಶಿವಮೊಗ್ಗ ರಂಗಾಯಣವು ಭಾರತೀಯ ಸಂವಿಧಾನವನ್ನು ಸಮಾಜದ ವಿವಿಧ ವರ್ಗಗಳಿಗೆ ಸುಲಭವಾಗಿ ಅರ್ಥೈಸಲು ಸಹಾಯವಾಗುವಂತೆ ವಿ ದ ಪೀಪಲ್ ಆಫ್ ಇಂಡಿಯಾ ನಾಟಕ ಸಿದ್ಧಪಡಿಸಿದ್ದು, ಜ.26ರಂದು ಸಂಜೆ 6.30ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ ನಿರ್ದೇಶಕ ಡಾ. ಸಂದೇಶ ಜವಳಿ ತಿಳಿಸಿದರು.
ರಾಜ್ಯದ ಖ್ಯಾತ ನಾಟಕಕಾರ ಡಾ. ರಾಜಪ್ಪ ದಳವಾಯಿ ಅವರು ನಾಟಕ ರಚಿಸಿದ್ದು, ಉದಯೋನ್ಮುಖ ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್ ನಿರ್ದೇಶಿಸಿದ್ದಾರೆ. 1.25 ಗಂಟೆ ನಾಟಕದಲ್ಲಿ 20 ಕಲಾವಿದರು ಅಭಿನಯಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಆರು ತಿಂಗಳಿಂದ ಈ ನಾಟಕ ರಚನೆಯ ಬಗ್ಗೆ ಅನೇಕ ಕಮ್ಮಟ, ವಿಶೇಷ ಉಪನ್ಯಾಸ-ವಿಚಾರ ಸಂಕಿರಣಗಳನ್ನು ಆಯೋಜಿಸಿ ವಿಶಿಷ್ಟವಾಗಿ ಈ ನಾಟಕವನ್ನು ಕಟ್ಟಲಾಗಿದೆ. ಸಂವಿಧಾನದ ಆಶಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಮಹಿಳಾ ಹಕ್ಕುಗಳು, ಸಂವಿಧಾನ ಕರಡು ರಚನಾ ಸಮಿತಿಯಲ್ಲಿನ ಚರ್ಚೆಗಳು, ಸಂವಿಧಾನದಲ್ಲಿ ಮಹಿಳೆಯರ ಆಶಯಗಳು, ಇತ್ಯಾದಿ ವಿಷಯಗಳನ್ನು ಬಳಸಿ ಈ ನಾಟಕವನ್ನು ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ನಾಟಕ ಪ್ರದರ್ಶನವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎ. ಮುಸ್ತಫಾ ಹುಸೇನ್ ಉದ್ಘಾಟಿಸುವರು. ಡಿಸಿ ಡಾ. ಆರ್.ಸೆಲ್ವಮಣಿ, ಮೇಯರ್ ಸುನಿತಾ ಅಣ್ಣಪ್ಪ, ರಾಷ್ಟ್ರೀಯ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಜಗದೀಶ್, ನ್ಯಾಯವಾದಿ ಇ.ಪ್ರೇಮಾ, ರಂಗಸಮಾಜದ ಸದಸ್ಯ ಆರ್.ಎಸ್.ಹಾಲಸ್ವಾಮಿ ಮುಖ್ಯ ಅತಿಥಿಗಳಾಗಿರುವರು ಎಂದರು.
ಕರೊನಾ ಹಿನ್ನಲೆಯಲ್ಲಿ ಕೇವಲ 250 ಜನರಿಗೆ ಮಾತ್ರ ಪ್ರವೇಶ ಕಲ್ಪಿಸಿದ್ದು ಪ್ರವೇಶ ಉಚಿತವಾಗಿದೆ. ಸರ್ಕಾರದ ನಿಯಾಮವಳಿಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ ಎಂದ ಅವರು, ಈ ನಾಟಕದ ಪ್ರದರ್ಶನ ಜ.27 ಮತ್ತು 28ರಂದೂ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಸಂಜೆ 6.30ಕ್ಕೆ ನಡೆಯಲಿದೆ ಎಂದರು. ರಂಗಾಯಣದ ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ, ನಾಟಕದ ನಿರ್ದೇಶಕ ಕೆ.ಪಿ.ಲಕ್ಷ್ಮಣ್, ಆರ್.ಎಸ್.ಹಾಲಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.