

ಶಿವಮೊಗ್ಗ: ರಾಜಕಾರಣಿಗಳ ೧೯ ಸಿಡಿಗಳು ನನ್ನ ಬಳಿ ಇವೆ ಎಂದು ಎಲ್ಲಿಯೂ ಹೇಳಿಲ್ಲ. ಅದೆಲ್ಲ ಮಾಧ್ಯಮಗಳ ಸೃಷ್ಟಿ. ನಾನೇ ಹೇಳಿದ್ದೇನೆ ಎನ್ನುವುದಕ್ಕೆ ಪುರಾವೆಗಳೇನಿವೆ ಎಂದು ಸಾಮಾಜಿಕ ಕಾರ್ಯಕರ್ತ, ವಿಜಯನಗರದ ರಾಜಶೇಖರ್ ಮುಲಾಲಿ ಪ್ರಶ್ನಿಸಿದರು.
ನಾನು ಯಾವುದೇ ಆಸೆ, ಆಮೀಷಗಳಿಗೆ ಬಲಿಯಾಗಲ್ಲ. ಯಾವುದೇ ಹೆದರಿಕೆ, ಬೆದರಿಕೆಗಳಿಗೂ ಜಗ್ಗಲ್ಲ. ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿರುವುದು ನಿಜ. ಅದರ ಹಿಂದೆ ಯಾರಿದ್ದಾರೆ ಎಂಬುದು ತನಿಖೆಯಿಂದಲೇ ತಿಳಿದುಬರಲಿದೆ ಎಂದರು.
ಈ ಪ್ರಕರಣದಲ್ಲಿ ಸಂತ್ರಸ್ತೆಯಾಗಲಿ, ಅವರ ಕುಟುಂಬದವರು ದೂರು ನೀಡಲ್ಲ ಎಂದ ಅವರು, ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಬೆಂಗಳೂರಿನ ಕಬ್ಬಾನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ವಾಟ್ಸ್ ಆ್ಯಪ್ ಮೂಲಕ ನೋಟಿಸ್ ಕಳುಹಿಸಿದ್ದಾರೆ. ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಇದನ್ನು ಅವರಿಗೂ ತಿಳಿಸಿದ್ದು ಮುಂದಿನ ದಿನಗಳಲ್ಲಿ ಹಾಜರಾಗುತ್ತೇನೆ ಎಂದರು.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಕೆಲ ಶಾಸಕರು ಮುಗ್ಧರಿದ್ದು ಅಧಿವೇಶನಕ್ಕೆ ಬೆಳಗಾವಿಗೆ ಬಂದ ವೇಳೆ ಸಮಯ ಸಿಕ್ಕಾಗ ಗೋವಾಕ್ಕೆ ತೆರಳಲಿದ್ದು ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಹನಿ ಟ್ರ್ಯಾಪ್ ಗೆ ಒಳಗಾಗುವ ಸಾಧ್ಯತೆ ಇದೆ ಎಂದರು.