ಗಲಭೆಗೆ ಹಿಂದು ಸಂಘಟನೆಗಳು ಕಾರಣವಲ್ಲ:ಮಹಾಬಲೇಶ್ವರ

SHIVAMOGGA QUARREL HINDU NOT REASON MAHABALESHWAR
ಕೊಪ್ಪಳ ತಾಲೂಕಿನ ಭಾಗ್ಯನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶೌರ್ಯ ಜಾಗರಣ ರಥ ಯಾತ್ರೆ ಧಾರ್ಮಿಕ ಸಭೆಯಲ್ಲಿ ಕರ ಸೇವಕರನ್ನು ಸನ್ಮಾನಿಸಲಾಯಿತು. ವಿಎಚ್‌ಪಿ ಕ್ಷೇತ್ರ ಸತ್ಸಂಗ ಪ್ರಮುಖ ಮಹಾಬಲೇಶ್ವರ, ಜಿಲ್ಲಾ ಕಾರ್ಯದರ್ಶಿ ವಿನಯ್ ಪಾಟೀಲ್, ರಾಘವೇಂದ್ರ ಪಾನಘಂಟಿ, ರಥ ಪ್ರಮುಖ ಎಚ್.ವಿ.ಪವಾರ್, ದೊಡ್ಡಬಸಯ್ಯ,ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ ಇದ್ದರು.
Published on

ಕೊಪ್ಪಳ: ಶಿವಮೊಗ್ಗ ಗಲಭೆಗೆ ಹಿಂದುಪರ ಸಂಘಟನೆಗಳು ಕಾರಣವೆಂಬಂತೆ ಬಿಂಬಿಸಲಾಗುತ್ತಿದೆ.

ಇದರಲ್ಲಿ ಸಂಘ ಪರಿವಾರ, ಹಿಂದುಪರ ಸಂಘಟನೆಗಳ ಪಾತ್ರವಿಲ್ಲವೆಂದು ವಿಶ್ವ ಹಿಂದು ಪರಿಷತ್ ಕ್ಷೇತ್ರ ಸತ್ಸಂಗ ಪ್ರಮುಖ ಮಹಾಬಲೇಶ್ವರ ಹೇಳಿದರು.

ತಾಲೂಕಿನ ಭಾಗ್ಯನಗರ ಪಟ್ಟಣದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕರ್ನಾಟಕ ಉತ್ತರ ಪ್ರಾಂತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಶೌರ್ಯ ಜಾಗರಣ ರಥ ಯಾತ್ರೆ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ವಿಎಚ್‌ಪಿ ಸ್ಥಾಪನೆಯಾಗಿ 60 ವರ್ಷ ಗತಿಸಿದೆ. ಅದರ ನೆನಪಿಗಾಗಿ ಯಾತ್ರೆ ಹಮ್ಮಿಕೊಂಡು ಹಿಂದು ಜಾಗೃತಿ ಮೂಡಿಸಲಾಗುತ್ತಿದೆ. 2047ರೊಳಗೆ ಭಾರತ ವಿಶ್ವಗುರುವಾಗಲಿದೆ. ಯುವಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು.

ದತ್ತ ಪೀಠ, ಅಯೋಧ್ಯೆ ರಾಮ ಮಂದಿರ, ಶಬರಿಮಲೆ, ಅಮರನಾಥ ಯಾತ್ರೆ ಮತ್ತು ದೇಶದ ಪ್ರಮುಖ ಹಿಂದು ದೇವಸ್ಥಾನಗಳ ಹೋರಾಟಗಳಲ್ಲಿ ವಿಶ್ವ ಹಿಂದು ಪರಿಷತ್ ಮಹತ್ವದ ಪಾತ್ರ ವಹಿಸಿದೆ. ಹಿಂದುಗಳಿಗೆ ಇರುವ ಏಕೈಕ ರಾಷ್ಟ್ರ ಭಾರತ. ಅದನ್ನು ರಕ್ಷಿಸಬೇಕಿದೆ ಎಂದರು.

ಸಂಘ ಪರಿವಾರದ ವಸಂತ ಪೂಜಾರ ಮಾತನಾಡಿ, ಅಯೋಧ್ಯೆ ಹೋರಾಟ ಅತ್ಯಂತ ದೊಡ್ಡ ಹೋರಾಟ. ಅಂದಿನ ಸರ್ಕಾರ ಮಸೀದಿಗೆ ಬೃಹತ್ ಭದ್ರತೆ ಒದಗಿಸಿದರೂ, ಅದನ್ನು ಬೇಧಿಸಿ ಗುಮ್ಮಟ ಒಡೆಯಲಾಯಿತು.

500 ವರ್ಷದ ಹೋರಾಟದಲ್ಲಿ ಲಕ್ಷಾಂತರ ಜನ ಬಲಿದಾನ ಮಾಡಿದ್ದಾರೆ. ಕೊಪ್ಪಳದಿಂದ 2ನೇ ಬಾರಿಗೆ 21 ಕರ ಸೇವಕರು ಭಾಗಿಯಾಗಿದ್ದರು ಎಂದು ನೆನಪಿಸಿಕೊಂಡರು.

ಕರಸೇವಕರಾದ ಶಂಕರ ಜಾಧವ, ವಸಂತ್ ಪೂಜಾರ, ಕೃಷ್ಣ ಸೊರಟೂರು, ನರಸಿಂಹ ಉತ್ತಾರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕು ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಶೌರ್ಯ ಜಾಗರಣ ರಥ ಯಾತ್ರೆ ನಡೆಯಿತು.

ಯಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ರಥ ಪ್ರಮುಖ ಎಚ್.ವಿ.ಪವಾರ್, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ವಿನಯ್ ಪಾಟೀಲ್, ಬಜರಂಗದಳ ಜಿಲ್ಲಾ ಸಂಯೋಜಕ ದೊಡ್ಡಬಸಯ್ಯ,

ಉಮೇಶ ಕೊರಡೇಕರ, ಸಂಸದ ಸಂಗಣ್ಣ ಕರಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಪಪಂ ಸದಸ್ಯ ವಾಸು ಮೇಘರಾಜ, ಪ್ರಮುಖರಾದ ಗಿರೀಶ ಪಾನಘಂಟಿ, ಕೊಟ್ರೇಶ ಕವಲೂರು, ರುಕ್ಮಣ್ಣ ಶ್ಯಾವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net