19 ಲಕ್ಷ ರೂ. ಫ್ರೀಸ್ ಮಾಡಿ ಹಿಂದಿರುಗಿಸಿದ ಶಿವಮೊಗ್ಗ ಪೊಲೀಸರು !

Digital Arrest
Published on

ಶಿವಮೊಗ್ಗ: ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಬೆದರಿಸಿ ಗೋಪಾಳದ ನಿವೃತ್ತ ಉದ್ಯೋಗಿಯಿಂದ ಸುಲಿಗೆ ಮಾಡಿದ್ದ 19 ಲಕ್ಷ ರೂ. ಅನ್ನು ಸೈಬರ್ ಠಾಣೆ ಪೊಲೀಸರು ಫ್ರೀಸ್ ಮಾಡಿ ವಾರಸುದಾರರಿಗೆ ಒಂದೇ ತಿಂಗಳ ಅಂತರದಲ್ಲಿ ಹಿಂದಿರುಗಿಸಿದ್ದಾರೆ.

ಶಿವಮೊಗ್ಗ ಗೋಪಾಳದ 51 ವರ್ಷದ ನಿವೃತ್ತ ಉದ್ಯೋಗಿ ಸೈಬರ್ ವಂಚಕರ ಬಲೆಗೆ ಬಿದ್ದಿದ್ದರು. ಸೆ.17ರಂದು ಕರೆ ಮಾಡಿ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ 19 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು. ವಂಚನೆಗೆ ಒಳಗಾಗಿರುವುದು ಅರಿವಾಗುತ್ತಿದ್ದಂತೆ ಸೆ.23ರಂದು ಸೈಬರ್ ಠಾಣೆಗೆ ನಿವೃತ್ತ ಉದ್ಯೋಗಿ ದೂರು ನೀಡಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಡಿವೈಎಸ್‌ಪಿ ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ ಸೈಬರ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ ನೇತೃತ್ವದ ಸಿಬ್ಬಂದಿಗಳನ್ನೊಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ಕೂಡಲೇ ಕಾರ್ಯಪ್ರೌವೃತ್ತರಾಗಿ ಪ್ರಕರಣದಲ್ಲಿ ನಿವೃತ್ತ ಉದ್ಯೋಗಿಗೆ ವಂಚಿಸಿದ 19 ಲಕ್ಷ ರೂ. ಅನ್ನು ಫ್ರೀಸ್ ಮಾಡಿಸಿ, ನಂತರ ಆ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಿದ್ದಾರೆ.

ಏನಿದು ಪ್ರಕರಣ ?

ಸೆ.17ರಂದು ಬೆಳಗ್ಗೆ ಅಪರಿಚಿತ ಮೊಬೈಲ್ ನಂಬರ್‌ನಿಂದ ನಿವೃತ್ತ ಉದ್ಯೋಗಿಗೆ ದೂರವಾಣಿ ಕರೆ ಮಾಡಿದ್ದ ವಂಚಕ, ಮುಂಬೈ ಸಿಟಿಯ ಕೊಲಬಾ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟೆರ್ ಶಿಖಾವತ್ ಎಂದು ಪರಿಚಯಿಸಿಕೊಂಡಿದ್ದ. ವಂಚನೆ ಪ್ರಕರಣದಲ್ಲಿ ನಿಮ್ಮ ಹೆಸರಿದ್ದು, ಸ್ಕಾೃಮರ್ ಅರುಣ್ ಗೋಯೆಲ್ ಎಂಬುವರಿಗೆ ನೀವು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದೀರಿ. ಹಾಗಾಗಿ ಕೂಡಲೆ ಬಂಧನ ಮಾಡಲಾಗುತ್ತದೆ ಎಂದು ಬೆದರಿಸಿದ್ದ. ನೀವು ಮುಂಬೈಗೆ ಬರಲು ಸಾಧ್ಯವಾಗದಿದ್ದರೆ ವಿಡಿಯೋ ಕಾಲ್ ಮೂಲಕ ಕೋರ್ಟ್‌ಗೆ ಹಾಜರುಪಡಿಸಿ ಜಾಮೀನು ಕೊಡಿಸುವುದಾಗಿ ನಂಬಿಸಿದ್ದ. ತದನಂತರ 19 ಲಕ್ಷ ರೂ. ಕೊಡಬೇಕೆಂದು ಬೆದರಿಸಿದ್ದು, ಆತಂಕದಲ್ಲಿ ನಿವೃತ್ತ ಉದ್ಯೋಗಿ ಬ್ಯಾಂಕ್‌ನ ಲಾಕರ್‌ನಲ್ಲಿದ್ದ ಚಿನ್ನದ ಮೇಲೆ ಸಾಲ ಪಡೆದು ವಂಚಕರು ಹೇಳಿದ ಖಾತೆಗೆ ಹಣ ವರ್ಗಾಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net