ಸಂಸ್ಕೃತ ಬೆಳವಣಿಗೆಗೆ ಮಾದರಿ ಶಿವಮೊಗ್ಗ

20 smg samskruta logo
Published on

ಅರವಿಂದ ಅಕ್ಲಾಪುರ ಶಿವಮೊಗ್ಗ
ಸಂಸ್ಕೃತ ಭಾಷೆ ಕಬ್ಬಿಣದ ಕಡಲೆ ಎಂಬ ಮನಸ್ಥಿತಿ ಈಗಿಲ್ಲ. ದೇವಭಾಷೆ ಈಗ ಜನಸಾಮಾನ್ಯರ ಭಾಷೆಯಾಗುತ್ತಿದೆ. ಪ್ರೌಢಶಾಲೆ, ಕಾಲೇಜುಗಳಲ್ಲಿ ಸಂಸ್ಕೃತವನ್ನು ಆಯ್ಕೆ ಮಾಡಿಕೊಳ್ಳುವ ಮನಸ್ಥಿತಿ ಬೆಳೆಯುತ್ತಿದೆ. ಇದರ ಹಿಂದೆ ಹಲವು ಸಂಘಟನೆಗಳ ದಶಕಗಳ ಶ್ರಮವಿದೆ. ಇಂತಹ ಸಂಘಟನೆಗಳ ಪೈಕಿ ಮುನ್ನೆಲೆಯಲ್ಲಿ ಕೇಳಿ ಬರುವುದು ಸಂಸ್ಕೃತ ಭಾರತೀ.
ಇದರ ಘಟಕವಾಗಿ ಶಿವಮೊಗ್ಗದಲ್ಲಿ ಸುಮಾರು 35 ವರ್ಷಗಳ ಹಿಂದೆ ಆರಂಭವಾದ ಸಂಸ್ಕೃತ ಭಾರತೀ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ನಿರಂತರ ಚಟುವಟಿಕೆ ಮೂಲಕ ಗೃಹಿಣಿಯರಲ್ಲಿ, ಮಕ್ಕಳಲ್ಲಿ ಸಂಸ್ಕೃತದೆಡೆಗೆ ಆಸಕ್ತಿ ಬೆಳೆಸುತ್ತಿದೆ. ಇದುವರೆಗೆ ೫೦೦ಕ್ಕೂ ಹೆಚ್ಚು ಸಂಸ್ಕೃತ ಕಲಿಕಾ ಶಿಬಿರಗಳ ಮೂಲಕ ಸಾವಿರಾರು ಮಂದಿಗೆ ಸಂಸ್ಕೃತ ಕಲಿಸಲಾಗಿದೆ.
ಜಿಲ್ಲೆಯನ್ನು ಕೇಂದ್ರೀಕೃತವಾಗಿಸಿಕೊAಡು ಕೆಲಸ ಮಾಡುತ್ತಿರುವ ಈ ಸಂಘಟನೆಗೆ ಹೆಚ್ಚು ಶಕ್ತಿಯಿರುವುದು ಶಿವಮೊಗ್ಗ ನಗರದಲ್ಲಿ. ಗೃಹಿಣಿಯರಿಗೆ ಸಂಸ್ಕೃತ ಕಲಿಸಿ, ಖಾಸಗಿ ಪ್ರಾಥಮಿಕ ಶಾಲೆಗಳಲ್ಲಿ ಅವರು ಶಿಕ್ಷಕಕಿಯರಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಲಾಗುತ್ತಿದೆ. ಇದರಿಂದ ಶಾಲೆಯಲ್ಲಿ ಸಂಸ್ಕೃತವೂ ಬೆಳೆಯುತ್ತದೆ. ಗೃಹಿಣಿಯೊಬ್ಬರಿಗೆ ಜೀವನೋಪಾಯದ ಮಾರ್ಗವೂ ಲಭಿಸಿದಂತಾಗುತ್ತಿದೆ.
ಸAಸ್ಕೃತ ಕಲಿಯುವ ಮಕ್ಕಳಿಗೆ ಸಾಹಸ ಕ್ರೀಡೆಗಳು, ಹಿಮಾಲಯದ ಚಾರಣ, ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಅಂಚೆ ಮೂಲಕವೂ ಸಂಸ್ಕೃತ ಶಿಕ್ಷಣ ನೀಡಲಾಗುತ್ತಿದೆ. ಶಿವಮೊಗ್ಗದಲ್ಲಿ ನಡೆಯುವ ಸಂಸ್ಕೃತ ಸಂಭಾಷಣಾ ಶಿಬಿರಗಳು ಇಂದು ಮನೆಮಾತಾಗಿವೆ.

ಹಲವು ಮೊದಲುಗಳು
ಸಂಸ್ಕೃತ ದಿನದ ಅಂಗವಾಗಿ ಏಳು ದಿನ ವಿವಿಧ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು ಮುಂತಾದ ಕಾರ್ಯಕ್ರಮಗಳನ್ನು ದೇಶದಲ್ಲಿ ಮೊದಲ ಬಾರಿ 1999ರಲ್ಲಿ ಆಯೋಜಿಸಿದ್ದು ಶಿವಮೊಗ್ಗದಲ್ಲಿ. ಇದರ ಮಾಹಿತಿ ಪಡೆದ ಕೇಂದ್ರ ಸರ್ಕಾರ ಸಂಸ್ಕೃತ ಸಪ್ತಾಹವನ್ನು ಕಡ್ಡಾಯಗೊಳಿಸಿತು. ಈಗ ಹಲವು ವರ್ಷಗಳಿಂದ ಸಂಸ್ಕೃತ ಮಾಸೋತ್ಸವವನ್ನೂ ಆಚರಿಸಲಾಗುತ್ತಿದೆ. ಶಿವಮೊಗ್ಗದ ವಿವಿಧೆಡೆ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿದಿನ ಕಾರ್ಯಕ್ರಮ ನಡೆಸಲಾಗುತ್ತದೆ. ಮಹಾಕಾವ್ಯಗಳು, ವೇದ, ಪ್ರಾಚೀನ ವಿಜ್ಞಾನ, ಆರೋಗ್ಯ, ಯೋಗ, ಸಂಸ್ಕೃತ ಗೀತೆಗಳ ಗಾಯನ ಹೀಗೆ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ವಿಶೇಷ.
ರಾಜ್ಯಮಟ್ಟದ ಸ್ಪರ್ಧೆ
ಕಳೆದ 33 ವರ್ಷಗಳಿಂದ ರಾಜ್ಯ ಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆ ಆಯೋಜಿಸುತ್ತಿರುವ ಏಕೈಕ ಸಂಸ್ಕೃತ ಭಾರತೀ ಘಟಕ ಶಿವಮೊಗ್ಗದ್ದು. ಇಲ್ಲಿನ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದವರು ಇಂದು ಅನೇಕ ಕ್ಷೇತ್ರಗಳಲ್ಲಿ ಗಮನಸೆಳೆದಿದ್ದಾರೆ. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದರು ಎಂಬುದು ವಿಶೇಷ. ಮಕ್ಕಳಿಗೆ ಸಂಸ್ಕೃತ ಶ್ಲೋಕ ಕಂಠಪಾಠ ಸ್ಪರ್ಧೆ, ಮಾತೆಯರಿಗೆ ಮೊಸರು ಕಡಿಯುವುದು, ಪುರುಷರಿಗೆ ಶಂಖನಾದ ಸ್ಪರ್ಧೆ ಹೀಗೆ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಶಿವಮೊಗ್ಗ ಸದಾ ಮುಂದಿದೆ.
ಸAಸ್ಕೃತ ಭವನ ಕೇಂದ್ರ ಬಿಂದು
ಶಿವಮೊಗ್ಗದ ಬಿಬಿ ರಸ್ತೆಯಲ್ಲಿರುವ ಸಂಸ್ಕೃತ ಭವನ ಜಿಲ್ಲೆಯ ಸಂಸ್ಕೃತ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ. ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಸಂಸ್ಕೃತ ಭವನ ಇರುವ ಮತ್ತೊಂದು ನಗರ ಎಂದರೆ ಅದು ಶಿವಮೊಗ್ಗ ಮಾತ್ರ. ಸಂಸ್ಕೃತ ಚಟುವಟಿಕೆಗೆ ಆಗಮಿಸುವ ಪರ ಊರಿನವರಿಗೆ ಇಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸುಸಜ್ಜಿತವಾದ ಗ್ರಂಥಾಲಯವೂ ಇಲ್ಲಿದೆ. ಪ್ರಸ್ತುತ ಸಂಸ್ಕೃತ ಭಾರತೀ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಜಿಲ್ಲಾಧ್ಯಕ್ಷರಾಗಿ ಎನ್.ವಿ.ಶಂಕರನಾರಾಯಣ, ಸಂಚಾಲಕರಾಗಿ ಟಿ.ವಿ.ನರಸಿಂಹಮೂರ್ತಿ ಸಂಸ್ಕೃತ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಇವರೊಂದಿಗೆ ಒಂದೊಳ್ಳೆ ತಂಡವಿದೆ ಎಂಬುದು ಸಂತಸದ ಸಂಗತಿ.

ಯಾವುದೇ ಪ್ರತಿ-Àಲಾಪೇಕ್ಷೆಯಿಲ್ಲದೇ ಸಂಸ್ಕೃತಕ್ಕಾಗಿ ಕೆಲಸ ಮಾಡುವ ಸುಸಂಸ್ಕೃತ ಮನಸ್ಸುಗಳು ನಮ್ಮ ಸಂಘಟನೆಗೆ ಸಂಪೂರ್ಣ ಸಹಕಾರ ನೀಡುತ್ತಿವೆ. ಸಂಸ್ಕೃತವನ್ನು ಜನರ ಬಳಿ ಕೊಂಡೊಯ್ಯುವ, ಅದರ ಮಹತ್ವ ವಿವರಿಸುವ, ಮಕ್ಕಳಲ್ಲಿ ಆಸಕ್ತಿ ಮೂಡಿಸುವ ನಮ್ಮ ಕಾರ್ಯಯೋಜನೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ.|ಅ.ನಾ.ವಿಜಯೇಂದ್ರಪ್ರಧಾನ ಕಾರ್ಯದರ್ಶಿ, ಸಂಸ್ಕೃತ ಭಾರತೀ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net