ಕಾರದಪುಡಿ ಎರಚಿ ಹುರುಳಿ ಗ್ರಾಪಂ ಅಧ್ಯಕ್ಷೆ, ಬೆಂಬಲಿಗರ ಮೇಲೆ ಹಲ್ಲೆ

IMG-20210308-WA0031
Published on

ಶಿವಮೊಗ್ಗ: ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಸೊರಬ ತಾಲೂಕಿನ ಹುರುಳಿ ಗ್ರಾಪಂ ಅಧ್ಯಕ್ಷೆ ಅನುಸೂಯಾ ಮನೆಗೆ ನುಗ್ಗಿದ ಗುಂಪೊಂದು ಕಾರದಪುಡಿ ಎರಚಿ ಹಲ್ಲೆ ನಡೆಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಆನವಟ್ಟಿ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.
ಗ್ರಾಪಂ ಅಧ್ಯಕ್ಷೆ ಅನುಸೂಯಾ, ಅವರ ಪತಿ ಶಿವಕುಮಾರ್ ಮತ್ತು ಬೆಂಬಲಿಗರು ಸೇರಿ 13 ಜನ ಗಾಯಗೊಂಡಿದ್ದಾರೆ. ಇದೇ ವೇಳೆ ಹಿರೇಚೌಟಿ ಗ್ರಾಮದ ರಾಜುಗೌಡ ಮತ್ತವರ ಬೆಂಬಲಿಗರೂ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಿರೇಚೌಟಿಯ ಶಿವಕುಮಾರ್ ಮತ್ತು ರಾಜುಗೌಡನ ನಡುವೆ ಹಲವು ದಿನಗಳಿಂದ ರಾಜಕೀಯ ವೈಷಮ್ಯ ಮುಂದುವರಿದಿತ್ತು. ಗ್ರಾಪಂ ಚುನಾವಣೆ ವೇಳೆಯೂ ಜಗಳ ನಡೆದಿದ್ದವು. ಆದರೆ ಇದೀಗ ಗ್ರಾಮದ ಕೆರೆಯಲ್ಲಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವಾಗ ಟ್ರಾೃಕ್ಟರ್‌ಗೆ ಮಣ್ಣು ತುಂಬುವ ವಿಚಾರದಲ್ಲಿ ಮತ್ತೊಮ್ಮೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ.
ಇದೇ ಮನಸ್ತಾಪದಿಂದ ಭಾನುವಾರ ರಾತ್ರಿ ರಾಜುಗೌಡ ಮತ್ತು ಅವರ ಬೆಂಬಲಿಗರು ಹುರುಳಿ ಗ್ರಾಪಂ ಅಧ್ಯಕ್ಷೆಯೂ ಆದ ಹಿರೇಚೌಟಿ ನಿವಾಸಕ್ಕೆ ನುಗ್ಗಿ ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಜುಗೌಡ ಕಡೆಯವರು ಕಾರದಪುಡಿ ಎರಚಿ, ದೊಣ್ಣೆ ಮತ್ತು ರಾಡುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಪರಸ್ಪರ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಪ್ರಕರಣ ಆನವಟ್ಟಿ ಠಾಣೆ ಮೆಟ್ಟಿಲೇರಿದ್ದು, ಎರಡೂ ಕಡೆಯವರು ದೂರು-ಪ್ರತಿದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net