

ಶಿವಮೊಗ್ಗ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಸೆ.26ರಿಂದ ಅಕ್ಟೋಬರ್ 5ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಮಹೋತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುವುದು ಎಂದು ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದರು.
ಕಳೆದೆರಡು ವರ್ಷ ಕರೊನಾ ಕಾರಣದಿಂದ ಅತ್ಯಂತ ಸರಳವಾಗಿ ದಸರಾ ಹಬ್ಬ ಆಚರಣೆ ಮಾಡಲಾಗಿತ್ತು. ಆದರೆ ಈ ಬಾರಿ ಸಾಕಷ್ಟು ಸಿದ್ಧತೆಗಳೊಂದಿಗೆ ವೈಭವದಿಂದ ದಸರಾ ಮಹೋತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ 14 ಸಮಿತಿಗಳನ್ನು ರಚನೆ ಮಾಡಿದ್ದು ವಿಶಿಷ್ಠವಾಗಿ ಆಚರಿಸಲಾಗುವುದು ಎಂದು ಮಹಾನಗರ ಪಾಲಿಕೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೆ.26ರಂದು ಬೆಳಗ್ಗೆ 11ಕ್ಕೆ ಕೋಟೆ ರಸ್ತೆಯ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಲಿದ್ದು ಪದ್ಮಶ್ರೀ ಪುರಸ್ಕೃತೆ, ಜಾನಪದ ಕಲಾವಿದೆ ತುಳಸಿಗೌಡ ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುವರು ಎಂದರು.
ಕೊನೆ ದಿನವಾದ ಅ.5ರಂದು ಮಧ್ಯಾಹ್ನ 2.30ಕ್ಕೆ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರೊ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದೆ. ಶಿವಪ್ಪ ನಾಯಕ ಅರಮನೆ ಆವರಣದಿಂದ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಅಂಬಾರಿ ಮೆರವಣಿಗೆ ಚಾಲನೆ ನೀಡಲಾಗುವುದು. ಸಕ್ರೆಬೈಲಿನ 3 ಆನೆಗಳು ಪಾಲ್ಗೊಳ್ಳುವವು. ಅಂದು ಸಂಜೆ 6.30ಕ್ಕೆ ಪ್ರೀಡಂಪಾರ್ಕ್‌ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮದ ನಂತರ ಆಕರ್ಷಕ ಪಟಾಕಿ ಹಾಗೂ ರಾವಣನ ದಹನ ನಡೆಯುವುದಾಗಿ ತಿಳಿಸಿದರು.
ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ, ಸುವರ್ಣಾ ಶಂಕರ್, ಅನಿತಾ ರವಿಶಂಕರ್, ಧೀರರಾಜ್ ಹೊನ್ನವಿಲೆ, ಎಚ್.ಸಿ.ಯೋಗೇಶ್, ಎಸ್.ಜಿ.ರಾಜು, ಲತಾ ಗಣೇಶ್, ಶಾಮೀರ್ ಖಾನ್, ಆಶಾ ಚಂದ್ರಪ್ಪ, ಮಂಜುಳಾ ಶಿವಣ್ಣ, ಮೀನಾ ಗೋವಿಂದರಾಜ್, ಆಯುಕ್ತ ಕೆ.ಮಾಯಣ್ಣಗೌಡ ಸುದ್ದಿಗೋಷ್ಠಿಯಲ್ಲಿದ್ದರು.