ವಾಹನ ಜಖಂಗೊಳಿಸಿದ್ದ ಮತ್ತಿಬ್ಬರ ಬಂಧನ

21 smg 6
Published on

ಶಿವಮೊಗ್ಗ: ನಗರದ ಸಿದ್ದಯ್ಯ ರಸ್ತೆ, ಭರ್ಮಪ್ಪನಗರದಲ್ಲಿ 18 ವಾಹನ ಜಖಂಗೊಳಿಸಿದ್ದ ಪ್ರಕರಣದಲ್ಲಿ ಮತ್ತಿಬ್ಬರನ್ನು ದೊಡ್ಡಪೇಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಸೂಳೆಬೈಲ್‌ನ ಮಹಮ್ಮದ್ ಸಲೀಂ(30) ಮತ್ತು ಭರ್ಮಪ್ಪನಗರದ ಅಕ್ರಿ ಖಾನ್ (32) ಬಂಧಿತರು. ಇವರು ಬುಧವಾರ ತಡರಾತ್ರಿ 12 ಕಾರು, 5 ಬೈಕ್ ಮತ್ತು ಒಂದು ಆಟೋವನ್ನು ಕಬ್ಬಿಣದ ರಾಡ್‌ಗಳಿಂದ ಜಖಂಗೊಳಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವೇ ಕೆಆರ್‌ಪುರಂನ ಶಾಹಿಲ್ ಖಾನ್ ಮತ್ತು ಭರ್ಮಪ್ಪನಗರದ ಮನ್ಸೂರ್ ಅಹಮ್ಮದ್ ಎಂಬುವರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಈ ವೇಳೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದಾಗ ಚಾಕು ತೋರಿಸಿ ಬೆದರಿಸಿ ಅಶಾಂತಿ ಉಂಟು ಮಾಡಿದ್ದರು.

ಬಂಧಿತರಲ್ಲಿ ಮಹಮ್ಮದ್ ಸಲೀಂ ಹಾಗೂ ಅಕ್ರಿ ಖಾನ್ ಅಪರಾಧ ಹಿನ್ನೆಲೆ ಹೊಂದಿದ್ದು ಕಾನೂನು ಸುವ್ಯವಸ್ಥೆ ಹಡಗೆಡಿಸಲು ಉದ್ದೇಶ ಪೂರ್ವಕವಾಗಿ ಕೃತ್ಯ ಎಸಗಿದ್ದರು ಎಂಬುದು ದೃಢಪಟ್ಟಿದೆ. ಕೃತ್ಯದಲ್ಲಿ ಇನ್ನು ಕೆಲವರು ಭಾಗಿಯಾಗಿರುವ ಮತ್ತು ಆರೋಪಿತರು ಬೇರೆ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಬಗ್ಗೆ ತನಿಖೆ ಮುಂದುವರಿಸಲಾಗಿದೆ. ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net