ಸಾರ್ವಜನಿಕರನ್ನು ನೋಡಿ ಕಾರು ನಿಲ್ಲಿಸಿದ ಸಿಎಂ ಯಡಿಯೂರಪ್ಪ

29-Shivamogga gramantara sarvajanikara cm beti-manavi
Published on

ಶಿವಮೊಗ್ಗ: ಮುಖ್ಯಮಂತ್ರಿಯವರಿಗೆ ಮನವಿ-ಅಹವಾಲುಗಳನ್ನು ಸಲ್ಲಿಸಲು ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಮುಂದೆ ಬರುವುದು ಸಾಮಾನ್ಯ. ಆದರೆ ಶಿವಮೊಗ್ಗದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಕಾರಿನಿಂದ ಇಳಿದು ಜನರತ್ತ ಬಂದು ಅಹವಾಲು ಸ್ವೀಕರಿಸಿದರು.


ಸಹ್ಯಾದ್ರಿ ಕಾಲೇಜಿನಲ್ಲಿದ್ದ ಸಮಾರಂಭಕ್ಕೆ ಶಿವಮೊಗ್ಗಕ್ಕೆ ಬಂದಿದ್ದ ಸಿಎಂ ಭಾನುವಾರ ಬೆಳಗ್ಗೆ ಹೆಲಿಪ್ಯಾಡ್‌ನಿಂದ ಹೊರಹೋಗುತ್ತಿದ್ದರು. ಪ್ರವಾಸಿ ಮಂದಿರ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರನ್ನು ನೋಡಿ ತಕ್ಷಣವೇ ಕಾರು ನಿಲ್ಲಿಸಿ ಜನರ ಬಳಿಗೆ ಬಂದು ಮನವಿ ಸ್ವೀಕರಿಸಿದರು.
ಜತೆಗಿದ್ದ ಸಿಎಂ ಪುತ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಯಡಿಯೂರಪ್ಪ ಅವರಿಗೆ ಮನವಿಯಲ್ಲಿರುವ ಬೇಡಿಕೆಗಳನ್ನು ವಿವರಿಸಿದರು. ಆ ನಂತರ ನೋಡೋಣವೆಂದು ಮುಂದೆ ಸಾಗಿದರು.


ಅಷ್ಟಕ್ಕೂ ಮನವಿಯಲ್ಲಿ ಏನಿತ್ತು ?

ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ ತಾಲೂಕನ್ನಾಗಿ ವಿಭಜಿಸುವಂತೆ ಶಾಸಕ ಕೆ.ಬಿ.ಅಶೋಕನಾಯ್ಕ ನೇತೃತ್ವದಲ್ಲಿ ಸಿಎಂಗೆ ಮನವಿ ಸಲ್ಲಿಸಲಾಯಿತು. ಈಗಾಗಲೇ ಹುಬ್ಬಳ್ಳಿ ನಗರ ಮತ್ತು ಹುಬ್ಬಳ್ಳಿ ಗ್ರಾಮಾಂತರ ತಾಲೂಕು ಎಂದು ವಿಭಜಿಸಲಾಗಿದೆ. ಹಾಸನದಲ್ಲಿ ಹಾಸನ ನಗರ ಮತ್ತು ಶಾಂತಿಗ್ರಾಮವೆಂದು ವಿಭಜಿಸಲಾಗಿದೆ. ಹೊನ್ನಾಳಿಯಲ್ಲಿ ನ್ಯಾಮತಿ ರಚಿಸಲಾಗಿದೆ. ಅದರಂತೆ ಶಿವಮೊಗ್ಗ ಮತ್ತು ಭದ್ರಾವತಿ ಹೊಂದಿಕೊಂಡ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ತಾಲೂಕು ಮಾನ್ಯತೆ ನೀಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net