

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸುವ ಸಂದರ್ಭದಲ್ಲಿ 3,337 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಏರ್‌ಪೋರ್ಟ್ ಸೇರಿದಂತೆ ಒಟ್ಟು 1,789 ಕೋಟಿ ರೂ. ಮೊತ್ತದ 7 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಉದ್ಘಾಟನೆ ಹಾಗೂ ಶಂಕುಸ್ಥಾಪನೆಯಾಗಲಿರುವ ಕಾಮಗಾರಿಗಳ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಶೀಘ್ರದಲ್ಲೇ ಪ್ರಧಾನಿ ಕಾರ್ಯಾಲಯಕ್ಕೆ ಕಳುಹಿಸಲಿದೆ. ಈಗಿರುವ ಮಾಹಿತಿಯಂತೆ ಮಧ್ಯಾಹ್ನ 1.30ರ ಸುಮಾರಿಗೆ ಪ್ರಧಾನಿ ಆಗಮಿಸಲಿದ್ದಾರೆ. ಸಂಜೆ 4.30ರೊಳಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದುವರೆಗೆ ವಿಮಾನ ನಿಲ್ದಾಣಕ್ಕೆ ವಿವಿಧ ತಜ್ಞರ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿವೆ. ಕಳೆದ ವಾರ ಆಗಮಿಸಿದ್ದ ಡಿಜಿಸಿಎ ತಂಡ ಸುಮಾರು 70 ಅಂಶಗಳ ಅನುಷ್ಟಾನದ ಬಗ್ಗೆ ಸೂಚನೆ ನೀಡಲಾಗಿತ್ತು. ಅದೆಲ್ಲವನ್ನೂ ಪೂರೈಸಿದ್ದೇವೆ. ಈಗ ಮತ್ತೆ ಅದೇ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಇನ್ನು ಒಂದೆರಡು ದಿನಗಳಲ್ಲಿ ಉದ್ಘಾಟನೆಗೆ ಹಸಿರು ನಿಶಾನೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇದೇ ವಾರ ಇಂಡಿಗೋ ಹಾಗೂ ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯೊಂದಿಗೆ ಅಧಿಕಾರಿಗಳು ಮಾತನಾಡಿದ್ದಾರೆ. ಈಗಾಗಲೇ ಶಿವಮೊಗ್ಗ-ಮುಂಬೈ ನಡುವೆ ಪ್ರತಿ ದಿನ ಎಷ್ಟು ಮಂದಿ ಪ್ರಯಾಣಿಸುತ್ತಾರೆ? ಅಲ್ಲಿಗೆ ವಿಮಾನ ಸಂಚಾರ ಆರಂಭಿಸಬಹುದೇ? ಎಂಬ ಸಮೀಕ್ಷೆ ನಡೆಸಲಿದೆ. ಶಿವಮೊಗ್ಗದಿಂದ ಸಂಚರಿಸಲಿರುವ ವಿಮಾನಗಳ ಬಗ್ಗೆ ಫೆ.27ರಂದು ಪ್ರಧಾನಿಯವರೇ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.