ಕಾರ್ಮಿಕರ ಮನೆಗೆ ತಲುಪಲಿದೆ ಆಹಾರ ಕಿಟ್: ಸಚಿವ ಈಶ್ವರಪ್ಪ

IMG_5458
Published on

ಶಿವಮೊಗ್ಗ: ಕರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಆಹಾರ ಕಿಟ್‌ನ್ನು ಕಾರ್ಮಿಕರ ಮನೆಗೆ ತಲುಪಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಮಹಾನಗರ ಪಾಲಿಕೆಯಲ್ಲಿ ಸೋಮವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕರೊನಾದಿಂದ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಫುಡ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ 10,300 ನೊಂದಾಯಿತ ಕಾರ್ಮಿಕರಿದ್ದು ಅವರ ಮನೆಗೆ ತೆರಳಿ ಕಿಟ್ ವಿತರಣೆ ಮಾಡಲಾಗುವುದು. ಪಾಲಿಕೆಯ 35 ವಾರ್ಡ್‌ಗಳಲ್ಲೂ ಕಟ್ಟಡ ಕಾರ್ಮಿಕರಿಗೆ ಕಿಟ್ ವಿತರಣೆ ಆರಂಭಿಸಲಾಗಿದೆ. ಗೊಂದಲಕ್ಕೆ ಆಸ್ಪದವಿಲ್ಲದೆ ಆಧಾರ್ ಮತ್ತು ಲೇಬರ್ ಕಾರ್ಡ್‌ಗಳನ್ನು ಪರಿಶೀಲಿಸಿ ಟೋಕನ್ ನೀಡಿ ಮನೆಗೆ ಕಿಟ್ ತಲುಪಿಸಲಾಗುವುದು ಎಂದು ಹೇಳಿದರು.

ಕರೊನಾ, ಲಾಕ್‌ಡೌನ್ ಕಾರಣದಿಂದ ಯಾರೂ ಹಸಿವಿನಿಂದ ಬಳಲಬಾರದು ಎಂಬ ಕಾರಣಕ್ಕೆ ಕಟ್ಟಡ ಕಾರ್ಮಿಕರಿಗೆ 3 ಸಾವಿರ ರೂ. ನೆರವು ನೀಡಲಾಗಿದೆ. ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. ಇದೀಗ ನೋಂದಾಯಿತ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆಯನ್ನೂ ಮಾಡಲಾಗುತ್ತಿದೆ ಎಂದರು.

ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಸದಸ್ಯ ಎಸ್.ಜ್ಞಾನೇಶ್ವರ್, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಕಾರ್ಮಿಕ ಇಲಾಖೆ ಅಧಿಕಾರಿ ವಿಶ್ವನಾಥ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net